ಹುಬ್ಬಳ್ಳಿ: ವಿದ್ಯಾರ್ಥಿಗಳು ಸಾಧನೆಯ ಕನಸು ನನಸಾಗಿಸುವಲ್ಲಿ ನಿರಂತರ ಪ್ರಯತ್ನ ಪಡಬೇಕು ಎಂದು ಪೊಲೀಸ್ ಆಯುಕ್ತ ಪಾಂಡುರಂಗ ರಾಣೆ ಹೇಳಿದರು. ನಗರದ ಕಾಡಸಿದ್ಧೇಶ್ವರ ಕಲಾ ಮಹಾವಿದ್ಯಾಲಯ ಹಾಗೂ ಎಚ್.ಎಸ್. ಕೋತಂಬ್ರಿ ವಿಜಾನ ಸಂಸ್ಥೆಯಲ್ಲಿ ನಡೆದ ಹಳೆಯ ವಿದ್ಯಾರ್ಥಿಗಳ ಸಮ್ಮಿಲನ ಕಾರ್ಯಕ್ರಮದಲ್ಲಿ ಅವರು ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿದರು.
ಮೊಬೈಲ್, ಕಂಪೂಟರ್, ಸಾಮಾಜಿಕ ಜಾಲತಾಣಗಳಲ್ಲಿ ಸಮಯ ವ್ಯರ್ಥ ಮಾಡದೇ ಅವುಗಳನ್ನು ಸದುದ್ದೇಶಕ್ಕೆ ಬಳಸಿಕೊಳ್ಳಬೇಕು ಎಂದರು. ಸಮಾಜ ಹಾಗೂ ದೇಶದ ಬಗ್ಗೆ ಯೋಚಿಸಬೇಕು. ಸಮಾಜಕ್ಕೆ ನಾವು ಏನು ಕೊಡಲು ಸಾಧ್ಯ ಎಂಬುದರ ಬಗ್ಗೆ ಚಿಂತನೆ ಅವಶ್ಯ ಎಂದರು.
ಪದವಿ ಘಟ್ಟ ಜೀವನದ ಬಹುಮುಖ್ಯ ಘಟ್ಟವಾಗಿದ್ದು, ಭವಿಷ್ಯದ ನಿರ್ಧಾರವನ್ನು ಈ ಸಮಯದಲ್ಲೇ ತೆಗೆದುಕೊಳ್ಳಬೇಕು. ವಿದ್ಯಾರ್ಥಿ ಜೀವನದಲ್ಲಿ ಮಾದಕ ವ್ಯಸನ, ರೌಡಿಸಂ ಮುಂತಾದವುಗಳೆಡೆ ಆಕರ್ಷಿತರಾದರೆ ಜೀವನವೇ ಕತ್ತಲಮಯವಾಗುತ್ತದೆ ಎಂದರು.
ಇನ್ನೋರ್ವ ಅತಿಥಿ, ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಅಧ್ಯಕ್ಷ ಸದಾನಂದ ಡಂಗನವರ ಮಾತನಾಡಿ, ಭಾರತ ಯುವಶಕ್ತಿಯ ದೇಶವಾಗಿದ್ದು, ಇಂದಿನ ವಿದ್ಯಾರ್ಥಿಗಳೇ ನಾಳೆಯ ನಾಡಿನ ಭವಿಷ್ಯವಾಗಿದ್ದಾರೆ. ಸತತ ಪರಿಶ್ರಮ, ಮಾಡುವ ಕೆಲಸದ ಮೇಲೆ ಶ್ರದ್ಧೆ ಇದ್ದರೆ, ಯಾವುದೇ ಕ್ಷೇತ್ರದಲ್ಲಿ ಬೇಕಾದರೂ ಸಾಧನೆ ಮಾಡಬಹುದಾಗಿದೆ ಎಂದರು.
ಕವಿವಿ ಸಿಂಡಿಕೇಟ್ ಸದಸ್ಯ ಪ್ರಶಾಂತ ಆಡೂರ ಮಾತನಾಡಿದರು. ಪ್ರಾಚಾರ್ಯ ಡಾ|ಬಿ. ಆರ್. ಪಾಟೀಲ ಅಧ್ಯಕ್ಷತೆ ವಹಿಸಿದ್ದರು. ಪ್ರೊ| ಜೆ.ಸಿ. ನಾಯ್ಕರ್ ಹಳೆಯ ವಿದ್ಯಾರ್ಥಿಗಳ ಸಂಘದ ವಾರ್ಷಿಕ ವರದಿ ವಾಚಿಸಿದರು. ಪಪೂ ಪ್ರಾಚಾರ್ಯ ಎನ್.ಎ. ಅಣ್ಣಿಗೇರಿ, ಎಲ್ಲ ಶಿಕ್ಷಕ ಹಾಗೂ ಶಿಕ್ಷಕೇತರ ಸಿಬ್ಬಂದಿ, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ ಹಳೆಯ ವಿದ್ಯಾರ್ಥಿಗಳ ಸಂಘದಿಂದ ರ್‍ಯಾಂಕ್ ವಿಜೇತರಿಗೆ ನಗದು ಬಹುಮಾನ ನೀಡಲಾಯಿತು. ಸೌಭಾಗ್ಯ ಗೌಡರ ಪ್ರಾರ್ಥಿಸಿದರು. ಹಳೆಯ ವಿದ್ಯಾರ್ಥಿಗಳ ಸಂಘದ ಕಾರ್ಯಾಧ್ಯಕ್ಷ ಎಂ.ಡಿ. ಹೊರಕೇರಿ ಸ್ವಾಗತಿಸಿದರು. ಪ್ರೊ| ಶಿವಾನಂದ ಒಂಭತ್ತರೊಟ್ಟಿ ನಿರೂಪಿಸಿದರು. ಗ್ರಂಥಪಾಲಕ ಬಿ.ಎಸ್. ಮಾಳವಾಡ ಪರಿಚಯಿಸಿದರು. ಪ್ರೊ| ಆರತಿ. ಎಂ.ಪಿ ವಂದಿಸಿದರು.