ಮುಂಬಯಿ, ನ. 23: ಮೀರಾರೋಡ್ ಪೂರ್ವದ ಗೀತಾ ನಗರದಲ್ಲಿರುವ ಪ್ರತಿಷ್ಠಿತ ಪಲಿಮಾರು ಮಠದ ಶ್ರೀ ಬಾಲಾಜಿ ಸನ್ನಿಧಿಯ ಅವರಣದಲ್ಲಿ ತುಳಸಿ ಪೂಜೆಯು ದೀಪಾವಳಿ ಬಲಿಪಾಡ್ಯಮಿಯಂದು ಆರಂಭಗೊಂಡಿದ್ದು, ಪಲಿಮಾರು ಮಠದ ಟ್ರಸ್ಟಿ ಸಚ್ಚಿದಾನಂದ ರಾವ್ ನೇತೃತ್ವದಲ್ಲಿ ನ. 27ರ ಉತ್ಥಾನ ದ್ವಾದಶಿವರೆಗೆ 12 ದಿನಗಳ ಕಾಲ ತುಳಸಿ ಸಂಕೀರ್ತನೆ ವಿವಿಧ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ.
ಸಂಜೆಯಾಗುತ್ತಿದ್ದಂತೆ ಶ್ರೀ ಬಾಲಾಜಿ ಮಂದಿರದ ಸುತ್ತಮುತ್ತಲಿನ ಪ್ರಾಂಗಣದಲ್ಲಿ ಸಾಲು ಸಾಲಿನಲ್ಲಿ ಪಜ್ವಲಿಸುವ ಸ್ವದೇಶಿ ನಿರ್ಮಿತ ಹಣತೆ ದೀಪಗಳ ಸೊಬಗು, ರಂಗು ರಂಗಿನ ಗೂಡುದೀಪ, ಸನ್ನಿಧಿಯಲ್ಲಿ ಮೊಳಗುವ ಶಂಖನಾದ, ಗಂಟೆಗಳ ಧ್ವನಿ ಆತ್ಮಸ್ಥೆರ್ಯವನ್ನು ಹೆಚ್ಚುಸುತ್ತಿದೆ. ಕಾರ್ತಿಕ ಮಾಸದಲ್ಲಿ ಆಚರಿಸುವಂತಹ ವಿಶೇಷ ಆಚರಣೆಯಲ್ಲಿ ತುಳಸಿ ಪೂಜೆಯು ಅತ್ಯಂತ ಪ್ರಧಾನವಾಗಿದ್ದು, ಮಠದ ಅವರಣದಲ್ಲಿರುವ ತುಳಸಿ ಕಟ್ಟೆಯನ್ನು ರಂಗೋಲಿಯಿಂದ ಶೃಂಗರಿಸಿ ಆರಾಧಿಸಲಾಗುತ್ತಿದೆ.
ಟ್ರಸ್ಟಿ ಸಚ್ಚಿದಾನಂದ ರಾವ್ ತುಳಸಿ ಮಹತ್ವವನ್ನು ವಿವರಿಸಿ, ಲಕ್ಷ್ಮೀ ದೇವಿಯ ಪ್ರತಿರೂಪಳಾದ ತುಳಸಿದೇವಿ ಮಾತೆಯನ್ನು ಸಂಕೀರ್ತನೆಯೊಂದಿಗೆ ಭಜಿಸಲಾಗುತ್ತಿದೆ. ಧನಾತ್ಮಕ ಶಕ್ತಿ ಮತ್ತು ಸಮೃದ್ಧಿಗಾಗಿ ತುಳಸಿ ಗಿಡಕ್ಕೆ ಮುಂಜಾನೆ ನೀರೆರೆದರೆ ಮನೆಯಲ್ಲಿ ಸುಖ, ಶಾಂತಿ ನೆಲೆಸಿರುತ್ತದೆ ಎಂಬ ನಂಬಿಕೆ ಇದೆ. ಧಾರ್ಮಿಕವಾಗಿಯೂ ಅತ್ಯಂತ ಪವಿತ್ರ ಸ್ಥಾನ ಹೊಂದಿರುವ ತುಳಸಿ ಔಷಧೀಯ ಗುಣವನ್ನು ಹೊಂದಿದೆ. ತುಳಸಿ ದಳವನ್ನು ಬಳಸದೆ ಪೂಜಾ ಕಾರ್ಯಗಳು ಸಂಪನ್ನವಾಗುವುದಿಲ್ಲ. ಒಂದು ಹನಿ ತುಳಸಿ ನೀರು ಪವಿತ್ರ ಶಕ್ತಿಯನ್ನು ಒಳಗೊಂಡಿರುತ್ತದೆ. ಭಗವಂತನಿಗೆ ಪ್ರೀಯವಾದ ದ್ರವ್ಯ ತುಳಸಿಯಾಗಿದೆ ಎಂದರು.
ಪಲಿಮಾರು ಮಠದ ಟ್ರಸ್ಟಿ ವಾಸುದೇವ ಎಸ್. ಉಪಾಧ್ಯಾಯ ಅವರ ಪೌರೋಹಿತ್ಯ ದಲ್ಲಿ ರಾತ್ರಿ ತುಳಸಿ ಪೂಜೆ, ತುಳಸಿ ಸಂಕೀರ್ತನೆ ನೆರವೇರಿತು. ಪಲಿಮಾರು ಮಠದ ಶ್ರೀ ವಿದ್ಯಾಧೀಶತೀರ್ಥ ಶ್ರೀಪಾದರ ಇಚ್ಛೆ, ಸಂಕಲ್ಪ ಹಾಗೂ ಮಾರ್ಗದರ್ಶನದಂತೆ ರಾತ್ರಿ ತುಳಸಿ ಪೂಜೆ, ತುಳಸಿ ಸಂಕೀರ್ತನೆ ಕುಣಿತ, ಮಹಾ ಮಂಗಳಾರತಿ, ಪ್ರಸಾದ ವಿತರಣೆ ಇನ್ನಿತರ ಪೂಜಾಧಿಗಳು ನೆರವೇರಿದವು.
ಇದೇ ಸಂದರ್ಭದಲ್ಲಿ ಶ್ರೀ ಬಾಲಾಜಿ ಸನ್ನಿಧಿಯ ಮಹಿಳಾ ಸದಸ್ಯೆಯರಿಂದ ಭಜನೆ, ರಾಮರಾಜ್ ದ್ವಿವೇದಿ ಅವರಿಂದ ಪ್ರವಚನ ನಡೆಯಿತು. ಸಂಕೀರ್ತನೆಯಲ್ಲಿ ಕುಮಾರ್ ಸ್ವಾಮಿ ಭಟ್, ರಾಘವೇಂದ್ರ ಆಚಾರ್ಯ, ಪ್ರಶಾಂತ್ ಭಟ್, ಶ್ರೀಶ ಉಡುಪ, ಶಂಕರ್ ಗುರು ಭಟ್, ಗುರುಶಂಕರ್ ಭಟ್, ರಾಮ ರಾಜ್ ದ್ವಿವೇದಿ, ವೃಷಭ ಭಟ್, ಗೋಪಾಲ ಭಟ್, ಕೃಷ್ಣಮೂರ್ತಿ ಉಪಾಧ್ಯಾಯ ಹಾಗೂ ಶ್ರೀ ಬಾಲಾಜಿ ಭಜನ ಮಂಡಳಿಯ ಸದಸ್ಯರು, ಸದಸ್ಯೆಯರು, ತುಳು-ಕನ್ನಡಿಗರು, ಭಕ್ತರು ಪಾಲ್ಗೊಂಡಿದ್ದರು. ಸಾಮಾಜಿಕ ಅಂತರ ಹಾಗೂ ಸರಕಾರದ ಕೋವಿಡ್ ಮಾರ್ಗ ಸೂಚಿಗಳಿಗೆ ಅನುಗುಣವಾಗಿ ಭಕ್ತರು ದೇವರ ದರ್ಶನ ಪಡೆದರು.