Advertisement

ಇಂಡಿಯಾ ಬುಕ್ ಆಫ್ ರೆಕಾರ್ಡ್ ನಲ್ಲಿ‘ವಿಶ್ವಶಾಂತಿ ಬಾಲೆ’ ತುಳಸಿ ಹೆಗಡೆ

03:51 PM Jun 06, 2022 | Team Udayavani |

ಶಿರಸಿ: ಕಳೆದ ಏಳು ವರ್ಷಗಳಿಂದ ನಿರಂತರ ವಿಶ್ವಶಾಂತಿ ಸಂದೇಶ ಸಾರುವ ಯಕ್ಷನೃತ್ಯ ರೂಪಕದ ಬಾಲೆ ತುಳಸಿ ಹೆಗಡೆ ಅವಳ ಸಾಧನೆ ಇದೀಗ ದೇಶದ ಪ್ರತಿಷ್ಠಿತ ಇಂಡಿಯಾ ಬುಕ್ ರೆಕಾರ್ಡ್ ನಲ್ಲಿಯೂ ದಾಖಲಾಗಿದೆ. ವಿಶ್ವಶಾಂತಿ ಸಂದೇಶ ಸಾರುವ ಕಲಾ ಪ್ರದರ್ಶನ ನೀಡುವ ದೇಶದ ಏಕಮೇವ ಬಾಲೆ ಎಂಬುದು ಈಗ ಅಧಿಕೃತವಾಗಿ ಋಜುವಾತಾಗಿದೆ.

Advertisement

ಅತ್ಯಂತ ಕಿರಿಯ ವಯಸ್ಸಿನಲ್ಲೇ ತುಳಸಿ ಹೆಗಡೆಯು ಒಂದು ಗಂಟೆಗೂ ಅಧಿಕ ಕಾಲದ ಯಕ್ಷನೃತ್ಯ ರೂಪಕವನ್ನು ಪ್ರಸ್ತುತಗೊಳಿಸುತ್ತಿದ್ದಾಳೆ. 13 ರ ತುಳಸಿ ಕಳೆದ ಏಳು ವರ್ಷಗಳಿಂದ ಸತತ ವಿವಿಧ ಪೌರಾಣಿಕ ಕಥೆ ಒಳಗೊಂಡ ವಿಶ್ವಶಾಂತಿ ಸರಣಿ ಪ್ರಸ್ತುತಗೊಳಿಸುವ ಬಾಲೆ ಎಂದೇ ಪ್ರಸಿದ್ಧಿ ಪಡೆದಿದ್ದಾಳೆ. ತುಳಸಿ ಹೆಗಡೆ ಅವಳ ಈ ವಿಶಿಷ್ಟ ಸಾಧನೆಯನ್ನು ಅತ್ಯಂತ ಕಿರಿಯ ವಯಸ್ಸಿನಿಂದ ವಿಶ್ವಶಾಂತಿ ಸರಣಿ ಸಂದೇಶ ಸಾರುವ ಬಾಲ ಯಕ್ಷಗಾನ ಕಲಾವಿದೆ ಎಂದೇ ಇಂಡಿಯಾ ಬುಕ್ ಆಫ್ ರೆಕಾರ್ಡ್ ನೀಡುವ ಪ್ರಮಾಣ ಪತ್ರದಲ್ಲೂ ಉಲ್ಲೇಖಿಸಿದೆ.

ಕಳೆದ ಏ.೨೭ರಂದು ದಾಖಲೀಕರಿಸಿಕೊಂಡ ಇಂಡಿಯಾ ಬುಕ್ ಆಫ್ ರೆಕಾರ್ಡ ಸಂಸ್ಥೆ ತುಳಸಿ ಯಕ್ಷಗಾನದ ಕಲಾ ಮಾಧ್ಯಮದ ಮೂಲಕ ಜಗತ್ತಿನ ಯೋಗಕ್ಷೇಮದ ಪ್ರಸ್ತುತಿಗಾಗಿ ಈ ರೂಪಕವನ್ನು ಪ್ರದರ್ಶಿಸುತ್ತಿದ್ದಾಳೆ ಎಂದೂ ಹೆಮ್ಮೆ ವ್ಯಕ್ತಪಡಿಸಿದೆ. ತುಳಸಿ ಮುಮ್ಮೇಳದ ಏಕವ್ಯಕ್ತಿ ರೂಪಕ ಇದಾಗಿದ್ದು, ಹಿಮ್ಮೇಳದಲ್ಲಿ ಪ್ರಸಿದ್ಧ ಕಲಾವಿದರ, ನಿರ್ದೇಶಕರ, ಸಾಹಿತಿಗಳ, ಪರಿಣಿತರ ಒಂಬತ್ತು ಜನರ ತಂಡ ಕೆಲಸ ಮಾಡುತ್ತಿದೆ. ಒಂದು ಗಂಟೆಗೂ ಮಿಕ್ಕಿದ ವಿಶ್ವಶಾಂತಿ ಸಂದೇಶ, ವಿಶ್ವಶಂಕರಾಕ್ಷರ, ಶ್ರೀಕೃಷ್ಣಂ ವಂದೇ, ವಂದೇ ಪರಮಾನಂದಂ, ಪಂಚಪಾವನ ಕಥಾ, ಪರಿವರ್ತನೆ ಜಗದ ನಿಯಮ, ವಂಶೀವಿಲಾಸ ಯಕ್ಷನೃತ್ಯ ರೂಪಕಗಳನ್ನು ಈಕೆ ಪ್ರಸ್ತುತಗೊಳಿಸುತ್ತಿದ್ದಾಳೆ.

ಯಕ್ಷಗಾನದ ನೃತ್ಯ ಭಾಷೆ ಬಳಸಿಕೊಂಡು ರೂಪಕ ಪ್ರದರ್ಶಿಸುವ ಈಕೆ ಸಾಧನೆ ಇಂಡಿಯಾ ಬುಕ್ ಆಫ್ ರೆಕಾರ್ಡ್ ನಲ್ಲಿ ದಾಖಲಾಗಿದ್ದು, ಯಕ್ಷಗಾನದ ಇತಿಹಾಸದಲ್ಲೂ ಪ್ರಥಮದ್ದಾಗಿದೆ.

ಶಿರಸಿಯ ಮಾರಿಕಾಂಬಾ ಸರಕಾರಿ ಪ್ರೌಢ ಶಾಲೆಯಲ್ಲಿ ಎಂಟನೇ ತರಗತಿಯಲ್ಲಿ ಓದುತ್ತಿರುವ ತುಳಸಿ ಹೆಗಡೆ ಅವಳ ಸಾಧನೆಯನ್ನು ಇಂಟರನ್ಯಾಷನಲ್ ಬುಕ್ ಆಫ್ ರೆಕಾರ್ಡ್ ಕೂಡ ದಾಖಲಿಸಿದೆ. ಇತ್ತೀಚೆಗಷ್ಟೇ ಪೂನಾದ ಸಂಸ್ಥೆಯೊಂದು ನೀಡುವ ಇಂಡಿಯನ್ ಸ್ಟಾರ್ ಐಕಾನ್ ಅವಾರ್ಡ್ ಕೂಡ ಬಂದಿದೆ ಎಂಬುದೂ ಉಲ್ಲೇಖನೀಯವಾಗಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next