ಸುಳ್ಯ: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನೇತೃತ್ವದ ರಾಜ್ಯ ಸರಕಾರ ತುಘಲಕ್ ಸರಕಾರದಂತೆ ಕಾರ್ಯನಿರ್ವಹಿಸುತ್ತಿದೆ. ಇದರಿಂದ ರಾಜ್ಯದಲ್ಲಿ ಹಿಂದೂಗಳ ಹತ್ಯೆ ಹೆಚ್ಚುತ್ತಿದೆ ಎಂದು ಸುಳ್ಯ ಬಿಜೆಪಿ ನಗರಾಧ್ಯಕ್ಷ ವಿನಯ್ ಕಂದಡ್ಕ ಹೇಳಿದರು. ಹೊನ್ನಾವರದ ಪರೇಶ್ ಮೇಸ್ತ ಸಹಿತ ಹಿಂದೂ ಕಾರ್ಯಕರ್ತರ ಕಗ್ಗೊಲೆಯನ್ನು ಖಂಡಿಸಿ ಸುಳ್ಯ ಹಿಂದೂ ಹಿತರಕ್ಷಣಾ ಸಮಿತಿ ಮಂಗಳವಾರ ನಗರದಲ್ಲಿ ಹಮ್ಮಿಕೊಂಡ ಪ್ರತಿಭಟನಾ ಸಭೆಯಲ್ಲಿ ಮಾತನಾಡಿದರು.
ನಿಷ್ಠಾವಂತರಿಗೆ ಉಳಿಗಾಲವಿಲ್ಲ
ಹಿಂದೂಗಳ ಹತ್ಯೆ ಹೆಚ್ಚಾಗಲು ರಾಜ್ಯ ಸರಕಾರ ಹಿಂದೂ ವಿರೋಧಿ ನೀತಿ ಅನುಸರಿಸುವುದೇ ಕಾರಣ. ರಾಜ್ಯದಲ್ಲಿ ಮತಾಂಧ ಶಕ್ತಿ ವಿಜೃಂಭಿಸುತ್ತಿರುವ ಬಗ್ಗೆ ರಾಜ್ಯದ ಜನತೆಯನ್ನು ಎಚ್ಚರಿಸಬೇಕಾದ ಅನಿವಾರ್ಯತೆಯಿದೆ. ರಾಜ್ಯದಲ್ಲಿ ಹಿಂದೂಗಳಿಗೆ ಮಾತ್ರವಲ್ಲದೇ ನಿಷ್ಠಾವಂತ ಅಧಿಕಾರಿಗಳಿಗೂ ಉಳಿಗಾಲವಿಲ್ಲದಂತಾಗಿದೆ. ರಾಜ್ಯದ ಜನತೆ ಒಗ್ಗಟ್ಟಾಗಿ ದೇಶ ವಿರೋಧಿ ಶಕ್ತಿಗಳನ್ನು ಹೊರಗಟ್ಟಬೇಕು. ಅದಕ್ಕಾಗಿ ಬೀದಿಗಿಳಿದು ಹೋರಾಟ ಅನಿರ್ವಾಯವಾಗುತ್ತಿದೆ ಎಂದು ಅಭಿಪ್ರಾಯಪಟ್ಟರು.
ಪ್ರತಿಭಟನೆಯಲ್ಲಿ ಸುಳ್ಯ ಬಿಜೆಪಿ ಮಂಡಲ ಅಧ್ಯಕ್ಷ ವೆಂಕಟ್ ವಳಲಂಬೆ, ತಾ.ಪಂ. ಅಧ್ಯಕ್ಷ ಚನಿಯ ಕಲ್ತಡ್ಕ, ಸ್ಥಾಯಿ ಸಮಿತಿ ಅಧ್ಯಕ್ಷ ರಾಧಾಕೃಷ್ಣ ಬೊಳ್ಳೂರು, ನ.ಪಂ. ಅಧ್ಯಕ್ಷೆ ಶೀಲಾವತಿ ಮಾಧವ, ಉಪಾಧ್ಯಕ್ಷೆ ಹರಿಣಾಕ್ಷಿ ನಾರಾಯಣ, ನ.ಪಂ. ಸದಸ್ಯರಾದ ಗಿರೀಶ್ ಕಲ್ಲಗದ್ದೆ, ಕಿರಣ್ ಕುರುಂಜಿ, ಎನ್.ಎ. ರಾಮಚಂದ್ರ, ಎಪಿಎಂಸಿ ಅಧ್ಯಕ್ಷ ದೇರಣ್ಣ ಗೌಡ, ಮಾಜಿ ತಾ.ಪಂ. ಅಧ್ಯಕ್ಷೆ ಗುಣವತಿ ಕೊಲ್ಲಂತಡ್ಕ, ವಿವಿಧ ಸಂಘಟನೆಗಳ ಮುಖಂಡರಾದ ಅಬ್ದುಲ್ ಕುಂಞ ನೇಲ್ಯಡ್ಕ, ಮಹೇಶ್ ರೈ ಮೇನಾಲ, ನವೀನ್ ರೈ ಮೇನಾಲ, ಐ.ಬಿ. ಚಂದ್ರಶೇಖರ್, ಶೀನಪ್ಪ ಬಯಂಬು, ಸೋಮನಾಥ ಪೂಜಾರಿ, ದಿನೇಶ್ ಅಡ್ಕಾರು, ಸುಭಾಶ್ ಕಳಂಜ, ಸುರೇಶ್ ಕಣೆಮರಡ್ಕ ಉಪಸ್ಥಿತರಿದ್ದರು. ಹಿಂದೂ ಹಿತರಕ್ಷಣಾ ಸಮಿತಿ ಸಂಚಾಲಕ ಜಯಂತ್ ಮಡಪ್ಪಾಡಿ ನಿರೂಪಿಸಿದರು.