ಬೆಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ತುಂಬೆ ನೀರಾ ಘಟಕವನ್ನು ನಿರ್ವಹಿಸಲು ಬಂಟ್ವಾಳ ತಾಲೂಕಿನ ವಿಟ್ಲದಲ್ಲಿರುವ ಜಿಲ್ಲಾ ತೆಂಗು ಬೆಳೆಗಾರರ ರೈತ ಉತ್ಪಾದಕ ಸಂಸ್ಥೆ ಮುಂದೆ ಬಂದಿದ್ದು, ವಿಸ್ತೃತ ಯೋಜನಾ ವರದಿ ಸಲ್ಲಿಸಲು ಸಂಸ್ಥೆಗೆ ಸೂಚಿಸಲಾಗಿದೆ ಎಂದು ತೋಟಗಾರಿಕೆ ಸಚಿವ ಮುನಿರತ್ನ ತಿಳಿಸಿದ್ದಾರೆ.
ವಿಧಾನಪರಿಷತ್ತಿನಲ್ಲಿ ಪ್ರಶ್ನೋತ್ತರ ಅವಧಿಯಲ್ಲಿ ಕಾಂಗ್ರೆಸ್‌ನ ಕೆ. ಹರೀಶ್ ಕುಮಾರ್, ತುಂಬೆಯಲ್ಲಿರುವುದು ರಾಜ್ಯದ ಮೊದಲ ನೀರಾ ಘಟಕವಾಗಿದೆ. ಸೇಂದಿ ಮಾರಾಟ ನಿಷೇಧ ಆದ ಮೇಲೆ ಬದುಕು ಕಳೆದುಕೊಂಡಿದ್ದ ಲಕ್ಷಾಂತರ ಕುಟುಂಬಗಳಿಗೆ ನೀರಾ ಆಸರೆಯಾಗಿತ್ತು. ಇದೊಂದು ಪೌಷ್ಠಿಕಾಂಶ ಪೇಯವಾಗಿದೆ. ನಷ್ಟದ ಕಾರಣ ನೀಡಿ ಘಟಕವನ್ನು ಮುಚ್ಚಲಾಗಿದೆ. ಘಟಕವನ್ನು ಪುನಃ ಆರಂಭಿಸಬೇಕು ಎಂದು ಆಗ್ರಹಿಸಿದರು.
ಇದಕ್ಕೆ ಉತ್ತರಿಸಿದ ಸಚಿವರು, ತುಂಬೆ ನೀರಾ ಘಟಕವನ್ನು ಪುನಶ್ಚೇತನಗೊಳಿಸಲು ಖಾಸಗಿ ಸಹಭಾಗಿತ್ವದಲ್ಲಿ ಕೇರಳದ ಪಾಲಾಕ್ಕಾಡ್ ತೆಂಗು ಉತ್ಪಾದಕರ ಕಂಪೆನಿಯೊಂದಿಗೆ 2017ರಲ್ಲಿ ಒಪ್ಪಂದ ಮಾಡಿಕೊಳ್ಳಲಾಗಿತ್ತು. ಆದರೆ, ಉತ್ಪನ್ನ ಮಾರಾಟದ ತೊಂದರೆಗಳಿಂದಾಗಿ ಘಟಕ ಆರಂಭಗೊಂಡಿಲ್ಲ.
ಕರ್ನಾಟಕ ಅಬಕಾರಿ (ನೀರಾ) ನಿಯಮಗಳ ಪ್ರಕಾರ ರೈತ ಉತ್ಪಾದಕ ಸಂಸ್ಥೆಗಳಿಗೆ ಮಾತ್ರ ಅವಕಾಶವಿದೆ. ಆದ್ದರಿಂದ ರೈತ ಉತ್ಪಾದಕ ಸಂಸ್ಥೆಗಳಿಗೆ ವಹಿಸಲು ಮೂರು ಬಾರಿ ಟೆಂಡರ್ ಕರೆಯಲಾಗಿತ್ತು. ಯಾವುದೇ ರೈತ ಉತ್ಪಾದಕಾ ಸಂಸ್ಥೆಗಳು ಮುಂದದೆ ಬಂದಿಲ್ಲ. ಈಗ ವಿಟ್ಲದ ಜಿಲ್ಲಾ ತೆಂಗು ಬೆಳೆಗಾರರ ರೈತ ಉತ್ಪಾದಕಾ ಸಂಸ್ಥೆ ಮುಂದೆ ಬಂದಿದ್ದು, ವಿಸ್ತೃತ ಯೋಜನಾ ವರದಿ ಸಲ್ಲಿಸಲು ಸಂಸ್ಥೆಗೆ ಸೂಚಿಸಲಾಗಿದೆ ಎಂದರು.
ಮೂರ್ತೆದಾರರ ಸಂಘ ಸಹ ಆಸಕ್ತಿ ಹೊಂದಿದೆ. ಅವರ ಜೊತೆಯಲ್ಲಿ ಮಾತನಾಡಿದರೆ ಪರಿಹಾರ ಸಿಗಬಹುದು. ಕುಂದಾಪುರದಲ್ಲಿ ಖಾಸಗಿ ನೀರಾ ಘಟಕ ಇದ್ದು, ಅದು ಲಾಭದಲ್ಲಿದೆ. ಖಾಸಗಿ ಘಟಕಗಳು ಲಾಭದಲ್ಲಿರುವಾಗಿ ಸರ್ಕಾರಿ ಘಟಕಗಳು ಯಾಕೆ ಮುಚ್ಚಿಹೋಗುತ್ತಿವೆ. ಈ ಬಗ್ಗೆ ಸರ್ಕಾರ ಪರಿಶೀಲನೆ ನಡೆಸಬೇಕು ಎಂದು ಹರೀಶ್ ಕುಮಾರ್ ಮನವಿ ಮಾಡಿದರು.
ಈ ವಿಚಾರವಾಗಿ ಜಿಲ್ಲೆಗೆ ಭೇಟಿ ಕೊಟ್ಟು ಪರಿಶೀಲಿಸಿ ಮುಂದಿನ ಕ್ರಮ ಕೈಗೊಳ್ಳುವುದಾಗಿ ಸಚಿವ ಮುನಿರತ್ನ ಭರವಸೆ ನೀಡಿದರು.