ವಾಷಿಂಗ್ಟನ್: ಅಮೆರಿಕದ 45ನೇ ಅಧ್ಯಕ್ಷರಾಗಿ ಡೊನಾಲ್ಡ್ ಟ್ರಂಪ್ ಶುಕ್ರವಾರ ಅಧಿಕಾರ ಸ್ವೀಕರಿಸುತ್ತಿದ್ದಂತೆ ಅವರ ವಿರುದ್ಧ ಪ್ರತಿಭಟನೆಗಳು ನಡೆದಿವೆ. ರಾಜಧಾನಿ ವಾಷಿಂಗ್ಟನ್ ಡಿಸಿಯಲ್ಲಿ ನಡೆದ ಹಿಂಸಾತ್ಮಕ ಪ್ರತಿಭಟನೆಯಿಂದ ಉದ್ವಿಗ್ನ ವಾತಾವರಣ ನಿರ್ಮಾಣವಾಗಿತ್ತು. ಅಮೆರಿಕಾದ್ಯಂತ ಹಲವೆಡೆ ಪ್ರತಿಭಟನೆಗಳು ಭುಗಿಲೆದ್ದಿವೆ. ಘಟನೆಯಿಂದ 6 ಪೊಲೀಸರು ಗಾಯಗೊಂಡಿದ್ದರೆ, 200 ಪ್ರತಿಭಟನಕಾರರು ಬಂಧಿಸಲ್ಪಟ್ಟಿದ್ದಾರೆ.
ಟ್ರಂಪ್ ಅವರ ವಿಭಜನಕಾರಿ ಧೋರಣೆ ಗಳನ್ನು ವಿರೋಧಿಸಿ ಪ್ರತಿಭಟನಕಾರರು ಕಲ್ಲು ತೂರಾಟ, ಇಟ್ಟಿಗೆ ತೂರಾಟ ನಡೆಸಿದರು. ಪರಿಣಾಮ 6ಕ್ಕೂ ಹೆಚ್ಚು ಅಂಗಡಿಗಳು ಹಾನಿಗೊಳಗಾದವು. ಐಷಾರಾಮಿ ಬಸ್ಸಿಗೂ ಅರೆಬರೆ ಹಾನಿಯಾಯಿತು.
ಘಟನೆಯಿಂದ ಇಬ್ಬರು ಪೊಲೀಸರು ಮತ್ತು ಒಬ್ಬ ನಾಗರಿಕ ಆಸ್ಪತ್ರೆ ಸೇರಿದ್ದಾರೆ. ಇದನ್ನು ಹೊರತುಪಡಿಸಿದರೆ ಪೊಲೀಸರಿಗೆ ಹಾನಿಯಾಗಿಲ್ಲ ಎಂದು ಪೊಲೀಸರು ಘಟನೆಯ ಮಹತ್ವ ತಗ್ಗಿಸಲು ಯತ್ನಿಸಿದ್ದಾರೆ.
ಐತಿಹಾಸಿಕ ಮಹಿಳಾ ಮೆರವಣಿಗೆ
ಒಂದು ಕಡೆ ಹಿಂಸಾತ್ಮಕ ಪ್ರತಿಭಟನೆ ನಡೆಯುತ್ತಿದ್ದರೆ ಮತ್ತೂಂದು ಕಡೆ ಅಮೆರಿಕದ ಮಹಿಳೆಯರು ಶಾಂತಿಯುತ ಮೆರವಣಿಗೆ ಮಾಡಿದರು. 3 ಲಕ್ಷಕ್ಕೂ ಹೆಚ್ಚು ಮಹಿಳೆಯರು ಈ ಶಾಂತಿಯುತ ಹೋರಾಟದಲ್ಲಿ ಪಾಲ್ಗೊಳ್ಳುವ ನಿರೀಕ್ಷೆಯಿದೆ. ಇದೆಲ್ಲಾದರೂ ಸಂಭವಿಸಿದರೆ ಅಮೆರಿಕ ಅಧ್ಯಕ್ಷರ ಪದಗ್ರಹಣದ ಅ ನಂತರ ಸಂಭವಿಸಿದ ಬೃಹತ್ ಹೋರಾಟ ಎನಿಸಿಕೊಳ್ಳಲಿದೆ.