Advertisement

ಅನಧಿಕೃತವಾಗಿ ಗೈರಾದ ವೈದ್ಯರ ಮೇಲೆ ವಜಾ ತೂಗುಗತ್ತಿ!

03:45 AM Jan 25, 2017 | Team Udayavani |

ಬೆಂಗಳೂರು: ಸರ್ಕಾರದ ನಿಯಮಾವಳಿಗಳನ್ನು ಲೆಕ್ಕಿಸದೆ 6-7 ವರ್ಷಗಳಿಂದ ಸರ್ಕಾರಿ ಸೇವೆಗೆ ಗೈರು ಹಾಜರಾಗಿರುವ 103 ವೈದ್ಯಾಧಿಕಾರಿಗಳ ವಿರುದ್ದ ಶಿಸ್ತು ಕ್ರಮಕ್ಕೆ ಆರೋಗ್ಯ ಇಲಾಖೆ ಮುಂದಾಗಿದೆ. ಕರ್ತವ್ಯ ಲೋಪ ಎಸಗಿದ ವೈದ್ಯರ ವಿರುದ್ದ ವಜಾ “ಅಸ್ತ್ರ’ ಪ್ರಯೋಗಿಸಲು ವೇದಿಕೆ ಸಿದ್ದಗೊಂಡಿದೆ.

Advertisement

ಹಿರಿಯ ಸರ್ಜನ್‌ಗಳು, ಸರ್ಜನ್‌ಗಳು, ವೈದ್ಯಾಧಿಕಾರಿಗಳು ಉದ್ದೇಶಪೂರ್ವಕವಾಗಿ ಯಾವುದೇ ಮಾಹಿತಿ ನೀಡದೆ ಅನಧಿಕೃತವಾಗಿ
ಗೈರು ಹಾಜರಾಗಿರುವುದನ್ನು ಪತ್ತೆಹಚ್ಚಿರುವ ಇಲಾಖೆ, ಇದನ್ನು ಗಂಭೀರವಾಗಿ ಪರಿಗಣಿಸಿದೆ. ಕರ್ತವ್ಯ ನಿರ್ವಹಣೆಯಿಂದ
ನಾಪತ್ತೆಯಾಗಿರುವವರು ಜನವರಿ ಅಂತ್ಯದೊಳಗೆ ಸೇವೆಗೆ ಹಾಜರಾಗದಿದ್ದರೆ ಸರ್ಕಾರಿ ಸೇವೆಯಿಂದಲೇ ಮುಕ್ತಿಗೊಳಿಸಲು ಇಲಾಖೆ ಸಜ್ಜಾಗಿದೆ.

ಸಾಮಾನ್ಯ ಜನರು ಆರೋಗ್ಯ ಸೇವೆಗೆ ಹೆಚ್ಚಾಗಿ ಸರ್ಕಾರಿ ಆಸ್ಪತ್ರೆಗಳನ್ನೇ ಅವಲಂಬಿಸಿದ್ದಾರೆ. ಅದರಲ್ಲೂ ಗ್ರಾಮೀಣ ಪ್ರದೇಶಗಳಲ್ಲಿ ಬಹುಪಾಲು ಜನ ಸರ್ಕಾರಿ ಆಸ್ಪತ್ರೆಗಳಲ್ಲೇ ಚಿಕಿತ್ಸೆ ಪಡೆಯುತ್ತಾರೆ. ಆದರೆ, ಸರ್ಕಾರಿ ಆಸ್ಪತ್ರೆಗಳಲ್ಲಿ ತಜ್ಞರು, ವೈದ್ಯರು ಹಾಗೂ ಅರೆವೈದ್ಯಕೀಯ ಸಿಬ್ಬಂದಿ, ಅಗತ್ಯ ಉಪಕರಣಗಳ ಕೊರತೆಯಿಂದ ಗುಣಮಟ್ಟದ ಸೇವೆ ಸಿಗುತ್ತಿಲ್ಲ ಎಂಬ ಆರೋಪವಿದೆ. ಹಿರಿಯ ತಜ್ಞರು, ತಜ್ಞರು, ಸಹಾಯಕ ತಜ್ಞರು, ಅರಿವಳಿಕೆ ತಜ್ಞರು, ಸ್ತ್ರೀರೋಗ ತಜ್ಞರು, ಪ್ರಸೂತಿ ತಜ್ಞರು, ಮೂಳೆ ತಜ್ಞರು, ಕೀಲುಮೂಳೆ ತಜ್ಞರು, ಹಿರಿಯ ಮಕ್ಕಳ ತಜ್ಞರು, ವೈದ್ಯಾಧಿಕಾರಿಗಳು, ದಂತ ವೈದ್ಯರು, ನೇತ್ರ ತಜ್ಞರು, ಆರೋಗ್ಯಾಧಿಕಾರಿಗಳು, ಮಹಿಳಾ
ವೈದ್ಯಾಧಿಕಾರಿಗಳು ಸೇರಿದಂತೆ ಒಟ್ಟು 103 ಮಂದಿ ಅನಧಿಕೃತ ಗೈರಾಗಿದ್ದಾರೆ.

ಜ.31ರವರೆಗೆ ಗಡುವು: ಈ ಹಿನ್ನೆಲೆಯಲ್ಲಿ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಇಲಾಖೆ ಇದೀಗ ಅವರ ವಿರುದ್ದ ಗದಾ
ಪ್ರಹಾರಕ್ಕೆ ಮುಂದಾಗಿದೆ. ಅನಧಿಕೃತವಾಗಿ ಗೈರಾದವರು ವರದಿ ಮಾಡಿಕೊಳ್ಳಲು ಜ.31ರವರೆಗೆ ಗಡುವು ನೀಡಲಾಗಿದೆ. ತಮಗೆ
ನಿಯೋಜಿತ ಸ್ಥಳದಲ್ಲೇ ವರದಿ ಮಾಡಿಕೊಳ್ಳಲು ಅವಕಾಶ ನೀಡಿದರೆ ಮತ್ತೆ ಅಕ್ರಮ ನಡೆಯುವ ಸಾಧ್ಯತೆ ಹಿನ್ನೆಲೆಯಲ್ಲಿ ನಿರ್ದೇಶನಾಲಯದ ಆಯುಕ್ತರ ಕಚೇರಿಯಲ್ಲೇ ವರದಿ ಮಾಡಿಕೊಳ್ಳಲು ಸೂಚಿಸಲಾಗಿದೆ.  

ಅತಂತ್ರ ಸ್ಥಿತಿ ನಿವಾರಣೆಗೆ ದಿಟ್ಟ ಕ್ರಮ: ಸಕಾರಣ ನೀಡಿ ಸೂಕ್ತ ಪ್ರಕ್ರಿಯೆಯಡಿ ಅನುಮತಿ ಪಡೆದು ಸುದೀರ್ಘ‌ ರಜೆ ಪಡೆಯಲು ಅವಕಾಶವಿದೆ. ಆದರೆ, ಯಾವುದೇ ಮಾಹಿತಿ ನೀಡದೆ, ಪೂರ್ವಾನುಮತಿ ಪಡೆಯದೆ ಗೈರಾಗುವುದರಿಂದ ಆರೋಗ್ಯ ಸೇವೆಯಲ್ಲಿ ವ್ಯತ್ಯಯವಾಗುತ್ತದೆ. ಸರ್ಕಾರಿ ಸೇವೆ ಬೇಡವೆನಿಸಿದರೆ ರಾಜಿನಾಮೆ ನೀಡಬಹುದು. ಆಗ ಹುದ್ದೆ ಭರ್ತಿಯಾಗಲಿದೆ. ಆದರೆ, ಸೇವೆಯಲ್ಲಿದ್ದರೂ ಪ್ರಯೋಜನವಿಲ್ಲದ ಕಾರಣ ಜನರಿಗೆ ತೊಂದರೆಯಾಗುವುದರಿಂದ ದಿಟ್ಟ ಕ್ರಮಕ್ಕೆ ಇಲಾಖೆ ಮುಂದಾಗಿದೆ ಎಂದು
ಮೂಲಗಳು ತಿಳಿಸಿವೆ.

Advertisement

ಇನ್ನಷ್ಟು ಮಂದಿಗೂ ತಟ್ಟಲಿದೆ ಬಿಸಿ
ಈಗಾಗಲೇ 103 ವೈದ್ಯರ ವಿರುದ್ದ ಕ್ರಮಕ್ಕೆ ಮುಂದಾಗಿರುವ ಇಲಾಖೆ, 2 ನೇ ಹಂತದಲ್ಲಿ ಅನಧಿಕೃತವಾಗಿ ಗೈರಾಗಿರುವ ನೂರಾರು ವೈದ್ಯರ ವಿರುದ್ದ ಕಠಿಣ ಕ್ರಮ ಜರುಗಿಸಲು ವ್ಯವಸ್ಥೆ ಮಾಡಿಕೊಳ್ಳುತ್ತಿದೆ. ಹಾಗೆಯೇ 4 ತಿಂಗಳಿಗಿಂತ ಹೆಚ್ಚು ಕಾಲ ಗೈರಾದ ಅರೆವೈದ್ಯಕೀಯ ಮತ್ತು ಇತರೆ ಸಿಬ್ಬಂದಿ ವಿರುದ್ದ ಕ್ರಮಕ್ಕೂ ಸಿದಟಛಿತೆ ನಡೆದಿದೆ. ಸುಮಾರು 200 ಶುಶ್ರೂಷಕರು, 
ಫಾರ್ಮಸಿಸ್ಟ್‌ಗಳು, ಗುಮಾಸ್ತರು, ಚಾಲಕರು, “ಡಿ’ ಗ್ರೂಪ್‌ ನೌಕರರ ವಿರುದ್ದ ಶಿಸ್ತು ಕ್ರಮಕ್ಕೂ ಅಂತಿಮ ಹಂತದ ಪ್ರಕ್ರಿಯೆ ನಡೆದಿದೆ ಎಂದು ಇಲಾಖೆ ಅಧಿಕಾರಿಗಳು ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next