ಹೈದ್ರಾಬಾದ್ (ಬೀದರ್): ಲಿಂಗಾಯತ ಪ್ರತ್ಯೇಕ ಧರ್ಮ ಹೋರಾಟ ಮತ್ತೆ ಮರುಜೀವ ಪಡೆದಿದ್ದು, ರವಿವಾರ ತೆಲಂಗಾಣದ ಹೈದರಾಬಾದ್‌ನಲ್ಲಿ ಮತ್ತೂಂದು ಹಂತದ ಬೃಹತ್ ಲಿಂಗಾಯತ ಮಹಾ ರ್ಯಾಲಿ ನಡೆಸುವ ಮೂಲಕ ಸ್ಥಳೀಯ ಕೆಸಿಆರ್ ಸರಕಾರ ಮತ್ತು ಕೇಂದ್ರ ಸರಕಾರದ ಗಮನ ಸೆಳೆಯಲಾಗಿದೆ.
ಹೈದರಾಬಾದ್‌ನ ಮಧ್ಯ ಭಾಗದ ನಾಂಪಲ್ಲಿಯ ವಸ್ತು ಪ್ರದರ್ಶನ ಮೈದಾನದಲ್ಲಿ ಲಿಂಗಾಯತ ಹೋರಾಟ ಸಮನ್ವಯ ಸಮಿತಿ ನೇತೃತ್ವದಲ್ಲಿ ಮಹಾ ರ್ಯಾಲಿ ಪ್ರಯುಕ್ತ ಬೃಹತ್ ಸಮಾವೇಶ ನಡೆಯಿತು. ಕರ್ನಾಟಕ, ಮಹಾರಾಷ್ಟ್ರ ಮತ್ತು ತೆಲಂಗಾಣದ ಮಠಾಧೀಶರು, ಚುನಾಯಿತ ಪ್ರತಿನಿಧಿಗಳು ಹಾಗೂ ಲಿಂಗಾಯತ-ಬಸವಪರ ಸಂಘಟನೆಗಳ ಪ್ರಮುಖರು ಸಾಕ್ಷಿಯಾದರು. ಅನಂತರ ಮುಖ್ಯ ವೇದಿಕೆಯಿಂದ ಪ್ರಮುಖ ರಸ್ತೆಗಳ ಮೂಲಕ ಸಾರ್ವಜನಿಕ ಉದ್ಯಾನದವರೆಗೆ ರ್ಯಾಲಿ ನಡೆಯಿತು. ಪ್ರತ್ಯೇಕ ಧರ್ಮದ ಬೇಡಿಕೆ ಕುರಿತಂತೆ ಘೋಷಣೆಗಳನ್ನು ಕೂಗಿ ಸರಕಾರದ ಮೇಲೆ ಒತ್ತಡ ಹಾಕುವ ಪ್ರಯತ್ನ ಮಾಡಲಾಯಿತು.
ವಿವಿಧ ಲಿಂಗಾಯತ ಮಠಗಳ ಪೀಠಾಧ್ಯಕ್ಷರು ಮಾತನಾಡಿ, ಲಿಂಗಾಯತ 900 ವರ್ಷಗಳ ಇತಿಹಾಸವುಳ್ಳ ಸ್ವತಂತ್ರ ಧರ್ಮವಾಗಿದೆ. ಆದರೆ ಅದರ ಬಳಿಕ ಹುಟ್ಟಿಕೊಂಡಿರುವ ಜೈನ, ಬೌದ್ಧ ಮತ್ತು ಸಿಕ್ಖ್ ಧರ್ಮಕ್ಕೆ ಮಾನ್ಯತೆ ನೀಡಿರುವ ಸರಕಾರ, ಲಿಂಗಾಯತ ಧರ್ಮದ ವಿಷಯದಲ್ಲಿ ಹಿಂದೇಟು ಹಾಕುವುದು ಸರಿಯಲ್ಲ. ಸ್ವತಂತ್ರÂ ಧರ್ಮಕ್ಕಾಗಿ ಎಲ್ಲ ಅರ್ಹತೆಗಳನ್ನು ಹೊಂದಿರುವ ಲಿಂಗಾಯತ ಧರ್ಮಕ್ಕೆ ಸಾಂವಿಧಾನಿಕ ಮಾನ್ಯತೆ ನೀಡಬೇಕು. ನ್ಯಾಯಯುತ ಹಕ್ಕು ಸಿಗುವವರೆಗೆ ವಿಶ್ರಮಿಸುವುದಿಲ್ಲ. 2024ರ ಲೋಕಸಭೆ ಚುನಾವಣೆ ಒಳಗಾಗಿ ಕೇಂದ್ರ ಸರಕಾರ ನಮ್ಮ ಬೇಡಿಕೆ ಈಡೇರಿಸಬೇಕು. ಇಲ್ಲವಾದಲ್ಲಿ ರಾಜ್ಯದಲ್ಲಿರುವ ಲಿಂಗಾಯತರು ಸೇರಿ ದಿಲ್ಲಿಯಲ್ಲಿ ಹೋರಾಟ ನಡೆಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ತೆಲಂಗಾಣದಲ್ಲಿ 50 ಲಕ್ಷಕ್ಕೂ ಅಧಿಕ ಲಿಂಗಾಯತರಿದ್ದು, ಕೆಸಿಆರ್ ಸರಕಾರ ಲಿಂಗಾಯತ ಧರ್ಮಕ್ಕೆ ಸಾಂವಿಧಾನಿಕ ಮಾನ್ಯತೆಗಾಗಿ ಕೇಂದ್ರಕ್ಕೆ ಶಿಫಾರಸು ಮಾಡಬೇಕು. ಜತೆಗೆ ಲಿಂಗಾಯತ ಲಿಂಗ ಬಲಿಜದವರನ್ನು ಒಬಿಸಿ ಪಟ್ಟಿಯಲ್ಲಿ ಸೇರಿಸಬೇಕು. ಬಸವೇಶ್ವರ ಆರ್ಥಿಕ ಅಭಿವೃದ್ಧಿ ನಿಗಮ ಸ್ಥಾಪಿಸಬೇಕು. ಲಿಂಗಾಯತರಿಗೆ ಶ್ಮಶಾನ ಭೂಮಿ ಒದಗಿಸಬೇಕು. ಪ್ರತಿ ಗ್ರಾಮ, ಪಟ್ಟಣ ಮತ್ತು ನಗರಗಳಲ್ಲಿ ಬಸವ ಮಂಟಪ ಸ್ಥಾಪಿಸಬೇಕು ಎಂದು ಬೇಡಿಕೆ ಮಂಡಿಸಲಾಯಿತು.
ಮಹಾ ರ್ಯಾಲಿಯಲ್ಲಿ ಕೂಡಲಸಂಗಮದ ಮಾತೆ ಗಂಗಾದೇವಿ, ಭಾಲ್ಕಿಯ ಡಾ| ಬಸವಲಿಂಗ ಪಟ್ಟದ್ದೇವರು, ಹುಲಸೂರಿನ ಡಾ| ಶಿವಾನಂದ ಸ್ವಾಮೀಜಿ, ಬೀದರ್‌ನ ಅಕ್ಕ ಅನ್ನಪೂರ್ಣ ತಾಯಿ, ಡಾ| ಗಂಗಾಂಬಿಕೆ ಅಕ್ಕ, ಬೆಂಗಳೂರಿನ ಶ್ರೀ ಚೆನ್ನಬಸವಾನಂದ ಸ್ವಾಮೀಜಿ, ಹೈದರಾಬಾದ್‌ನ ಅನಿಮಿಷಾನಂದ ಸ್ವಾಮೀಜಿ, ಕೇಂದ್ರ ಸಚಿವ ಭಗವಂತ ಖೂಬಾ, ಬೀದರ್ ಶಾಸಕ ಡಾ| ಶೈಲೇಂದ್ರ ಬೆಲ್ದಾಳೆ, ನಾರಾಯಣ ಖೇಡ ಸಂಸದ ಸುರೇಶ ಶೆಟಕಾರ, ಜಹೀರಾಬಾದ್ ಶಾಸಕ ಬಿ.ಬಿ. ಪಾಟೀಲ್, ಪ್ರಮುಖರಾದ ಶಂಕರ ರೆಡ್ಡಿ ಪಾಟೀಲ್, ವಿಜಯಕುಮಾರ ಪಟೆ°, ಬಸವರಾಜ ಧನ್ನೂರ್, ಅವಿನಾಶ ಭೋಸಗಿಕರ್, ಭೀಮರಾವ್ ಪಾಟೀಲ್, ಸೋಮಶೇಖರ ಪಾಟೀಲ್, ಡಿ.ಕೆ.ಸಿದ್ರಾಮ್, ಬಾಬು ವಾಲಿ, ರಾಜೇಂದ್ರಕುಮಾರ ಗಂದಗೆ ಮತ್ತಿತರರು ಭಾಗವಹಿಸಿದ್ದರು.
ಲಿಂಗಾಯತ ಸಮಾನತೆ ಮತ್ತು ಭ್ರಾತೃತ್ವವನ್ನು ಸಾರಿದ ಐತಿಹಾಸಿಕ ಧರ್ಮವಾಗಿದೆ. ಲಿಂಗಾಯತ ಧರ್ಮಕ್ಕೆ ಸಂವಿಧಾನಿಕ ಹಾಗೂ ಅಲ್ಪಸಂಖ್ಯಾಕ ಧರ್ಮದ ಮಾನ್ಯತೆ ನೀಡಬೇಕು ಎಂಬುದು ಹಲವು ದಶಕಗಳ ಬೇಡಿಕೆಯಾಗಿದೆ. ಬಿಜೆಪಿಯನ್ನು ಹಿಂದಿನಿಂದಲೂ ಲಿಂಗಾಯತರು ಬೆಂಬಲಿಸುತ್ತಾ ಬಂದಿದ್ದು, ಸಮಾಜವನ್ನು ಎಂದಿಗೂ ಕಡೆಗಣನೆ ಮಾಡಿಲ್ಲ. ಸ್ವತಂತ್ರ ಧರ್ಮದ ಮಾನ್ಯತೆ ಕುರಿತಂತೆ ಪ್ರಧಾನಿ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ಗಮನ ಸೆಳೆಯುತ್ತೇನೆ ಹಾಗೂ ಸಂಸತ್‌ನಲ್ಲಿಯೂ ಧ್ವನಿ ಎತ್ತುತ್ತೇನೆ.
-ಜಿ. ಕಿಶನ್ ರೆಡ್ಡಿ, ಕೇಂದ್ರ ಪ್ರವಾಸೋದ್ಯಮ ಸಚಿವ