ಬೆಂಗಳೂರು: ಬಾಡೂಟದ ಕಾರ್ಯಕ್ರಮಕ್ಕೆ ಕರೆಯಲಿಲ್ಲ ಎಂಬ ಕಾರಣಕ್ಕೆ ಸ್ನೇಹಿತರ ಮೇಲೆ ಹಲ್ಲೆ ನಡೆಸಿದ ಇಬ್ಬರು ಆರೋಪಿಗಳನ್ನು ಅನ್ನಪೂಣೇಶ್ವರಿನಗರ ಪೊಲೀಸರು ಬಂಧಿಸಿದ್ದಾರೆ. ಗುಡ್ಡದಹಳ್ಳಿಯ ವಿಜಯ್‌ಕುಮಾರ್ (35) ಮತ್ತು ಮಾಗಡಿ ರಸ್ತೆ ಮಾಳಗಾಳದ ಆನಂದ್ (25) ಬಂಧಿತರು. ಪ್ರಮುಖ ಆರೋಪಿ ಶ್ರೀಧರ್ ಮತ್ತು ನವೀನ್ ತಲೆಮರೆಸಿಕೊಂಡಿದ್ದು, ಬಂಧನಕ್ಕೆ ಶೋಧ ಕಾರ್ಯ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಮಾಳಗಾಳದ ಮನು ಎಂಬಾತ ಕಳೆದ ವಾರ ತನ್ನ ಸ್ನೇಹಿತರಿಗೆ ಬಾಡೂಟದ ಪಾರ್ಟಿ ಏರ್ಪಡಿಸಿದ್ದ. ಎಲ್ಲ ಸ್ನೇಹಿತರನ್ನು ಕರೆದು ಆರೋಪಿ ಶ್ರೀಧರ್‌ನನ್ನು ಆಹ್ವಾನಿಸಿರಲಿಲ್ಲ. ಇದರಿಂದ ಕೋಪಗೊಂಡ ಶ್ರೀಧರ್, ಮನು ಎಂಬಾತನ ವಿರುದ್ಧ ದ್ವೇಷ ಸಾಧಿಸುತ್ತಿದ್ದ. ಭಾನುವಾರ ಶ್ರೀಧರ್ ತನ್ನ ಸ್ನೇಹಿತರಾದ ಆನಂದ್, ವಿಜಯ್, ನವೀನ್ ಜತೆ ಸೇರಿ ಬಾರ್‌ನಲ್ಲಿ ಕಂಠಪೂರ್ತಿ ಮದ್ಯ ಕುಡಿಸಿ ಮನು ಮೇಲೆ ಹಲ್ಲೆ ನಡೆಸಬೇಕೆಂದು ನಿರ್ಧರಿಸಿದ್ದ.
ಅದರಂತೆ ಬೈಕ್‌ನಲ್ಲಿಬಂದ ಆರೋಪಿಗಳು ಮಾಳಗಾಳದ ಮನು ಮನೆಗೆ ಹೋಗಿದ್ದಾರೆ. ಇಲ್ಲಿ ಸಿಗದಿದ್ದಾಗ, ಮನು ಸಹೋದರ ಕಿರಣ್ ತಲೆಗೆ ಡಾéಗರ್‌ನಿಂದ ಹಲ್ಲೆ ನಡೆಸಿ ಪರಾರಿಯಾಗಿದ್ದರು. ಸ್ಥಳೀಯರು ಗಾಯಾಳು ಕಿರಣ್‌ನನ್ನು ಆಸ್ಪತ್ರೆಗೆ ದಾಖಲಿಸಿದ್ದರು. ಈ ಸಂಬಂಧ ದೂರು ದಾಖಲಾಗಿತ್ತು. ಅಲ್ಲದೇ ಮನುಗಾಗಿ ಅಕ್ಕ-ಪಕ್ಕದ ಸ್ಥಳಗಳಲ್ಲಿ ಹುಡುಕಾಟ ನಡೆಸಿದ್ದಾರೆ.
ಆಗ ರಾತ್ರಿ 7.15ರಲ್ಲಿ ಮೂಡಳಪಾಳ್ಯದಲ್ಲಿ ಪೆಟ್ಟಿ ಅಂಗಡಿ ಮುಂದೆ ಮನು ಸ್ನೇಹಿತರಾದ ಅನಿಲ್‌ಕುಮಾರ್, ಸಂತೋಷ್‌ಕುಮಾರ್ ಮತ್ತು ನವೀನ್‌ಕುಮಾರ್ ಟೀ ಕುಡಿಯುತ್ತಿದ್ದರು. ಅಲ್ಲಿಗೆ ಹೋದ ಆರೋಪಿಗಳು ಮನು ಎಲ್ಲಿದ್ದಾನೆ ಎಂದು ಬೆದರಿಕೆ ಹಾಕಿದ್ದಾರೆ. ಗೊತ್ತಿಲ್ಲ ಎಂದಾಗ ಅಲ್ಲಿದ್ದ ಮೂವರ ಮೇಲೂ ಚೂರಿಯಿಂದ ಹಲ್ಲೆ ನಡೆಸಿದ್ದಾರೆ. ಈ ಸಂಬಂಧ ವಿಜಯನಗರ ಠಾಣೆಯಲ್ಲಿ ದೂರು ದಾಖಲಾಗಿತ್ತು.
ಈ ಎರಡೂ ಹಲ್ಲೆ ಪ್ರಕರಣಗಳಲ್ಲಿ ಒಂದೇ ಗ್ಯಾಂಗಿನ ಕೈವಾಡ ಇರುವುದು ಗೊತ್ತಾಗಿ ಬಂಧನಕ್ಕೆ ವಿಶೇಷ ತಂಡ ರಚನೆ ಮಾಡಲಾಗಿತ್ತು. ಸೋಮವಾರ ಬೆಳಗ್ಗೆ ಖಚಿತ ಮಾಹಿತಿ ಮೇರೆಗೆ ಜೆ.ಪಿ.ನಗರದಲ್ಲಿ ಆನಂದ್ ಮತ್ತು ವಿಜಯಕುಮಾರ್‌ನನ್ನು ಬಂಧಿಸಲಾಗಿದೆ. ಬಾಡೂಟದ ಪಾರ್ಟಿಗೆ ಕರೆಯದಕ್ಕೆ ಕುಡಿದ ಅಮಲಿನಲ್ಲಿ ಹಲ್ಲೆ ನಡೆಸಿದ್ದಾಗಿ ಆರೋಪಿಗಳು ವಿಚಾರಣೆಯಲ್ಲಿ ಒಪ್ಪಿಕೊಂಡಿದ್ದಾರೆ ಎಂದು ಡಿಸಿಪಿ ಅನುಚೇತ್ ತಿಳಿಸಿದ್ದಾರೆ.