Advertisement

ಪರಿಶ್ರಮದ ಕಹಾನಿ: ಮರಳಿ ಯತ್ನವ ಮಾಡು ಛಲವ ಬಿಡದೆ..

01:37 PM Mar 19, 2023 | Team Udayavani |

ಪರಿಶ್ರಮ (Perseverance) ಎಂದರೆ ಮರಳಿ ಯತ್ನವ ಮಾಡು ಛಲವ ಬಿಡದೆ ಎಂದು ಹೇಳಬಹುದು. ಪರಿಶ್ರಮ ಎನ್ನುವುದರಲ್ಲೂ ನೂರಾರು ಕಥೆಗಳಿವೆ. ಶೇಕಡಾ ನೂರರಷ್ಟು ಪರಿಶ್ರಮ ಹಾಕಿಯೂ ಸಫ‌ಲರಾಗದೇ ಇರುವವರೂ ಇದ್ದಾರೆ, ಕೊಂಚ ಪರಿಶ್ರಮ ಮಾಡಿ ದೊಡ್ಡ ಮಟ್ಟದಲ್ಲಿ ವಿಜಯಿಯಾದವರೂ ಇದ್ದಾರೆ. ಒಟ್ಟಿನಲ್ಲಿ ಇಲ್ಲಿ ವಿಜಯಲಕ್ಷ್ಮೀ ಯಾರ ಪಾಲಿಗೆ ಹೇಗೆ, ಎಷ್ಟರ ಮಟ್ಟಿಗೆ ಒಲಿಯುತ್ತಾಳೆ ಎನ್ನುವುದೇ ಒಂದು ಬಹುದೊಡ್ಡ ಕಥೆಯಾಗುತ್ತದೆ.

Advertisement

ಮರಳಿ ಯತ್ನವ ಮಾಡು ಎನ್ನುವ ಶ್ರಮ ಎಲ್ಲಿಯ ತನಕ ಎಂದರೆ ಯಶಸ್ಸು ಕಾಣುವವರೆಗೆ ಎಂಬುದೇ ಪರಿಶ್ರಮ (Perseverance).  ಈಗ ಮಾಡಿದ ಒಂದು ಯತ್ನ, ಮೊದಲಲ್ಲೇ ಕ್ಲಿಕ್‌ ಆಗುವಂತೆ ಆಗಿದ್ದರೆ, ಸಂಶೋಧನೆ ಮತ್ತು ಅಭಿವೃದ್ಧಿ (Research and DevelopmentRD) ಎಂಬುದಕ್ಕೆ ಅರ್ಥವೇ ಇರುತ್ತಿರಲಿಲ್ಲ.  ಆರ್‌ಡಿ ಎಂಬುವುದರ  ಮತ್ತೂಂದು ಹೃಸ್ವಪದವೇ ಎಂವೈಎಂ ಅರ್ಥಾತ್‌ ಮರಳಿ ಯತ್ನವ ಮಾಡು.

ಮರಳಿ ಯತ್ನವ ಮಾಡು ಎಂದಾಗ ಅಲ್ಲಿರಬೇಕಾದದ್ದು ಎರಡು ಮನೋಭಾವಗಳು. ಒಂದು ಛಲ ಅಥವಾ ಹಠ. ಸಾಧಿಸಿಯೇ ತೀರುತ್ತೇನೆ ಎಂಬ ಹಠ. ಇಂಥಾ ಹಠಕ್ಕೆ ಪೂರಕವಾಗಿ ಇರಬೇಕಾದದ್ದು ಸಹನೆ. ಹಠ ಇದ್ದು ಸಹನೆ ಇರದಿದ್ದರೆ ಅಲ್ಲೊಂದು ಹತಾಶ ಮನೋಭಾವ ಏಳುತ್ತದೆ. ಹಲವು ಸೋಲುಗಳು ಗುಡ್ಡದಂತಿರುವ ಹತಾಶೆಯನ್ನು ಬೆಟ್ಟವನ್ನಾಗಿಯೇ ಮಾಡುತ್ತದೆ. ಯಾವಾಗ ಹತಾಶೆ ಏರುತ್ತಲೇ ಹೋಗುತ್ತದೋ ಆಗ ಒತ್ತಡ ಹೆಚ್ಚಿ, ಹತಾಶೆ ದೂರಾಗಿ, ಖನ್ನತೆ ಅಲ್ಲಿ ಬಂದು ಕೂರುತ್ತದೆ. ಅಲ್ಲಿಗೆ ಹಠವೂ, ಛಲವೂ  ಬಿದ್ದು ಹೋಗುತ್ತದೆ. ಹೀಗಾಗಿ ಹಠದ ಜತೆ ಸಹನೆ ಇರಲೇಬೇಕಾದದ್ದು ಅತ್ಯಾವಶ್ಯಕ.

ಉದಾಹರಣೆಗೆ ವಿಕ್ರಮ-ಬೇತಾಳದ ಕಥೆಯ ರಾಜಾ ವಿಕ್ರಮ. ಮರದ ಮೇಲೆ ತೂಗಾಡುವ ಬೇತಾಳವನ್ನು, ವಿಕ್ರಮಾದಿತ್ಯನು  ತನ್ನ ಹೆಗಲ ಮೇಲೆ ಹೊತ್ತು ಸಾಗುವ ಹಾದಿಯಲ್ಲಿ,  ಆ ಬೇತಾಳವು ಕಥೆಯೊಂದನ್ನು ಹೇಳುತ್ತದೆ. ಹಾಗೆ ಹೇಳಿ ಸುಮ್ಮನಾಗದೇ, ಕೊನೆಯಲ್ಲಿ ಒಂದು ಪ್ರಶ್ನೆ ಇಡುತ್ತದೆ. ಸಾಗುವ ಹಾದಿಯಲ್ಲಿ ಮೌನವಾಗಿರಬೇಕು ಎಂಬುದು ಷರತ್ತು ಆದರೆ ಕೇಳಿದ ಪ್ರಶ್ನೆಗೆ ಉತ್ತರ ಗೊತ್ತಿದ್ದೂ ಕೊಡದೇ ಇದ್ದರೆ, ರಾಜನ ತಲೆ ಸಾವಿರ ಹೋಳಾಗುತ್ತದೆ. ಮೌನ ಮುರಿದರೆ, ಆ ಬೇತಾಳವು ತನ್ನ ಸ್ಥಾನಕ್ಕೆ ಹೋಗಿ ನೇತಾಡುತ್ತದೆ. ಮೌನ ಮುರಿದರೆ ಕೆಲಸವಾಗುವುದಿಲ್ಲ, ಮೌನ ಮುರಿಯದಿದ್ದರೆ ತಲೆ ಉಳಿಯುವುದಿಲ್ಲ.  ಉತ್ತರ ಗೊತ್ತಿದ್ದೂ ಗೊತ್ತಿಲ್ಲ ಎನ್ನುವುದು ಸುಳ್ಳಾಡಿದಂತೆ. ರಾಜನಿಗೆ ಉತ್ತರ ಗೊತ್ತು ಎಂದು ಬೇತಾಳಕ್ಕೂ ಗೊತ್ತು. ಇಷ್ಟೆಲ್ಲ ಹೇಳಿದ್ದು ಯಾಕೆ ಎಂದರೆ, ಹಠ ಮತ್ತು ಸಹನೆ ಜತೆ ಇರುವಾಗ ಇಂಥಾ ಸಂದಿಗ್ಧಗಳು, ಸವಾಲುಗಳು ಧುತ್ತನೆ ಎದುರು ನಿಲ್ಲುತ್ತದೆ, ಹೇಳಿ ಕೇಳಿ ಬರೋದಿಲ್ಲ.  ಹಿಡಿದ ಹಠವನ್ನು  ಬಿಡದೇ, ಕೇಳಿದ ಪ್ರಶ್ನೆಗೂ ಉತ್ತರ ಕೊಟ್ಟು, ಬೇತಾಳವು ವಾಪಸ್‌ ಆದಾಗ ಮತ್ತೆ ಮರದ ಬಳಿ ಹೋಗಿ ಹೊತ್ತುಕೊಂಡು ಬರುವ ರಾಜನ ಪರಿಶ್ರಮಕ್ಕೆ ಮೆಚ್ಚಿ ಬೇತಾಳವು ಅವನಿಗೆ ಅಸಲೀ ಸತ್ಯವನ್ನು ಹೇಳಿ ರಾಜನನ್ನೂ, ಅವನ ಪ್ರಜೆಗಳನ್ನೂ ರಕ್ಷಿಸುತ್ತದೆ. ತಡವೇ ಆದರೂ, ಹಿಡಿದ ಹಠವನ್ನು ಸಾಧಿಸಿದ ರಾಜನಿಗೆ ಉತ್ತಮ ಫ‌ಲಿತಾಂಶ ದೊರಕಿತ್ತು.  ಮೆಹನತ್‌ ಕಾ ಫ‌ಲ್‌ ಮೀಠಾ ಹೋತಾ ಹೈ ಎಂಬ ನುಡಿಯಂತೆ.

ಎಲ್ಲ ವಿದ್ಯಾರ್ಥಿಗಳು ತುಂಬಿದ ತಲೆಗಳೇ ಇರೋದಿಲ್ಲ. ಪಬ್ಲಿಕ್‌ ಪರೀಕ್ಷೆಗಳಲ್ಲಿ ಕೆಲವೊಮ್ಮೆ ಆರು ವಿಷಯಗಳು ಬೇತಾಳದಂತೆ ಮರಕ್ಕೆ ನೇತು ಹಾಕಿಕೊಂಡರೆ, ಸಪ್ಲಿಮೆಂಟರಿ ಪರೀಕ್ಷೆ ಎಂಬ ಮರಳಿ ಯತ್ನವ ಮಾಡು ಎಂಬ ವಿಕ್ರಮನೇ ಆಗಿರುತ್ತಾನೆ. ಕೆಲವರ ದುರಾದೃಷ್ಟವೋ ಏನೋ, ಆರು ಬೇತಾಳಗಳು ವಾಪಸ್‌ ಹೋಗ್ತಾನೇ ಇರುತ್ತದೆ. ಕೆಲವರ ಅದೃಷ್ಟ ಮೊದಲ ಯತ್ನದಲ್ಲೇ ಬೇತಾಳ ಢಮಾರ್‌. ಏನೋ ಕಾರಣದಿಂದ ಬುದ್ಧಿವಂತ ವಿದ್ಯಾರ್ಥಿಗೂ ಸಪ್ಲಿಮೆಂಟರಿ ಬರೆಯುವಂತೆ ಆಗಬಹುದು. ಬಸ್‌ ಲೇಟಾಗಿ ಪರೀಕ್ಷೆಗೆ  ಬಾರದಂತಾಗಬಹುದು. ವಿದ್ಯಾರ್ಥಿಗೇ ಆರೋಗ್ಯ ಹಾಳಾಗಬಹುದು ಅಥವಾ ಮನೆಯಲ್ಲಿ ಅಪ್ಪ-ಅಮ್ಮ ಆಸ್ಪತ್ರೆವಾಸಿಗಳಾಗಿ ಪರೀಕ್ಷೆಗೆ ಬಾರದಂತೆ ಆಗಿ ಸಪ್ಲಿಮೆಂಟರಿ ಬರೆಯುವಂತೆ ಆದಾಗ, ಒಂದೇ ಏಟಿಗೆ ಮುಂದೆ ಸಾಗಿಬಿಡಬೇಕು ಎಂಬುದು ಕಡಿಮೆ ರೇಟ್‌ನ ಪರಿಶ್ರಮ. ಕೆಲವೊಮ್ಮೆ ಪರೀಕ್ಷೆಯ ಫ‌ಲಿತಾಂಶದ ಮೇಲೆ ಮುಂದಿನ ಭವಿಷ್ಯ ನಿಂತಿದೆ ಎಂದಾಗ ಅದು ಪರಿಶ್ರಮ. ಶತಾಯಗತಾಯ ಪಾಸ್‌ ಆಗಲೇಬೇಕು ಎಂಬುದೇ ಅವರ ಪರಿಶ್ರಮ.

Advertisement

ಏನಾದರೂ ಮಾಡಿ ಸಾಧಿಸಲೇಬೇಕು, ಎಷ್ಟೇ ಕಷ್ಟವಾದರೂ ಜಯಗಳಿಸಲೇ ಬೇಕು ಎಂಬ Perseverance ಇಂಥದ್ದೇ ಕ್ಷೇತ್ರ ಎಂಬುದಿಲ್ಲ. ಕಾರಣ ಇದು ವೈಯುಕ್ತಿಕ. ಸಿನೆಮಾ ಕ್ಷೇತ್ರ ಎಂಬುದು ಸಾಧನೆಯ ಮೇಲೆ ನಿಂತಿಲ್ಲ. ಬದಲಿಗೆ ಒಂದರ್ಧ ಕಿಲೋ ಅದೃಷ್ಟವೂ ಬೇಕೇ ಬೇಕು. ಯಾವ್ಯಾವುದೋ ಹವಾಮಾನದಲ್ಲಿ ಚಿತ್ರೀಕರಣ ನಡೆಸುವುದು, ಎಷ್ಟೆಷ್ಟೋ ಹೈಟೆಕ್‌ ಸಾಧನಗಳನ್ನು ಬಳಸಿಯೋ, ಖ್ಯಾತ-ವಿಖ್ಯಾತರನ್ನು ಬಳಸಿಕೊಂಡಾಗಿಯೋ ಅದೃಷ್ಟ ಕೈಕೊಟ್ಟಾಗ ಸಿನೆಮಾ ತೋಪಾಗಬಹುದು. ಬಲು ಸಿಂಪಲ್‌ ಆದ ಒಂದು ಹಳ್ಳಿಯಲ್ಲೇ ಚಿತ್ರೀಕರಣ ನಡೆಸಿ, ಸಿನೆಮಾ ಪೂರ್ತಿ ನಾಯಕ  ಎನಿಸಿಕೊಂಡವ ಪಂಚೆ- ಬನಿಯಾನ್‌ನಲ್ಲೇ ಇದ್ದೂ ಸಿನಿಮಾ ಪ್ರೇಕ್ಷಕನಿಗೆ ಪ್ರಿಯವಾಗಬಹುದು. ಈ ರೀತಿ ಯಾವುದೇ ಸನ್ನಿವೇಶ ಇದ್ದರೂ, ಆ ಒಬ್ಬ ನಿರ್ಮಾಪಕನ, ಆ ಒಬ್ಬ ನಿರ್ದೇಶಕನ ಆಶಯ ಸಿನೆಮಾ ಗೆಲ್ಲಬೇಕು ಅಂತ. ಕೋಟ್ಯಂತರ ಖರ್ಚು ಮಾಡಿಯೂ ಸಿನೆಮಾ ಫ್ಲಾಪ್‌ ಆದಾಗ ಮಗದೊಂದು ಸಿನೆಮಾ ತೆಗೆಯುವಾಗ ಅಲ್ಲಿನ Perseverance ಇರುವುದೇ, ಏನಾದರೂ ಮಾಡಿ ಸಿನೆಮಾ ಗೆಲ್ಲಿಸಬೇಕು, ಹಣ ಮಾಡಬೇಕು, ಆ ಹಿಂದಿನ ಸಾಲ ತೀರಿಸಬೇಕು ಎಂಬುದು. ಇಂಥ ಛಲ ಕೆಲವರನ್ನು ಗೆಲ್ಲಿಸಿದೆ ಎಂಬುದು ನಿಜ, ಹಲವರನ್ನು ಮುಳುಗಿಸಿಯೇ ಬಿಟ್ಟಿದೆ , ಮುಗಿಸಿಯೇ ಬಿಟ್ಟಿದೆ ಎಂಬುದೂ ನಿಜ.

ಹೊಟೇಲ್‌ ವ್ಯವಹಾರಗಳಲ್ಲಿ ತೊಡಗಿರುವವನ ಆಶಯ ಎಂಬುದು ತನ್ನ ಖಾನಾವಳಿ ಸುಪ್ರಸಿದ್ಧವಾಗಬೇಕು, ನಾಲ್ಕಾರು ಊರುಗಳಲ್ಲಿ ಬಿಸ್‌ನೆಸ್‌ ವಿಸ್ತರಿಸಬೇಕು ಎಂಬುದು. ಹಗಲೂ ಇರುಳೂ ಮನೆಮಠ ಎಂಬುದೇ ವ್ಯವಹಾರವೇ ಆಗಿರುತ್ತಿತ್ತು. ಹಣ ಓಡಾಡುತ್ತಿದ್ದರೂ ಹೊಟ್ಟೆಗೆ ಹೋಗದೇ ವ್ಯವಹಾರ ವಿಸ್ತರಣೆಗೇ ಹೂಡಿಕೆ ಆಗುತ್ತಿತ್ತು.  ಬಂದೈತಿ ಕೋವಿಡ್‌. ಆಶಯ ಎಂಬುದು Perseverance ಆಯ್ತು. ತನ್ನ ಕೈಲಿರುವ ಖಾನಾವಳಿಯನ್ನು ಉಳಿಸಿಕೊಳ್ಳಬೇಕು, ಲಾಭ ಮಾಡುವುದು ಅನಂತರ ಆಲೋಚಿಸಿದರಾಯಿತು. ಮೊದಲಿಗೆ ಬ್ಯುಸಿನೆಸ್‌ ಕೈ ಜಾರದಂತೆ ಕಾಪಾಡಿಕೊಳ್ಳಬೇಕು ಎಂಬುದು Perseverance ಆಯ್ತು. ಈ ಛಲವನ್ನು ತೊಟ್ಟು, ಹಗಲೂ ರಾತ್ರಿ ವೈವಿಧ್ಯಮಯವಾಗಿ ಆಲೋಚಿಸಿ, ಕಸ್ಟಮರ್ಸ್‌ ಅನ್ನು ಉಳಿಸಿಕೊಂಡು ಬಿಸಿನೆಸ್‌ ಕೈತಪ್ಪದಂತೆ ಕಾಪಾಡಿಕೊಂಡವರು ಹಲವರು.

ಪ್ರತಿಯೊಬ್ಬರ ಜೀವನದಲ್ಲೂ ಛಲ ಇರಬೇಕು. ವಾತಾವರಣ ಹೇಗೇ ಇದ್ದರೂ ವ್ಯಾಯಾಮ ಮಾಡುವೆ ಎಂಬ ಛಲ. ಆರೋಗ್ಯಕ್ಕೆ  ಸರಿ ಹೊಂದದ ಆಹಾರವನ್ನು ಏನೇ ಆದರೂ ಸ್ವೀಕರಿಸಲಾರೆ ಎಂಬ ಛಲ.  ಒಳಿತು  ಮಾಡಲಾಗದಿದ್ದರೂ ಕೆಡುಕು ಮಾಡನೆಂಬ ಛಲ. ನಿಮ್ಮ ಜೀವನದ ಛಲ ಏನಿತ್ತು? ಅದನ್ನು ಸಾಧಿಸಿದ ಹಾದಿ ಹೇಗಿತ್ತು?‌

ಶ್ರೀನಾಥ್‌ ಭಲ್ಲೆ,ರಿಚ್ಮಂಡ್

Advertisement

Udayavani is now on Telegram. Click here to join our channel and stay updated with the latest news.

Next