Advertisement

ಟಿ.ಟಿ. ವಾರ್ಡ್‌ ಆಶ್ರಯ ಕಾಲನಿಗೆ ಚರಂಡಿ ವ್ಯವಸ್ಥೆ ಬೇಕು

06:40 AM Jun 26, 2018 | |

ಕುಂದಾಪುರ: ಪುರಸಭೆಯ ಟಿ.ಟಿ. ರಸ್ತೆ ವಾರ್ಡ್‌ನಲ್ಲಿ ಪ್ರಮುಖವಾಗಿ ಇರುವುದು ಆಶ್ರಯ ಕಾಲನಿ. ಒಂದೂ ಮುಕ್ಕಾಲು ಸೆಂಟ್ಸೆನಂತೆ ನಿವೇಶನ ಹೊಂದಿದ 109 ಕುಟುಂಬಗಳು ಈ ಪ್ರದೇಶದಲ್ಲಿವೆ. ಆದರೆ ಇಲ್ಲಿಗೆ ಬರುವ ರಸ್ತೆ, ಇಲ್ಲಿನ ಕಾಲನಿಯೊಳಗಿನ ರಸ್ತೆ ಗತಿ ದೇವರಿಗೇ ಪ್ರೀತಿ. 1 ಸಾವಿರದಷ್ಟು ಮತದಾರರು ಇದ್ದು 220ರಷ್ಟು ಮನೆಗಳಿವೆ.

Advertisement

ಚರಂಡಿ ಇಲ್ಲ
ಆಶ್ರಯ ಕಾಲನಿಯಲ್ಲಿ ಒಳಚರಂಡಿ ನಿರ್ಮಾಣ ವಾಗಿದೆ. ಆದರೆ ಎಲ್ಲೂ ಅದು ಪೂರ್ಣವಾಗಿಲ್ಲ. ಅರ್ಧರ್ಧ ಕಾಮಗಾರಿಯಾಗಿದೆ. ಬಾಕಿ ಉಳಿದ ಕಾಮಗಾರಿ ಯಾವಾಗ ನಡೆಯಲಿದೆ ಎನ್ನುವುದು ಯಕ್ಷಪ್ರಶ್ನೆಯಾಗಿದೆ. ಕೆಲವು ಮನೆಗಳ ಬಾಗಿಲಿಗೆ ಚರಂಡಿ ಕೆಲಸ ನಿಂತಿದೆ. ಅಲ್ಲಿಂದ ಮುಂದೆ ನೀರೆಲ್ಲಿಗೆ ಹೋಗುವುದು ಎನ್ನುವದಕ್ಕೆ ಉತ್ತರ ಇಲ್ಲ. ಅಂತೆಯೇ ಪೌರಕಾರ್ಮಿಕರೊಬ್ಬರ ಮನೆಯಿದೆ. ಅವರ ಮನೆ ಬಾಗಿಲಿಗೆ ಚರಂಡಿ ನಿಲ್ಲಿಸಲಾಗಿದೆ. ಅವರ ಮನೆ ಎದುರು ಸದಾ ಚರಂಡಿ ನೀರು. ಅದರ ದುರ್ನಾತ. ನೀರು ಜೋರು ಹರಿದರೆ ಮನೆಗೆಲ್ಲ ನೀರು ಬರುವ ಭೀತಿ ಎನ್ನುತ್ತಾರೆ ಸ್ಥಳೀಯರು. ಇಲ್ಲಿಂದ ಹರಿದು ಹೋಗುವ ತ್ಯಾಜ್ಯ ಜಲ ಒಂದಷ್ಟು ದೂರ ಹೋಗಿ ಚರಂಡಿಯಲ್ಲಿ ಹರಿಯದೆ ಸಂಗ್ರಹವಾಗುತ್ತದೆ.  
 
ಅಂಗನವಾಡಿ ಜಾಗ
ಇಲ್ಲೊಂದು ಜಾಗ ಇದೆ. ಅದನ್ನು ಹತ್ತಿರದಲ್ಲಿ ನಡೆಯುತ್ತಿದ್ದ ಶಿಶುಮಂದಿರವನ್ನು ಸ್ಥಳಾಂತರಿಸಲು ಅಂಗನವಾಡಿ ರಚಿಸಲು ಮೀಸಲಿಡಲಾಗಿತ್ತು. ಆದರೆ ಅಂಗನವಾಡಿ ಶಾಲೆ ಸಮೀಪದಲ್ಲಿ ನಿರ್ಮಾಣವಾಯಿತು. ಹಾಗಾಗಿ ಆ ಜಾಗದಲ್ಲಿ ಹುಲ್ಲು, ಗಿಡಗಂಟಿ ಬೆಳೆದಿದೆ.

ಮುಚ್ಚಳ ಎತ್ತರ
ಮುಖ್ಯ ರಸ್ತೆಯಿಂದ ಟಿಟಿ ರಸ್ತೆ ಮೂಲಕ ಆಶ್ರಯ ಕಾಲನಿ ಸೇರಿದಂತೆ ವಿವಿಧೆಡೆ ಹೋಗುವಲ್ಲಿ ಎಲ್ಲ ಕಡೆ ಕಂಡು ಬಂದದ್ದು ಒಳಚರಂಡಿಯ ಮುಚ್ಚಳ. ರಸ್ತೆಗಿಂತ ಸುಮಾರು ಅರ್ಧ ಅಡಿ ಎತ್ತರದಲ್ಲಿ ಮುಚ್ಚಳ ಇದೆ. ದ್ವಿಚಕ್ರ ವಾಹನ ಸವಾರರು ಅರಿವಿಲ್ಲದೆ ಬಂದು ಬಿದ್ದ ಉದಾಹರಣೆ ಸಾಕಷ್ಟಿದೆಯಂತೆ. ಕಾರು ಮೊದಲಾದ ಸಣ್ಣ ಚಕ್ರದ ವಾಹನಗಳಿಗೂ ತೊಂದರೆ ಕಟ್ಟಿಟ್ಟ ಬುತ್ತಿ. 

ಉದ್ಯಾನವನ
ಈ ಕಾಲನಿ ಪಕ್ಕದಲ್ಲಿ  ಒಂದು ಉದ್ಯಾನವನ ಇದೆ. ಆದರೆ ಅದು ಹೆಸರಿಗಷ್ಟೇ ಸೀಮಿತವಾಗಿದೆ. ಉದ್ಯಾನವನದ ತುಂಬೆಲ್ಲ ಕಳೆಗಿಡಗಳೇ ಇವೆ. ಕಾಲನಿಯಲ್ಲಿ ಮಕ್ಕಳಿದ್ದರೂ ಆಟಕ್ಕೊಂದು ಮೈದಾನ ಇಲ್ಲ. ಈ ದ್ಯಾನವನವೂ ದಕ್ಕುತ್ತಿಲ್ಲ. ಅಲ್ಲೊಂದು ದೊಡ್ಡ ಬಾವಿ ಇದೆ. ಆದರೆ ಅದಕ್ಕೆ ಇಬ್ಬರು ಬಲಿಯಾಗಿದ್ದರು. ಅನಂತರ ಅದಕ್ಕೆ ಬಲೆಯ ಮುಚ್ಚಳ ಅಳವಡಿಸಲಾಗಿದೆ. ಭಾರೀ ಗಾತ್ರದ ಟ್ಯಾಂಕಿ ಕೂಡಾ ಇದೆ. ಪಕ್ಕದಲ್ಲೇ ನಿರುಪಯುಕ್ತವಾದ ಇನ್ನೊಂದು ಟ್ಯಾಂಕ್‌ ಇದೆ. ಒಟ್ಟಿನಲ್ಲಿ ಈ ವಾರ್ಡಿನ ಅನೇಕ ಕಡೆ ಚರಂಡಿ ಕಾಮಗಾರಿಯ ಸಮಸ್ಯೆಯಾದರೆ ಇನ್ನೊಂದೆಡೆ ರಸ್ತೆಗೆ ಡಾಮರಿಲ್ಲ, ಕಾಂಕ್ರೀಟ್‌ ಇಲ್ಲ ಎನ್ನುವುದೇ ಸಮಸ್ಯೆ. ಕೆಲವೆಡೆ ಕುಡಿಯುವ ನೀರಿನ ಪೈಪ್‌ ಇರುವ ಕಾರಣ ಕಾಂಕ್ರೀಟ್‌ ಸಾಧ್ಯವಿಲ್ಲ ಎಂದು ಸ್ಥಳೀಯರ ಮನವೊಲಿಸಿ ಡಾಮರು ಅಥವಾ ಇಂಟರ್‌ಲಾಕ್‌ ಹಾಕುವ ಭರವಸೆ ಕೊಡಲಾಗಿದೆ. 

ಅನುದಾನ ಇಲ್ಲ
ಆಶ್ರಯ ಕಾಲನಿಗೆ ರಸ್ತೆ ಹಾಗೂ ಚರಂಡಿ ಆಗಬೇಕಿತ್ತು. ಅನುದಾನ ಲಭ್ಯತೆ ಕೊರತೆಯಿಂದಾಗಿ ಆಗಿಲ್ಲ. ಉಳಿದ ಎಲ್ಲ ಕಡೆ ರಸ್ತೆ ನಿರ್ಮಾಣವಾಗಿದೆ. ಅಲ್ಲಿ ಪಾರ್ಕ್‌ ನಿರ್ಮಾಣವಾಗಿದೆ. ಗಿಡ ಹಾಗೂ ಬೆಂಚ್‌ ಅಳವಡಿಸಲು ಟೆಂಡರ್‌ ಆಗಿದೆ. 
– ರವಿಕಲಾ, ಸದಸ್ಯರು, ಪುರಸಭೆ 

Advertisement

ಅರ್ಧ ಕಾಮಗಾರಿ
ಒಳಚರಂಡಿ ಕಾಮಗಾರಿ ಅರ್ಧವಷ್ಟೇ ಆಗಿದ್ದು  ಪೂರ್ಣವಾಗಿಲ್ಲ. ಅದಕ್ಕಾಗಿ ಕಾಯಲಾಗುತ್ತಿದೆ. ಈ ಪ್ರದೇಶದ ತ್ಯಾಜ್ಯ ನೀರಿನ ಸಮಸ್ಯೆ ಪರಿಹಾರಕ್ಕೆ ಚರಂಡಿಯೊಂದೇ ಮಾರ್ಗವಾಗಿದೆ.
– ಉಮೇಶ್‌ ಬಿ., ನಾಮನಿರ್ದೇಶಿತ ಸದಸ್ಯರು

ದಾರಿ ದೀಪ ಇಲ್ಲ
ಅದೆಷ್ಟು ಸಮಯದಿಂದ ದೂರು ಕೊಟ್ಟರೂ ದಾರಿ ದೀಪ ಸಮಸ್ಯೆ ಇತ್ಯರ್ಥವಾಗಿಲ್ಲ. ಈ ಭಾಗದ ಜನ ಕಳೆದ 20 ವರ್ಷಗಳಿಂದ ಕೆಸರಿನಲ್ಲೇ ಒಡಾಡಬೇಕಾದ ಸ್ಥಿತಿ ಇದೆ. ಡಾಮರು ಕಾಣದ, ಕಾಂಕ್ರಿಟ್‌ ಹಾಕದ ರಸ್ತೆಯೇ ನಮಗೆ ಗತಿ.
– ಶ್ರೀಕರ್‌,ಸ್ಥಳೀಯರು

ಒಳಚರಂಡಿ ಇಲ್ಲ
ಒಳಚರಂಡಿ ಕಾಮಗಾರಿ ಪೂರ್ಣವಾಗಿಲ್ಲ. ಯಾವಾಗ ಮಾಡುತ್ತಾರೆ ಗೊತ್ತಿಲ್ಲ. ಶೀಘ್ರ ಮಾಡಿದಷ್ಟೂ ಉತ್ತಮ.
– ಶೇಖರ ಕೈಪಾಡಿ, ಸ್ಥಳೀಯರು

ಚರಂಡಿ ಆಗಿಲ್ಲ
ಚರಂಡಿ ಹೂಳೆತ್ತಿಲ್ಲ. ಒಳಚರಂಡಿ ಕಾಮಗಾರಿ ನಡೆದಿಲ್ಲ. ಕೆಲವೆಡೆ ಮಾಡಿದ್ದರೂ ಕಾಮಗಾರಿ ಸಮರ್ಪಕವಾಗಿಲ್ಲ. 
– ಟಿಬಿಯನ್‌, ಸ್ಥಳೀಯರು  

Advertisement

Udayavani is now on Telegram. Click here to join our channel and stay updated with the latest news.

Next