Advertisement

ಕೋವಿಡ್‌-19 ಸೋಂಕು ಕಾಲದಲ್ಲಿ ಕ್ಷಯ ರೋಗ ನಿರ್ವಹಣೆ

01:26 AM Jun 28, 2020 | Sriram |

ಭಾರತದಿಂದ 2025ರ ಅಂತ್ಯದ ಒಳಗೆ ಕ್ಷಯ ರೋಗವನ್ನು ಸಂಪೂರ್ಣ ದೂರ ಮಾಡುವ ಗುರಿಯನ್ನು ಹಾಕಿಕೊಳ್ಳಲಾಗಿತ್ತು. ಆದರೆ ಪ್ರಸ್ತುತ ಕೋವಿಡ್‌ -19 ಸಾಂಕ್ರಾಮಿಕ ರೋಗವು ಪ್ರಪಂಚಾದ್ಯಂತ ಹರಡುತ್ತಿದ್ದು, ಇದರ ಹರಡುವಿಕೆಯನ್ನು ನಿಯಂತ್ರಿಸಲು ಭಾರತ ಸಹಿತ ಹಲವು ರಾಷ್ಟ್ರಗಳು ಲಾಕ್‌ಡೌನ್‌ ಇತ್ಯಾದಿ ಕ್ರಮಗಳನ್ನು ಜಾರಿಗೆ ತಂದಿವೆ.

Advertisement

ವಿಶ್ವ ಆರೋಗ್ಯ ಸಂಸ್ಥೆ ಹಾಗೂ ಕ್ಷಯ ಮತ್ತು ಶ್ವಾಸಕೋಶದ ಕಾಯಿಲೆಗಳ ವಿರುದ್ಧವಾದ ಅಂತಾರಾಷ್ಟ್ರೀಯ ಒಕ್ಕೂಟಗಳ ಪ್ರಕಾರ, ಕ್ಷಯ ರೋಗಿಗಳ ರೋಗನಿರ್ಣಯದಲ್ಲಿ ವಿಳಂಬ, ಚಿಕಿತ್ಸೆಯಲ್ಲಿ ಅಡಚಣೆ ಮತ್ತು ಮನೆಯಲ್ಲಿ ನಿಕಟ ಸಂಪರ್ಕದಿಂದ ಕಾಯಿಲೆ ಒಬ್ಬರಿಂದ ಇನ್ನೊಬ್ಬರಿಗೆ ಹರಡುವ ಸಾಧ್ಯತೆ ಹೆಚ್ಚುತ್ತದೆ. ಉದ್ಯೋಗ ಮತ್ತು ಆದಾಯ.ಕೊರತೆಯಿಂದಾಗಿ ಮಧ್ಯಮ ಮತ್ತು ಕೆಳವರ್ಗದ ಜನರು ನೇರವಾಗಿ ಅಥವಾ ಪರೋಕ್ಷವಾಗಿ ಅಪೌಷ್ಟಿಕತೆಯನ್ನು ಎದುರಿಸುತ್ತಿದ್ದಾರೆ. ಇದು ರೋಗಲಕ್ಷಣಗಳ ಪರೀಕ್ಷೆ ಮತ್ತು ಚಿಕಿತ್ಸೆಗಾಗಿ ಆರೋಗ್ಯ ಸೌಲಭ್ಯದ ಬಳಕೆಯ ಮೇಲೆ ದುಷ್ಪರಿಣಾಮ ಬೀರಬಹುದು. ಇದರಿಂದ ಟಿಬಿ ಪ್ರಕರಣಗಳ ಸಂಖ್ಯೆಯು ಹೆಚ್ಚಾಗಬಹುದು.

ಕ್ಷಯ ರೋಗ (ಟಿಬಿ) ಮತ್ತು ಕೋವಿಡ್‌ -19 ಎರಡೂ ಸಾಂಕ್ರಾಮಿಕ ರೋಗಗಳಾಗಿದ್ದು, ಪ್ರಾಥಮಿಕವಾಗಿ ಶ್ವಾಸಕೋಶದ ಮೇಲೆ ಪರಿಣಾಮವನ್ನು ಬೀರುತ್ತವೆ. ಎರಡರ ರೋಗಲಕ್ಷಣಗಳು ಹೋಲಿಕೆಗಳನ್ನು ಹೊಂದಿದ್ದು ಕೆಮ್ಮು, ಜ್ವರ ಮತ್ತು ಉಸಿರಾಟದ ತೊಂದರೆಗಳಂತಹ ಸಾಮಾನ್ಯ ಲಕ್ಷ‌ಣಗಳನ್ನು ಹೊಂದಿವೆ.

ಕ್ಷಯ ರೋಗಿಗಳಲ್ಲಿ ಕೋವಿಡ್‌ -19 ಸೋಂಕಿನ ಬಗ್ಗೆ ಅರಿವು ಇನ್ನೂ ಪ್ರಾರಂಭಿಕ ಹಂತದಲ್ಲಿ ಇದೆ. ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ ಒಂದು ವೇಳೆ ಟಿಬಿ ರೋಗಿಗೆ ಕೋವಿಡ್‌ -19 ಸೋಂಕು ತಗಲಿದರೆ ಮತ್ತು ಅವನ ಟಿಬಿ ಚಿಕಿತ್ಸೆಯಲ್ಲಿ ಅಡಚಣೆಯಾದರೆ ಟಿಬಿ ಚಿಕಿತ್ಸೆಯ ಪೂರ್ಣ ಪ್ರಮಾಣದ ಯಶಸ್ಸನ್ನು ನಿರೀಕ್ಷಿಸಲಾಗುವುದಿಲ್ಲ.

– ಟಿಬಿ ಕಾಯಿಲೆ ಇದ್ದರೆ ಆರಂಭದಲ್ಲಿ ಕೆಮ್ಮು, ಜ್ವರ ಮತ್ತು ದಣಿವಿನಂತಹ ರೋಗಲಕ್ಷಣಗಳು ಇರುತ್ತವೆ.
-ಟಿಬಿ ಕಾಯಿಲೆಯ ಯಾವುದೇ ರೋಗಲಕ್ಷಣಗಳು ಉಲ್ಬಣಗೊಂಡರೆ ವೈದ್ಯರನ್ನು ಸಂಪರ್ಕಿಸಿ ಮತ್ತು ಅವುಗಳನ್ನು ವಿವರಿಸಿ. ಕೋವಿಡ್‌ ಪರೀಕ್ಷೆಯ ಆವಶ್ಯಕತೆಯನ್ನು ವೈದ್ಯರು ನಿರ್ಣಯಿಸುತ್ತಾರೆ.
– ಟಿಬಿ ಚಿಕಿತ್ಸೆಯನ್ನು ಪಡೆಯುವಾಗ ಕೋವಿಡ್‌ -19 ರೋಗನಿರ್ಣಯವಾಗಿದ್ದರೆ ದಯವಿಟ್ಟು ವೈದ್ಯರಿಗೆ ತಿಳಿಸಿ.
– ವೈದ್ಯರು ಸೂಚಿಸಿದಂತೆ ಎಲ್ಲ ಟಿಬಿ ಔಷಧಗಳನ್ನು ತೆಗೆದುಕೊಳ್ಳುವುದು ಬಹಳ ಮುಖ್ಯ.
– ಟಿಬಿ ಕಾಯಿಲೆಯಿಂದ ಸಂಪೂರ್ಣವಾಗಿ ಗುಣಮುಖರಾಗಿದ್ದರೆ ಮತ್ತು ಇತರ ಯಾವುದೇ ಆರೋಗ್ಯ ಸಮಸ್ಯೆಗಳು ಹೊಂದಿಲ್ಲದಿದ್ದರೆ ಕೋವಿಡ್‌ -19 ಸೋಂಕು ಹರಡುವ ಪ್ರಮಾಣ ಇತರ ಜನಸಾಮಾನ್ಯರಂತಯೇ ಇರುತ್ತದೆ.
– ಯಾವುದೇ ಶ್ವಾಸಕೋಶದ ಶಸ್ತ್ರಚಿಕಿತ್ಸೆಗಳಿಗೆ ಒಳಗಾಗಿದ್ದರೆ ಅಥವಾ ಬ್ರಾಂಕೈಟಿಸ್‌, ನ್ಯುಮೋನಿಯಾದಂತಹ ದೀರ್ಘ‌ಕಾಲದ ಶ್ವಾಸಕೋಶದ ಹಾನಿಗೆ ಒಳಗಾಗಿದ್ದರೆ ಟಿಬಿ ಮರುಕಳಿಸುವ ಅಥವಾ ಕೋವಿಡ್‌ -19 ಸೋಂಕಿನ ಅಪಾಯ ಜಾಸ್ತಿ ಪ್ರಮಾಣದಲ್ಲಿ ಇರುತ್ತದೆ.

Advertisement

ಆಯುಷ್‌ ಸಚಿವಾಲಯದ ಪ್ರಕಾರ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳಲು ಈ ಕೆಳಕಂಡ ನಿಯಮಗಳನ್ನು ಅನುಸರಿಸುವುದು ಸೂಕ್ತ.
– ಸಾಧ್ಯವಾದಷ್ಟು ನೀರು ಕುಡಿಯಿರಿ. ಅದರಲ್ಲೂ ಕುದಿಸಿ ಆರಿಸಿದ ನೀರಿಗೆ ಪ್ರಾಮುಖ್ಯ ನೀಡಿ.
-ಪ್ರತೀ ದಿನ 30 ನಿಮಿಷಗಳ ಕಾಲ ವ್ಯಾಯಾಮ, ಯೋಗಾಸನ, ಪ್ರಾಣಾಯಾಮ ಮಾಡಿ.
-ಆಹಾರದಲ್ಲಿ ಸಾಧ್ಯವಾದಷ್ಟು ಅರಿಶಿನ, ಜೀರಿಗೆ, ಕೊತ್ತಂಬರಿ, ಬೆಳ್ಳುಳ್ಳಿ ಬಳಕೆ ಮಾಡಿ.
– ಬಿಸಿ ಹಾಲಿಗೆ ಅರಿಶಿನ ಬೆರೆಸಿ ಪ್ರತೀ ದಿನ ಸೇವಿಸಿ

ಸೋಂಕಿನಿಂದ ನಿಮನ್ನು ನೀವು ಹೇಗೆ ರಕ್ಷಿಸಿಕೊಳ್ಳಬಹುದು?
ಟಿಬಿ ರೋಗಿಗಳು ಮತ್ತು ಇತರ ಸಾಮಾನ್ಯ ಜನರು ಕೋವಿಡ್‌ -19 ರೋಗವನ್ನು ತಡೆಗಟ್ಟಲು ಸಾಕಷ್ಟು ಸರಳ ಮತ್ತು ಪರಿಣಾಮಕಾರಿ ಕ್ರಮಗಳನ್ನು ತೆಗೆದುಕೊಳ್ಳಬಹುದು.
-ನೀವು ಅನಾರೋಗ್ಯದಿಂದ ಬಳಲುತ್ತಿರುವಾಗ ಮನೆಯಲ್ಲೇ ಇರಿ.
-ಎಲ್ಲ ಸಮಯದಲ್ಲೂ ಮಾಸ್ಕಗಳನ್ನು ಬಳಸಿ
-ಸದಾ ನಿಮ್ಮೊಂದಿಗೆ ಟಿಶ್ಯೂ ಪೇಪರ್‌ಅಥವಾ ಕರವಸ್ತ್ರ ಇರಿಸಿಕೊಳ್ಳಬೇಕು. ಸೀನುವ ಸಮಯದಲ್ಲಿ ಟಿಶ್ಯೂ /ಕರವಸ್ತ್ರ ಅಥವಾ ಮೊಣಕೈಯನ್ನು ಮೂಗಿನ ಬಳಿ ಅಡ್ಡವಿಟ್ಟು ಸೀನುವುದನ್ನು ಅಭ್ಯಾಸ ಮಾಡಿಕೊಳ್ಳಬೇಕು.
-ಸೀನುವಾಗ ಅಥವಾ ಕೆಮ್ಮಿದಾಗ ಬಳಸಿದ ಟಿಶ್ಯೂ ಪೇಪರ್‌ಅನ್ನು ಕಸದ ತೊಟ್ಟಿಗಳಲ್ಲಿಯೇ ತ್ಯಜಿಸಿ ಅಥವಾ ಕರವಸ್ತ್ರವನ್ನು ಸೋಪಿನಿಂದ ತೊಳೆದು ಅನಂತರ ಬಿಸಿಲಿನಲ್ಲಿ ಒಣಗಿಸಿ.
– ಸ್ಯಾನಿಟೈಜರ್‌ನಿಂದ ನಿಮ್ಮ ಕೈಗಳನ್ನು ಸ್ವತ್ಛಗೊಳಿಸಿ ಅಥವಾ 20 ಸೆಕೆಂಡುಗಳ ಕಾಲ ಕೈಗಳನ್ನು ಸೋಪಿನಿಂದ ಚೆನ್ನಾಗಿ ತೊಳೆಯಿರಿ.
-ಯಾವುದೇ ವಸ್ತುಗಳನ್ನುಮುಟ್ಟುವ ಮೊದಲು ಮತ್ತು ಅನಂತರ ಮತ್ತು ಕೆಲಸಕ್ಕೆ ಹೊರಡುವ ಮೊದಲು ಮತ್ತು ಮನೆಗೆ ಮರಳುವ ಮೊದಲು ಯಾವಾಗಲೂ ಸ್ಯಾನಿಟೈಜರ್‌ಗಳನ್ನು ಬಳಸಿ.
– ಸರಿಯಾಗಿ ಕೈ ತೊಳೆಯದೆ ನಿಮ್ಮ ಮೂಗು, ಕಣ್ಣು ಮತ್ತು ಬಾಯಿಯನ್ನು ಸ್ಪರ್ಶಿಸುವುದನ್ನು ತಪ್ಪಿಸಿ.
-ಅನಾರೋಗ್ಯದಿಂದ ಬಳಲುತ್ತಿರುವ ಜನರೊಂದಿಗೆ ನಿಕಟ ಸಂಪರ್ಕವನ್ನು ತಪ್ಪಿಸಿ.
-ಸಕ್ರಿಯ ಟಿಬಿ ಕಾಯಿಲೆ ಅಥವಾ ಇನ್ನಾವುದೇ ಕಾಯಿಲೆಗಳಿಗೆ ಚಿಕಿತ್ಸೆ ಪಡೆಯುತ್ತಿದ್ದರೆ, ನಿಮ್ಮ ಚಿಕಿತ್ಸೆಯ ಔಷಧಗಳನ್ನು ಸರಿಯಾಗಿ ತೆಗೆದುಕೊಳ್ಳಿ.
-ಸಾರ್ವಜನಿಕವಾಗಿ ಅಥವಾ ಜನದಟ್ಟಣೆಯ ಸ್ಥಳಗಳಿಗೆ ಹೋಗುವುದನ್ನು ತಪ್ಪಿಸಿ. ಒಂದು ವೇಳೆ ಹೋಗುವ ಆವಶ್ಯಕತೆಯಿದ್ದರೆ ಸಾಮಾಜಿಕ ಅಂತರವನ್ನು ಕಾಪಾಡಿಕೊಳ್ಳುವುದು ಅಗತ್ಯ.
-ಆಸ್ಪತ್ರೆ ಭೇಟಿಗಳನ್ನು ಸಾಧ್ಯವಾದಷ್ಟು ತಪ್ಪಿಸಿ ಮತ್ತು ನಿಮ್ಮ ವೈದ್ಯರು / ದಾದಿಯವರೊಂದಿಗೆ ದೂರವಾಣಿ ಮೂಲಕ ಸಂಪರ್ಕದಲ್ಲಿರಿ.

-ಹಿತೈಶ್‌ ಕುಮಾರ್‌ ಆರ್‌.ಎನ್‌.
ಪಿಎಚ್‌ಡಿ ವಿದ್ಯಾರ್ಥಿ, ಕಮ್ಯುನಿಟಿ ಮೆಡಿಸಿನ್‌ ವಿಭಾಗ, ಕೆಎಂಸಿ, ಮಣಿಪಾಲ.
ಡಾ| ಚೈತ್ರಾ ಆರ್‌. ರಾವ್‌
ಅಸೋಸಿಯೇಟ್‌ ಪ್ರೊಫೆಸರ್‌, ಕಮ್ಯುನಿಟಿ ಮೆಡಿಸಿನ್‌ ವಿಭಾಗ ಮತ್ತು ಕೋ-ಆರ್ಡಿನೇಟರ್‌, ಸೆಂಟರ್‌ ಫಾರ್‌ ಟ್ರಾವೆಲ್‌ ಮೆಡಿಸಿನ್‌, ಕೆಎಂಸಿ ಹಾಗೂ ಮ್ಯಾಕ್‌ ಐಡಿ ಸದಸ್ಯರು, ಮಾಹೆ, ಮಣಿಪಾಲ.

Advertisement

Udayavani is now on Telegram. Click here to join our channel and stay updated with the latest news.

Next