Advertisement

ತಪ್ಪು ಸಂದೇಶ ಕೊಟ್ಟಿತೇ ಈ ಗೆಲುವು? ಆರ್‌ ಕೆ ನಗರ ಫ‌ಲಿತಾಂಶ

10:56 AM Dec 26, 2017 | Team Udayavani |

ಇತ್ತೀಚಿನ ವರ್ಷಗಳಿಗೆ ಹೋಲಿಕೆ ಮಾಡಿದಾಗ ತಮಿಳುನಾಡಿನ ರಾಧಾಕೃಷ್ಣ ನಗರ ಅಥವಾ ಆರ್‌.ಕೆ.ನಗರ ಕ್ಷೇತ್ರದ ಉಪ ಚುನಾವಣೆಯಷ್ಟು ಸುದ್ದಿ ಮಾಡಿದ್ದು ಮತ್ತು ವಿವಾದಕ್ಕೆ ಒಳಗಾದದ್ದು ಇಲ್ಲವೆಂದೇ ಹೇಳಬೇಕು. ಆ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದ ದಿ.ಜಯಲಲಿತಾ ನಿಧನ ಹೊಂದಿದ ಬಳಿಕ ಈ ಸ್ಥಳ ಹಲವು ಕಾರಣಗಳಿಗಾಗಿ ಸುದ್ದಿ ಮಾಡುತ್ತಲೇ ಇದೆ. 2017ರ ಏಪ್ರಿಲ್‌ನಲ್ಲಿಯೇ ಅಲ್ಲಿ ಮತದಾನ ನಡೆಯಬೇಕಾಗಿತ್ತು.

Advertisement

ಪ್ರಜಾಪ್ರಭುತ್ವ ವ್ಯವಸ್ಥೆಯನ್ನೇ ಅಣಕಿಸುವಂತೆ ಅಲ್ಲಿ ಹಣ ಹಂಚಿಕೆ ಯಾಗಿತ್ತು. ಹೀಗಾಗಿ ಕೇಂದ್ರ ಚುನಾವಣಾ ಆಯೋಗ ಪ್ರಕ್ರಿಯೆನ್ನೇ ರದ್ದು ಮಾಡಿತ್ತು. ಇದೀಗ ಮತ್ತೆ ಅಲ್ಲಿ ಚುನಾವಣೆ ನಡೆದು ಫ‌ಲಿತಾಂಶವೂ ಬಂದು ಟಿ.ಟಿ.ವಿ.ದಿನಕರನ್‌ ಆಡಳಿತಾರೂಡ ಎಐಎಡಿಎಂಕೆ ಅಭ್ಯರ್ಥಿ ಇ.ಮಧುಸೂಧನನ್‌ಗಿಂತ 40,707 ಮತಗಳ ಅಂತರದಿಂದ ಗೆದ್ದಿದ್ದಾರೆ. ಈ ಜಯದ ಮೂಲಕ ಅವರು ತಮಿಳುನಾಡಿನಲ್ಲಿ ದಾಖಲೆಯನ್ನೂ ನಿರ್ಮಿಸಿದ್ದಾರೆ. ಅದೇನೆಂದರೆ ಆ ರಾಜ್ಯದ ಇತಿಹಾಸದಲ್ಲಿಯೇ ಚುನಾವಣೆಯಲ್ಲಿ ಡಿಎಂಕೆ ಅಥವಾ ಎಐಎಡಿಎಂಕೆ ಹೊರತಾದ ಅಭ್ಯರ್ಥಿ ಗೆದ್ದಿದ್ದೇ ಇಲ್ಲ. ಅದನ್ನು ಅವರು ಮುರಿದಿದ್ದಾರೆ.

ಆರು ತಿಂಗಳ ಹಿಂದೆ ಹಣ ಹಂಚಿದ ಆರೋಪದ ಹಿನ್ನೆಲೆಯಲ್ಲಿ ಅಲ್ಲಿ ಚುನಾವಣೆ ರದ್ದಾಗಿತ್ತು. ಈ ಬಾರಿ ಕೂಡ ವ್ಯಾಪಕ ಪ್ರಮಾಣದಲ್ಲಿ ಹಣ, ಉಡುಗೊರೆ ಹಂಚಿಕೆಯಾಗಿದೆ ಎಂದು ಹಲವು ಇಂಗ್ಲಿಷ್‌ ಸುದ್ದಿ ವಾಹಿನಿಗಳು ವರದಿ ಮಾಡಿದ್ದವು. ಅವರ ಈ ಗೆಲುವು ಹಲವು ತಪ್ಪು ಸಂದೇಶಗಳನ್ನು ರವಾನಿಸಿದೆ ಎಂದೇ ವಿಷಾದದಿಂದ ಹೇಳಬೇಕಾತ್ತದೆ. ಹಣ, ಉಡುಗೊರೆ ಹಂಚಿಕೆಯನ್ನು ಈ ಬಾರಿಯೂ ತಡೆಯಲು ಸಾಧ್ಯವೇ ಆಗಿರಲಿಲ್ಲ.

ಹಾಗೆಂದುಕೊಂಡು ದಿನಕರನ್‌ ಹಣ ಹಂಚಿಲ್ಲ ಎಂದಲ್ಲ. ಜಯಲಲಿತಾ ಅಕ್ರಮ ಆಸ್ತಿ ಪ್ರಕರಣದಲ್ಲಿ ಶಶಿಕಲಾ ಜೈಲಿಗೆ ಹೋದ ಬಳಿಕ ಪದೇ ಪದೆ ದಿನಕರನ್‌ ಕುಟುಂಬಕ್ಕೆ ಸೇರಿದ 131 ಸ್ಥಳಗಳಲ್ಲಿ ಕೇಂದ್ರ ತನಿಖಾ ಸಂಸ್ಥೆಗಳಿಂದ ದಾಳಿ ನಡೆಯಿತು. ಇದರಿಂದಾಗಿ ಅವರನ್ನು ಬಲಿಪಶು 
ಮಾಡಲಾಗುತ್ತಿದೆ ಎಂಬ ಅಂಶ ನಿಧಾನಕ್ಕೆ ಆರ್‌.ಕೆ.ನಗರದಲ್ಲಿ ಪಸರಿಸಿತು.

ಅದು ಅವರಿಗೆ ಅನುಕೂಲ ಆಯಿತು. ಎಐಎಡಿಎಂಕೆ ಯವರು ಹಣ ಹಂಚುತ್ತಿದ್ದರೂ ಅವರ ಮೇಲೆ ದಾಳಿ ನಡೆದಿರಲಿಲ್ಲ ಎಂಬ ಟೀಕೆ ಇದೆ. ಇನ್ನು, ಈ ಚುನಾವಣೆಗೆ ಕೆಲವೇ ಗಂಟೆಗಳ ಮುನ್ನ ದಿನಕರನ್‌ ಬಣದಿಂದ ಬಿಡುಗಡೆಯಾಗಿತ್ತೆನ್ನಲಾದ ಆಸ್ಪತ್ರೆಯಲ್ಲಿನ ಜಯಲಲಿತಾ ಅವರ ಕೊನೆಯ ದಿನಗಳ ವಿಡಿಯೋ ತುಣುಕೂ ಸಹ ಮತದಾರರ ಮೇಲೆ ಪರಿಣಾಮ ಬೀರಿರಲಿಕ್ಕೂ ಸಾಕು. ಚುನಾವಣಾ ಆಯೋಗ ಇದನ್ನು ನಿಷೇಧಿಸುವ ಹೊತ್ತಿಗೆ ಇದು ಲಕ್ಷಾಂತರ ಜನರ ಮೊಬೈಲ್‌ಗ‌ಳನ್ನು ಮುಟ್ಟಿರುತ್ತಾದ್ದರಿಂದ ದಿನಕರನ್‌ ಪರವಾಗಿ ಜನಮತ ಒಲಿದುಬಂದಿರಬಹುದು. ಅದೇನೇ ಇರಲಿ, ಪರಿಸ್ಥಿತಿಯನ್ನು ಲಾಭವಾಗಿ ಪರಿವರ್ತಿಸಿಕೊಂಡು ಗೆದ್ದ ದಿನಕರನ್‌ ಬಾಯಿಯಿಂದ ಹಲವು ಪ್ರಮುಖ ಮುನ್ಸೂಚನೆಗಳನ್ನು ಹೊರಡಿಸಿದೆ. ಅವರೇ ಹೇಳಿರುವಂತೆ ಮುಂದಿನ ಮೂರು ತಿಂಗಳಲ್ಲಿ ಓ.ಪನ್ನೀರ್‌ಸೆಲ್ವಂ-ಎಡಪ್ಪಾಡಿ ಕೆ.ಪಳನಿಸ್ವಾಮಿ ಬಣದ ಸರ್ಕಾರ ಪತನಗೊಳ್ಳಲಿದೆ.

Advertisement

ದಿನಕರನ್‌ ವಿಜಯದಿಂದ ಆಡಳಿತಾರೂಢ ಎಐಎಡಿಎಂಕೆ ಕಂಗೆಟ್ಟದ್ದು ನಿಜವೇ. ಸಾಮಾನ್ಯವಾಗಿ ಯಾವುದೇ ರಾಜ್ಯದಲ್ಲಿ ಮೊದಲ ಒಂದರಿಂದ ಎರಡೂವರೆ ವರ್ಷಗಳಲ್ಲಿ ಉಪ ಚುನಾವಣೆ ನಡೆದರೆ ಆಡಳಿತ ಪಕ್ಷವೇ ಗೆಲ್ಲುತ್ತದೆ. ನಂತರದ ಅಂದರೆ ಎರಡೂವರೆ ಅಥವಾ ವಿಧಾನಸಭೆ 
ಚುನಾವಣೆಗಿಂತ ಒಂದು ವರ್ಷಕ್ಕಿಂತ ಮೊದಲು ಉಪ ಚುನಾವಣೆ ನಡೆದರೆ ಪ್ರತಿಪಕ್ಷದ ಅಭ್ಯರ್ಥಿ ಗೆಲ್ಲುತ್ತಾರೆ. ಆದರೆ ತಮಿಳುನಾಡಿನ ರಾಜಕೀಯ ಇತಿಹಾಸದಲ್ಲಿ ನಡೆಯದೇ ಇದ್ದ ಫ‌ಲಿತಾಂಶ 2017ರ ಆರ್‌. ಕೆ.ನಗರ ಕ್ಷೇತ್ರದ ಫ‌ಲಿತಾಂಶ ತೋರಿಸಿಕೊಟ್ಟಿದೆ. ಅದರ ಪರಿಣಾಮವಾಗಿಯೇ ದಿನಕರನ್‌ ಬಣಕ್ಕೆ ಸೇರಿದ ಒಂಬತ್ತು ಮಂದಿಯನ್ನು ಎಐಎಡಿಎಂಕೆ ವಜಾ ಮಾಡಿದೆ. ಅದರಲ್ಲಿ ಕರ್ನಾಟಕ ಘಟಕದ ಅಧ್ಯಕ್ಷ
ವಿ.ಆರ್‌.ಪುಗಳೇಂದಿ ಕೂಡ ಒಬ್ಬರು.

ಆಡಳಿತಾರೂಢ ಎಐಎಡಿಎಂಕೆ ಗಮನಿಸಬೇಕಾದ ಮತ್ತೂಂದು ಅಂಶವಿದೆ. ಪಕ್ಷದಲ್ಲಿ 18 ಮಂದಿ ದಿನಕರನ್‌ ಬೆಂಬಲಿಗರು ಇದ್ದಾರೆ. ಅದಕ್ಕೆ ಪೂರಕವಾಗಿ ತಮಿಳುನಾಡು ವಿಧಾನಸಭೆ ಸಭಾಧ್ಯಕ್ಷ ಪಿ.ಧನಪಾಲನ್‌ ಸೆಪ್ಟೆಂಬರ್‌ನಲ್ಲಿ ಹಾಲಿ ಸರ್ಕಾರ ವಿಶ್ವಾಸ ಮತ ಕೋರುವ ಪೂರ್ವದಲ್ಲಿ 18 ಮಂದಿ ಭಿನ್ನಮತೀಯ ಶಾಸಕರನ್ನು ಅನರ್ಹಗೊಳಿಸಿದ್ದರು. ಅವರೆಲ್ಲರೂ ದಿನಕರನ್‌ ಬೆಂಬಲಿಗರೇ. ಸಂಖ್ಯಾ ಬಲವನ್ನು ನೋಡಿದರೆ ಸರ್ಕಾರ ಸುರಕ್ಷಿತವೇ.ಇನ್ನು ಡಿಎಂಕೆ ವತಿಯಿಂದ ನೋಡುವುದಿದ್ದರೆ ಈ ಫ‌ಲಿತಾಂಶ ಮುಖಭಂಗ ಎಂದು ಹೇಳಲು ಸಾಧ್ಯವಿಲ್ಲ. 
ಚುನಾವಣೆಯಲ್ಲಿ ಹಣಬಲ, ತೋಳ್ಬಲ ನಿಯಂತ್ರಿಸಲು ಯಾವ ಕ್ರಮ ಕೈಗೊಂಡಿದ್ದೀರಿ ಎಂದು ಕೇಂದ್ರಕ್ಕೆ ಸುಪ್ರೀಂಕೋರ್ಟ್‌ ಪ್ರಶ್ನಿಸಿದಾಗ ನಿರುತ್ತರವೇ ಉತ್ತರವಾಗಿತ್ತು.  ಪ್ರಜಾಪ್ರಭುತ್ವದಲ್ಲಿ ಮತದಾನವೇ ಉತ್ತಮ ವ್ಯವಸ್ಥೆಯಾಗಿರುವಾಗ ಹಣ ಹಂಚುವಿಕೆ ಮತ್ತಿತರ ಸಲ್ಲದ ವ್ಯವಸ್ಥೆಗಳು ಜಾರಿಯಾದರೆ ಜನರಿಗೆ ವ್ಯವಸ್ಥೆ ಮೇಲೆಯೇ ಪ್ರಶ್ನೆ ಮೂಡುತ್ತದೆ.

Advertisement

Udayavani is now on Telegram. Click here to join our channel and stay updated with the latest news.

Next