Advertisement

ಫ್ಲೋರೈಡ್‌ ನೀರಿನ ಸಮಸ್ಯೆ ನೀಗಿಸಲು ಪಣ

04:45 PM Apr 08, 2022 | Team Udayavani |

ಚಿತ್ರದುರ್ಗ: ಚಿತ್ರದುರ್ಗ ತಾಲೂಕಿನ ಬಹುತೇಕ ಹಳ್ಳಿಗಳು ಫ್ಲೋರೈಡ್‌ ನೀರಿನ ಸಮಸ್ಯೆ ಅನುಭವಿ ಸುತ್ತಿದ್ದವು. ಈ ಸಮಸ್ಯೆ ಬಗೆಹರಿಸುವ ನಿಟ್ಟಿನಲ್ಲಿ ಶಾಸಕ ಜಿ.ಎಚ್‌. ತಿಪ್ಪಾರೆಡ್ಡಿ ದಿಟ್ಟ ಹೆಜ್ಜೆ ಇಟ್ಟಿದ್ದಾರೆ. ತಾಲೂಕಿನ 173 ಹಳ್ಳಿಗಳಿಗೆ ವಾಣಿವಿಲಾಸ ಸಾಗರ ಜಲಾಶಯದಿಂದ ನೀರು ತರುವ ಯೋಜನೆಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅಂಕಿತ ಹಾಕಿದ್ದಾರೆ.

Advertisement

ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಸಮೀಕ್ಷೆ ನಡೆಸಿ ಸಲ್ಲಿಸಿದ್ದ ವರದಿಗೆ ಒಪ್ಪಿಗೆ ಸೂಚಿಸಿರುವ ಸರ್ಕಾರ, 38 ಕಿಮೀ ದೂರದಿಂದ ನೀರು ತರುವ ಯೋಜನೆಗೆ ಒಪ್ಪಿಗೆ ಸೂಚಿಸಿದೆ. ಹೊಸದುರ್ಗ ತಾಲೂಕಿನ ಲಕ್ಕಿಹಳ್ಳಿ ಬಳಿ ಜಾಕ್‌ವೆಲ್‌ ನಿರ್ಮಿಸಿ ನೀರು ಶುದ್ಧೀಕರಣ ಮಾಡಿ ಅಲ್ಲಿಂದ ಹಿರಿಯೂರು ತಾಲೂಕಿನ ಮೂಲಕ ನೀರು ಚಿತ್ರದುರ್ಗಕ್ಕೆ ಹರಿದು ಬರಲಿದೆ. ಮಾರ್ಗ ಮಧ್ಯೆ ಬರುವ ಹಲವು ಹಳ್ಳಿಗಳು ಯೋಜನೆಯಲ್ಲಿ ಪಾಲು ಪಡೆಯಲಿವೆ. ಇದಕ್ಕಾಗಿ ಅಂದಾಜು 393 ಕೋಟಿ ರೂ. ಯೋಜನಾ ವೆಚ್ಚ ತಯಾರಿಸಲಾಗಿದೆ. ಚಿತ್ರದುರ್ಗ ನಗರಕ್ಕೆ ಈಗಾಗಲೇ ಶಾಂತಿ ಸಾಗರ ಹಾಗೂ ವಿವಿ ಸಾಗರದ ನೀರು ಸರಬರಾಜಾಗುತ್ತಿದೆ.

ಇದರೊಟ್ಟಿಗೆ ಭರಮಸಾಗರ, ಸಿರಿಗೆರೆ ಭಾಗದ 35 ಹಳ್ಳಿಗಳಿಗೆ ಶಾಂತಿಸಾಗರ ನೀರು ಪೂರೈಕೆ ಮಾಡಲಾಗುತ್ತಿದೆ. ಇನ್ನು ಪಾವಗಡ ತಾಲೂಕಿಗೆ ತುಂಗಭದ್ರಾ ಹಿನ್ನೀರಿನಿಂದ ಕುಡಿಯುವ ನೀರು ತೆಗೆದುಕೊಂಡು ಹೋಗುವ ಯೋಜನೆಯಲ್ಲಿ ಚಿತ್ರದುರ್ಗ ತಾಲೂಕಿನ ತುರುವನೂರು ಹೋಬಳಿಯ 59 ಹಳ್ಳಿಗಳನ್ನು ಸೇರಿಸಿಕೊಳ್ಳಲಾಗಿದೆ. ಈ ಯೋಜನೆಯಲ್ಲಿ ಮೊಳಕಾಲ್ಮೂರು ತಾಲೂಕಿನ 135 ಹಾಗೂ ಚಳ್ಳಕೆರೆ ತಾಲೂಕಿನ 341 ಹಳ್ಳಿಗಳಿಗೂ ನೀರು ತಲುಪಿಸುವ ಯೋಜನೆ ರೂಪಿಸಲಾಗಿದೆ. ಇದರಲ್ಲಿ ಚಿತ್ರದುರ್ಗ ತಾಲೂಕಿನ ತುರುವನೂರು ಹೋಬಳಿಯನ್ನು ಮಾತ್ರ ಸೇರಿಸಿಕೊಳ್ಳಲಾಗಿತ್ತು. ಈಗ ವಿವಿ ಸಾಗರದಿಂದ 173 ಹಳ್ಳಿಗಳಿಗೆ ನೀರು ಕೊಡುವ ಯೋಜನೆಯಲ್ಲಿ ಉಳಿದ ಇತರೆ ಹಳ್ಳಿಗಳ ನೀರಿನ ದಾಹವೂ ತೀರಲಿದೆ.

ಇದರಲ್ಲಿ ಕೆಲ ಯೋಜನೆಗಳು ಟೆಂಡರ್‌ ಹಂತದಲ್ಲಿದ್ದರೆ, ಇನ್ನೂ ಕೆಲವು ಕಾಮಗಾರಿ ನಡೆಯುತ್ತಿವೆ. ಯಾವ ಹಳ್ಳಿಗಳಿಗೆ ಓವರ್‌ಹೆಡ್‌ ಟ್ಯಾಂಕ್‌ ಬೇಕು, ಎಲ್ಲಿ ರೈಸಿಂಗ್‌ ಮೈನ್‌ ಅಳವಡಿಸಬೇಕು ಎಂಬಿತ್ಯಾದಿ ಸಮೀಕ್ಷೆ ನಡೆಸಲಾಗುತ್ತಿದ್ದು, ಮುಂದಿನ ಒಂದೆರಡು ವರ್ಷಗಳಲ್ಲಿ ಜಲಾಶಯ ಮೂಲದ ನೀರು ಕುಡಿಯುವ ಅವಕಾಶ ಬರದ ನಾಡಿನ ಜನರಿಗೆ ದೊರೆಯಲಿದೆ.

ಚಿತ್ರದುರ್ಗ ನಗರಕ್ಕೆ 2007ರಲ್ಲೇ ಮೊದಲ ಹಂತದಲ್ಲಿ ಕುಡಿಯುವ ನೀರು ಒದಗಿಸಲಾಗಿತ್ತು. ಎರಡನೇ ಹಂತದಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ಅನುದಾನದಲ್ಲಿ 118 ಕೋಟಿ ರೂ. ವೆಚ್ಚದ ಯೋಜನೆ ನಡೆಯುತ್ತಿದ್ದು,ನಲ್ಲಿ ಸಂಪರ್ಕ ಬಾಕಿ ಇದೆ. ನಗರದಲ್ಲಿ ಸಮಸ್ಯೆ ಇಲ್ಲ. ಗ್ರಾಮಾಂತರ ಪ್ರದೇಶಕ್ಕೆ ವಿವಿ ಸಾಗರದಿಂದ 0.36 ಟಿಎಂಸಿ ನೀರನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಒದಗಿಸಿದ್ದಾರೆ. ಈ ವಾರದಲ್ಲಿ ಟೆಂಡರ್‌ ಆಗಲಿದ್ದು, ಮೇ-ಜೂನ್‌ ತಿಂಗಳಲ್ಲಿ ಕಾಮಗಾರಿ ಆರಂಭವಾಗಲಿದೆ. ಜಿ.ಎಚ್‌. ತಿಪ್ಪಾರೆಡ್ಡಿ, ಚಿತ್ರದುರ್ಗ ಶಾಸಕರು

Advertisement

ತಿಪ್ಪೇಸ್ವಾಮಿ ನಾಕೀಕೆರೆ

Advertisement

Udayavani is now on Telegram. Click here to join our channel and stay updated with the latest news.

Next