ಉದಯವಾಣಿ ಸಮಾಚಾರ
ಕಾರಟಗಿ: ಪಟ್ಟಣ ಸೇರಿದಂತೆ ತಾಲೂಕು ವ್ಯಾಪ್ತಿಯಲ್ಲಿ ಭತ್ತದ ಬೆಳೆಗೆ ಕೊಳವೆ ರೋಗ ಬಾಧಿಸಿದ್ದು ರೈತರಲ್ಲಿ ಆತಂಕ ತಂದೊಡ್ಡಿದೆ. ಈ ಕೊಳವೆ ಹುಳು ಭತ್ತದ ಬೆಳೆಗೆ ಬರುವುದು ಸಾಮಾನ್ಯವಾದರೂ ಈ ಬಾರಿ ಹೆಚ್ಚಿನ ಪ್ರಮಾಣದಲ್ಲಿ ಕಾಣಿಸಿಕೊಂಡಿದೆ. ಪಟ್ಟಣ ಸೇರಿದಂತೆ ತಾಲೂಕಿನಾದ್ಯಂತ ಭತ್ತಕ್ಕೆ ಈ ಕೊಳವೆ ಹುಳುವಿನ ಕಾಟ ಕಾಣಿಸಿಕೊಂಡಿದ್ದು, ಭತ್ತದ ಸಸಿಯ ಗರಿಗಳನ್ನು ಹುಳುಗಳು ತುಂಡರಿಸುವುದರಿಂದ ಭತ್ತದ ಸಸಿ ಬಾಡಿ ಕ್ರಮೇಣ ಒಣಗಿ ಹೋಗುತ್ತದೆ. ಭತ್ತದ ಒಂದು ಬಡ್ಡಿಯಲ್ಲಿ 60 ಕಡ್ಡಿಗಳಲ್ಲಿ 30ಕ್ಕೂ ಹೆಚ್ಚು ಕಡ್ಡಿಗಳು ಬರಿ ಹಾಪಿನಂತಾಗಿವೆ.
ಹಲವಾರು ಕ್ರಿಮಿನಾಶಕ, ಗುಳಿಗೆ ಕರಗಿಸಿ ಸಿಂಪಡಿಸಿದರೂ ರೋಗ ನಿಯಂತ್ರಣಕ್ಕೆ ಬರುತ್ತಿಲ್ಲ ಎಂದು ರೈತರು ಹತಾಶೆ ಭಾವದಿಂದ
ಹೇಳುತ್ತಿದ್ದಾರೆ. ಈ ಬಾರಿ ಹವಾಮಾನದಲ್ಲಿನ ವೈಪರಿತ್ಯವೇ ಈ ಕೊಳವೆ ಹುಳುಗಳ ಉಪಟಳ ಹೆಚ್ಚಳಕ್ಕೆ ಕಾರಣವಾಗಿದೆ ಎನ್ನುತ್ತಾರೆ ರೈತರು.
ಕೊಳವೆ ಹುಳುಗಳು ಬಗ್ಗೆ ಕೃಷಿ ಇಲಾಖೆ, ರೈತ ಸಂಪರ್ಕ ಕೇಂದ್ರದ ಅಧಿಕಾರಿಗಳಿಗೆ ಮಾಹಿತಿ ಇದ್ದರೂ ರೈತರಿಗೆ ಮುಂಜಾಗ್ರತೆ ಕೈಗೊಳ್ಳುವ ಬಗ್ಗೆ ಇಲಾಖೆ ಅಧಿಕಾರಿಗಳು ಈವರೆಗೂ ಯಾವುದೇ ಮಾಹಿತಿ ಒದಗಿಸಿಲ್ಲ. ರೈತರು ಬೆಳೆದ ಬೆಳೆ, ಮಳೆ-ಗಾಳಿಗೆ ಹಾಳಾದಾಗ, ಕ್ರಿಮಿಕೀಟಗಳಿಂದ ನಾಶ ಹೊಂದಿದಾಗ ವೀಕ್ಷಣೆಗೆ ಬರುತ್ತಾರೆ ವಿನಃ ರೈತರ ಹಿತ ಕಾಪಾಡಲು ಯಾರೂ ಮುಂದೆ ಬರುತ್ತಿಲ್ಲ.
ಜಿಲ್ಲೆಯಾದ್ಯಂತ ಭತ್ತದ ಬೆಳೆಗೆ ಈ ರೋಗ ಕಾಣಿಸಿಕೊಂಡಿದೆ. ಕೃಷಿ ಇಲಾಖೆಗೆ ಮಾಹಿತಿ ಇದೆ. ಆದರೂ ರೈತರಿಗೆ ಸೂಕ್ತ ಮಾರ್ಗದರ್ಶನ ನೀಡುವಲ್ಲಿ ಕೃಷಿ ಇಲಾಖೆ, ರೈತ ಸಂಪರ್ಕ ಕೇಂದ್ರದ ಅಧಿ ಕಾರಿಗಳು ವಿಫಲರಾಗಿದ್ದಾರೆ ಎಂದು ರೈಲ್ವೆ ಸ್ಟೇಷನ್ ರಸ್ತೆಯ ಇಕ್ಕೆಲಗಳಲ್ಲಿ ಇರುವ ಗದ್ದೆಗಳ ರೈತರು ದೂರಿದ್ದಾರೆ.
ಈ ಬಾರಿ ಸಮರ್ಪಕ ಮಳೆಯಾಗಿ ಬೆಳೆಯೂ ಸಮೃದ್ಧವಾಗಿದೆ. ಭತ್ತದ ಬೆಳೆ ಈಗ ಹಾಲು ತುಂಬುವ ಸಮಯ. ಇನ್ನು ಕೆಲ ದಿನಗಳಲ್ಲಿ ತೆನೆ ಬಿಚ್ಚಲಾರಂಭಿಸುತ್ತದೆ. ಎಕರೆಗೆ 50ಕ್ಕೂ ಹೆಚ್ಚು ಚೀಲ ಭತ್ತ ಬೆಳೆಯುತ್ತೇವೆ ಎಂಬ ಉತ್ಸಾಹದಲ್ಲಿದ್ದ ರೈತರಿಗೆ ಕೊಳವೆ ಹುಳು ಆತಂಕ ತಂದೊಡ್ಡಿದೆ. ಎಕರೆಗೆ 38 ರಿಂದ 40 ಸಾವಿರ ರೂ.ಗಳನ್ನು ವ್ಯಯಿಸಲಾಗಿದ್ದು, ಭತ್ತದ ಬೆಳೆ ಕೊಳವೆ ಹುಳಿವಿನ ಬಾಧೆಗೆ ತುತ್ತಾಗಿ ಎಕರೆಗೆ 20-ರಿಂದ 25 ಚೀಲ ಭತ್ತ ಬರುವುದು ಕಷ್ಟವಾಗಿದೆ. ಬೆಳೆಗೆ ವ್ಯಯಿಸಿದ ಹಣ ಕೂಡ ಕೈಗೆ ಬಾರದ ಸ್ಥಿತಿ ನಿರ್ಮಾಣವಾಗಿದೆ ಎನ್ನುತ್ತಾರೆ ರೈತ ನಾರಾಯಣ ಈಡಿಗೇರ.
■ ದಿಗಂಬರ್ ಕುರಡೇಕರ್