Advertisement

ನನಗೆ 122 ಮಂದಿ ಬೆಂಬಲ: ಟಿ.ಟಿ.ವಿ.ದಿನಕರನ್‌ ಹೊಸ ಬಾಂಬ್‌

08:00 AM Aug 04, 2017 | Team Udayavani |

ಹೊಸದಿಲ್ಲಿ/ಚೆನ್ನೈ: ಬಿಹಾರದ ಬಳಿಕ ತಮಿಳುನಾಡಿನಲ್ಲಿ ಬಿಜೆಪಿ ಎನ್‌ಡಿಎ ಸರಕಾರ ರಚನೆ ಮಾಡಲು ಮುಂದಾಗಿದೆ ಎಂಬ ವದಂತಿಗಳ ನಡುವೆಯೇ ಎಐಎಡಿಎಂಕೆ ಉಪ ಮಹಾಪ್ರಧಾನ ಕಾರ್ಯದರ್ಶಿ ಟಿ.ಟಿ.ವಿ.ದಿನಕರನ್‌ ಹೊಸ ಬಾಂಬ್‌ ಸಿಡಿಸಿದ್ದಾರೆ. ಕೆಲ ದಿನಗಳ ಹಿಂದೆ ಬೆಂಗಳೂರಿನ ಪರಪ್ಪನ ಅಗ್ರಹಾರದಲ್ಲಿರುವ ಪಕ್ಷದ ನಾಯಕಿ ವಿ.ಕೆ.ಶಶಿಕಲಾರನ್ನು ಭೇಟಿಯಾದ ಬಳಿಕ ಮಾತನಾಡಿದ ಅವರು, ತಮಗೆ 122 ಮಂದಿ ಶಾಸಕರ ಬೆಂಬಲ ಇದೆ ಎಂದು ಹೇಳಿಕೊಂಡಿದ್ದಾರೆ. ಮಾತ್ರವಲ್ಲ ಶೀಘ್ರವೇ ಪೂರ್ಣ ಪ್ರಮಾಣದಲ್ಲಿ ರಾಜಕೀಯಕ್ಕೆ ಧುಮುಕುವುದಾಗಿ ಹೇಳಿಕೊಂಡಿದ್ದಾರೆ. ಈ ಮೂಲಕ ತಮಿಳುನಾಡಿನಲ್ಲಿ ಮತ್ತೂಂದು ಹಂತದ ಅಸ್ಥಿರತೆ ತಲೆದೋರುವ ಸೂಚನೆ ಕಾಣಿಸತೊಡಗಿದೆ. 

Advertisement

ಇದರಿಂದ ಗಲಿಬಿಲಿಗೊಂಡಿರುವ ಹಾಲಿ ಮುಖ್ಯಮಂತ್ರಿ ಎಡಪ್ಪಾಡಿ ಕೆ. ಪಳನಿಸ್ವಾಮಿ ಪಕ್ಷದ ಪ್ರಧಾನ ಕಚೇರಿಯಲ್ಲಿ ಪ್ರಮುಖ ಸಚಿವರು ಮತ್ತು ನಾಯಕರ ಜತೆ ಮಾತುಕತೆ ನಡೆಸಿದರು. ಬಳಿಕ ಮಾತನಾಡಿದ ಹಣಕಾಸು ಸಚಿವ ಡಿ.ಜಯಕುಮಾರ್‌ ಪಳನಿಸ್ವಾಮಿ ಅವರೇ ಮುಖ್ಯಮಂತ್ರಿಯಾಗಿ ಮುಂದುವರಿಯಲಿದ್ದಾರೆ. ಜತೆಗೆ ಪಕ್ಷದ ನಾಯಕರೂ ಆಗಲಿದ್ದಾರೆ ಎಂದು ಹೇಳಿದ್ದಾರೆ. ಮುಖ್ಯಮಂತ್ರಿ ಪಳನಿಸ್ವಾಮಿಯಾಗಿದ್ದರೂ ಎಐಎಡಿಎಂಕೆಯ ನಾಯಕರು, ಶಾಸಕರು ಮತ್ತು ಇತರ ಮುಖಂಡರು ಟಿ.ಟಿ.ವಿ.ದಿನಕರನ್‌ಗೆ ನಿಷ್ಠರಾಗಿಯೇ ಉಳಿದಿದ್ದಾರೆ. ಅದಕ್ಕಾಗಿಯೇ ಬೆಂಗಳೂರಿಗೆ ಭೇಟಿ ನೀಡಿದ್ದಾಗ ಪಕ್ಷದಲ್ಲಿನ ವ್ಯವಹಾರಗಳನ್ನು ಮೊದಲಿಗೆ ಸರಿ ಮಾಡಬೇಕು ಎಂದೂ ಹೇಳಿದ್ದರು.

ವಿಲೀನದ ಮಾತು ಬಂದಿಲ್ಲ – ಒಪಿಎಸ್‌: ಮಾಜಿ ಮುಖ್ಯಮಂತ್ರಿ ಒ. ಪನ್ನೀರ್‌ಸೆಲ್ವಂ ನೇತೃತ್ವದ ಎಐಎಡಿಎಂಕೆ ಪುರಚ್ಚಿ ತಲೈವಿ ಬಣ ಗುರುವಾರ ಕೊಯಮತ್ತೂರಿನಲ್ಲಿ ಪ್ರತಿಕ್ರಿಯೆ ನೀಡಿ, ಎರಡೂ ಬಣಗಳ ವಿಲೀನದ ಬಗ್ಗೆ ಮುಖ್ಯಮಂತ್ರಿ ಬಣದಿಂದ ಯಾವುದೇ ಪ್ರಸಾವ ಬಂದಿಲ್ಲ ಎಂದು ಹೇಳಿಕೆ ನೀಡಿದೆ. ಇಷ್ಟು ಮಾತ್ರವಲ್ಲ ಪಳನಿಸ್ವಾಮಿ ನೇತೃತ್ವದ ಸರಕಾರದ ವಿರುದ್ಧ ಭ್ರಷ್ಟಾಚಾರದ ಗುರುತರ ಆರೋಪಗಳು ಕೇಳಿ ಬಂದಿವೆ ಎಂದು ಮಾಜಿ ಮುಖ್ಯಮಂತ್ರಿ ಆರೋಪಿಸಿದ್ದಾರೆ. ಇದು ಜಯಲಲಿತಾ ಮತ್ತು ಪಕ್ಷದ ಸಂಸ್ಥಾಪಕ ದಿ. ಎಂ.ಜಿ.ರಾಮಚಂದ್ರನ್‌ಗೆ ಮಾಡುವ ಅಪಚಾರ ಎಂದು ದೂರಿದರು.

ವಿಲೀನದ ಬಗ್ಗೆ ಏನಾದರೂ ವಿಶ್ವಾಸವಿದೆಯೇ ಎಂಬ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ಅವರು ನಮ್ಮ ಬಣದ ನಿರ್ಧಾರವನ್ನು ಎಐಎಡಿಎಂಕೆ ಅಮ್ಮಾ ಬಣಕ್ಕೆ ಅಧಿಕೃತವಾಗಿ ತಿಳಿಸಲಾಗಿದೆ. ಆ ಕಡೆಯಿಂದ ಯಾವುದೇ ಒಪ್ಪಿಗೆಯ ಪ್ರಸ್ತಾವ ಬಂದಿಲ್ಲ ಎಂದರು ಪನೀರ್‌ಸೆಲ್ವಂ. ಟಿ.ಟಿ.ವಿ.ದಿನಕರನ್‌ ಬೆಂಗಳೂರಿನಲ್ಲಿ ನೀಡಿದ ಹೇಳಿಕೆ ಬಗ್ಗೆ ಮಾತನಾಡಿದ ಪನೀರ್‌ಸೆಲ್ವಂ, ಆ ಬೆಳವಣಿಗೆಯನ್ನು ನಿಕಟವಾಗಿ ಗಮನಿಸಲಾಗುತ್ತದೆ ಎಂದು ಹೇಳಿದ್ದಾರೆ.  

ಇ.ಸಿ.ಗೆ ಲಂಚ: ಆರೋಪ ಪಟ್ಟಿ ಪರಿಶೀಲಿಸಿದ ಕೋರ್ಟ್‌
ಸದ್ಯ ಸ್ತಂಭನಗೊಂಡಿರುವ ಎಐಎಡಿಎಂಕೆಯ ಎರಡು ಎಲೆಗಳ ಚಿಹ್ನೆ ತಮಗೇ ಬೇಕೆಂದು ಕೇಂದ್ರ ಚುನಾವಣಾ ಆಯೋಗಕ್ಕೆ 50 ಕೋಟಿ ರೂ. ಲಂಚದ ಆಮಿಷ ಒಡ್ಡಿದ್ದಾರೆ ಎಂದು ಹೇಳಲಾಗಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಎಐಎಡಿಎಂಕೆ ಅಮ್ಮಾ ಬಣದ ನಾಯಕ ಟಿ.ಟಿ.ವಿ.ದಿನಕರನ್‌ ವಿರುದ್ಧ ಸಲ್ಲಿಸಲಾಗಿರುವ ಆರೋಪ ಪಟ್ಟಿಯನ್ನು ದಿಲ್ಲಿಯ ಸ್ಥಳೀಯ ಕೋರ್ಟ್‌ ಗುರುವಾರ ಪರಿಶೀಲಿಸಿತು. ಇದರ ಜತೆಗೆ ಮಧ್ಯವರ್ತಿ ಸುಕೇಶ್‌ ಚಂದ್ರಶೇಖರನ್‌ ವಿರುದ್ಧ ಪ್ರೊಡಕ್ಷನ್‌ ವಾರೆಂಟ್‌ ಕೂಡಾ ಹೊರಡಿಸಿದೆ. ದಿಲ್ಲಿಯಲ್ಲಿಯೇ ಮತ್ತೂಂ ದು ಕೋರ್ಟಲ್ಲಿ ಆತನ ವಿರುದ್ಧ ಪ್ರಕರಣದ ವಿಚಾ ರಣೆ ಇದ್ದುದರಿಂದ ಅದರ ವಿಚಾರಣೆಗಾಗಿ ಕರೆದೊಯ್ಯ ಲಾಗಿದೆ ಎಂದು ನ್ಯಾಯಾಲಯಕ್ಕೆ ಅರಿಕೆ ಮಾಡಿಕೊಳ್ಳಲಾಗಿದೆ.

Advertisement

ತಮಿಳು ಸೂಪರ್‌ಸ್ಟಾರ್‌ ರಜನಿಕಾಂತ್‌ ಸಕ್ರಿಯ ರಾಜಕೀಯಕ್ಕೆ ಪ್ರವೇಶಿಸುವುದನ್ನು ನಾನು ಬೆಂಬಲಿಸುತ್ತೇನೆ. ವೈಯಕ್ತಿಕವಾಗಿ ನನಗೆ ರಜನಿಕಾಂತ್‌ ಪರಿಚಯ ಇದೆ. ಅವರೊಬ್ಬ ಅದ್ಭುತ ನಟ. ಒಂದು ವೇಳೆ ಅವರು ರಾಜಕೀಯ ಪ್ರವೇಶಕ್ಕೆ ನಿರ್ಧರಿಸಿದ್ದಾರೆ ಎಂದಾದರೆ, ಸೂಕ್ತವಾದ ನಿರ್ಧಾರ .
– ಶಾರುಖ್‌ ಖಾನ್‌ ಬಾಲಿವುಡ್‌ ನಟ

Advertisement

Udayavani is now on Telegram. Click here to join our channel and stay updated with the latest news.

Next