Advertisement
ಮುಷ್ಕರದ ಹಿನ್ನೆಲೆಯಲ್ಲಿ ರೈಲ್ವೆ ಖಾಸಗೀಕರಣ ವಿರೋಧಿಸಿ ಹಾಗೂ ಕಲಬುರಗಿ ರೈಲ್ವೆ ವಿಭಾಗೀಯ ಕಚೇರಿ ಸ್ಥಾಪನೆಗೆ ಒತ್ತಾಯಿಸಿ ಕಾರ್ಮಿಕ ಮುಖಂಡರು ಹಾಗೂ ಕಾರ್ಯಕರ್ತರು ಬುಧವಾರ ನಗರದ ರೈಲ್ವೆ ನಿಲ್ದಾಣಕ್ಕೆ ಮುತ್ತಿಗೆ ಹಾಕಲು ಯತ್ನಿಸಿದಾಗ ಪೊಲೀಸರು ತಡೆದಿದ್ದರಿಂದ ಪ್ರತಿಭಟನೆ ತೀವ್ರ ಸ್ವರೂಪ ಪಡೆಯಿತು.
Related Articles
Advertisement
ಮಾನವ ಸರಪಳಿ, ರಸ್ತೆ ತಡೆ: ಹಕ್ಕು ಬದ್ಧವಾಗಿ ಪ್ರತಿಭಟಿಸುತ್ತಿದ್ದ ಮುಖಂಡರನ್ನು ಒತ್ತಾಯಪೂರ್ವವಾಗಿ ಪೊಲೀಸರು ಬಂಧಿಸಿದ್ದಾರೆ ಎಂದು ಪ್ರತಿಭಟನಾನಿರತ ಮಹಿಳೆಯರು ಆರೋಪಿಸಿದರು. ರೈಲ್ವೆ ನಿಲ್ದಾಣದ ಎದುರು ಕೆಲ ಹೊತ್ತು ಪೊಲೀಸರು ಹಾಗೂ ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು. ತದನಂತರ ಸರ್ದಾರ್ ವಲ್ಲಭಭಾಯಿ ಪಟೇಲ್ ವೃತ್ತಕ್ಕೆ ಆಗಮಿಸಿ ಮಾನವ ಸರಪಳಿ ನಿರ್ಮಿಸಿ ಸುಮಾರು ಎರಡು ಗಂಟೆಗಳ ಕಾಲ ರಸ್ತೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು. ಮುಖಂಡರನ್ನು ಬಿಡುಗಡೆಗೊಳಿಸಲಾಗುವುದು ಎಂದು ಪೊಲೀಸರು ತಿಳಿಸಿದ ನಂತರ ಪ್ರತಿಭಟನೆ ಕೈಬಿಡಲಾಯಿತು.
ಪ್ರತಿಭಟನೆ ಹಿನ್ನೆಲೆಯಲ್ಲಿ ಹಳೆ ಜೇವರ್ಗಿ ರಸ್ತೆ, ಜಿಲ್ಲಾಧಿಕಾರಿ, ಪಿಡಿಎ ಕಾಲೇಜು ಮತ್ತು ರೈಲ್ವೆ ನಿಲ್ದಾಣ ರಸ್ತೆಯಲ್ಲಿ ಪೊಲೀಸರು ಬ್ಯಾರಿಕೇಡ್‌ಗಳನ್ನು ಹಾಕಿದ್ದರು. ಇದರಿಂದ ಸಾರ್ವಜನಿಕರು ಹಾಗೂ ವಾಹನ ಸವಾರರು ಸಂಚರಿಸಲು ತೊಂದರೆ ಅನುಭವಿಸುವಂತಾಯಿತು. ಎಂದಿನಂತೆ ಸಾಗಿದ ಜನಜೀವನ: ಮುಷ್ಕರ ಹಿನ್ನೆಲೆಯಲ್ಲಿ ಮಂಗಳವಾರ ಶಾಲಾ-ಕಾಲೇಜುಗಳಿಗೆ ರಜೆ, ಸಾರಿಗೆ ಬಸ್ ಸಂಚಾರ ಸ್ಥಗಿತ ಹಾಗೂ ಹಲವು ಅಂಗಡಿ ಮುಂಗಟ್ಟುಗಳು ಬಂದ್ ಆಗಿದ್ದರಿಂದ ಸಾರ್ವಜನಿಕರಿಗೆ ಮುಷ್ಕರದ ಬಿಸಿ ತಟ್ಟಿತ್ತು. ಆದರೆ, ಬುಧವಾರ ದಿನ ಶಾಲಾ-ಕಾಲೇಜುಗಳು, ಬಸ್ ಸಂಚಾರ ಆರಂಭವಾಗಿದ್ದರಿಂದ ನಗರದಲ್ಲಿ ಜನಜೀವನ ಸಹಜ ಸ್ಥಿತಿಯಲ್ಲಿತ್ತು.
ಹಾಡಿನಲ್ಲೂ ಕೇಂದ್ರ ಸರ್ಕಾರದ ವಿರುದ್ಧ ಕಿಡಿ: ಅಂಗನವಾಡಿ ಹಾಗೂ ಬಿಸಿಯೂಟದ ಕಾರ್ಯಕರ್ತೆಯರು ಜಿಲ್ಲಾಧಿಕಾರಿ ಕಚೇರಿ ಎದುರು ಅಹೋರಾತ್ರಿ ಧರಣಿ ಕೈಗೊಂಡು, ಧರಣಿ ಸ್ಥಳದಲ್ಲೇ ರಾತ್ರಿ ಊಟ ಹಾಗೂ ಬೆಳಗ್ಗೆ ಉಪಹಾರ ತಯಾರಿಸಿ ಸೇವಿಸಿದರು. ಜತೆಗೆ ಪ್ರತಿಭಟನಾನಿತರು ಮಹಿಳೆಯರು ಜಾನಪದ ಹಾಡು ಹಾಗೂ ಲಂಬಾಣಿ ನೃತ್ಯ ಮಾಡಿ ವಿನೂತನವಾಗಿ ಪ್ರತಿಭಟನೆ ನಡೆಸಿದರು. ಅಲ್ಲದೇ, ಹಾಡಿನಲ್ಲೂ ಮೋದಿ ಸರ್ಕಾರ ವಿರುದ್ಧ ಪದಗಟ್ಟುಗಳನ್ನು ಕಟ್ಟಿ ಹಾಡಿ ಕಿಡಿ ಕಾರಿದರು.