ವಾಷಿಂಗ್ಟನ್ : ಅಮೆರಿಕದ ನೂತನ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಿಂದು ಮಧ್ಯ ರಾತ್ರಿ ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ಫೋನಿನಲ್ಲಿ ಮಾತನಾಡಲಿದ್ದಾರೆ ಎಂದು ಶ್ವೇತ ಭವನ ತಿಳಿಸಿದೆ.
ಟ್ರಂಪ್ ಅವರು ವಾಷಿಂಗ್ಟನ್ ಡಿಸಿ ಕಾಲಮಾನ ಮಧ್ಯಾಹ್ನ 1 ಗಂಟೆಯ ಹೊತ್ತಿಗೆ (ಭಾರತೀಯ ಕಾಲಮಾನ ರಾತ್ರಿ 11.30ರ ಹೊತ್ತಿಗೆ) ಮೋದಿ ಅವರೊಂದಿಗೆ ಫೋನಿನಲ್ಲಿ ಮಾತನಾಡಲಿದ್ದಾರೆ ಎಂದು ಶ್ವೇತ ಭವನ ಹೇಳಿದೆ.
ಕಳೆದ ಜನವರಿ 20ರಂದು ಅಮೆರಿಕದ ಅಧ್ಯಕ್ಷರಾಗಿ ಪ್ರಮಾಣ ವಚನ ಸ್ವೀಕರಿಸಿದ ಬಳಿಕ ಟ್ರಂಪ್ ಅವರು ಫೋನಿನಲ್ಲಿ ಮಾತನಾಡುವ ಐದನೇ ವಿದೇಶೀ ನಾಯಕ ಎನಿಸಿಕೊಂಡಿದ್ದಾರೆ ಪ್ರಧಾನಿ ಮೋದಿ. ಜನವರಿ 21ರಂದು ಟ್ರಂಪ್ ಅವರು ಕೆನಡ ಪ್ರಧಾನಿ ಜಸ್ಟಿನ್ ಟ್ರಡಿಯೋ ಹಾಗೂ ಮೆಕ್ಸಿಕೋ ಪ್ರಧಾನಿ ಪೆನಾ ನೀಟೋ ಅವರೊಂದಿಗೆ ಫೋನ್ ಮಾತುಕತೆ ನಡೆಸಿದ್ದರು.
ಭಾನುವಾರದಂದು ಟ್ರಂಪ್, ಇಸ್ರೇಲಿ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರೊಂದಿಗೆ ಮಾತನಾಡಿದ ಬಳಿಕ ಈಜಿಪ್ಟ್ ಅಧ್ಯಕ್ಷ ಅಬ್ಧೆಲ್ ಫತಾಹ್ ಅಲ್ ಸಿಸಿ ಅವರೊಂದಿಗೆ ಫೋನಿನಲ್ಲಿ ಮಾತನಾಡಿದ್ದರು.
ಕಳೆದ ನವೆಂಬರ್ 8ರಂದು ಟ್ರಂಪ್ ಅವರು ಅಧ್ಯಕ್ಷೀಯ ಚುನಾವಣೆಯಲ್ಲಿ ಐತಿಹಾಸಿಕ ವಿಜಯ ಗಳಿಸಿದ ಬಳಿಕ ಅವರನ್ನು ಅಭಿನಂದಿಸಿದ್ದ ಮೊದಲ ವಿದೇಶೀ ನಾಯಕರಲ್ಲಿ ಮೋದಿ ಕೂಡ ಒಬ್ಬರಾಗಿದ್ದರು. ಚುನಾವಣೆಯಲ್ಲಿ ತಾನು ಗೆದ್ದು ಅಮೆರಿಕದ ಅಧ್ಯಕ್ಷನಾದರೆ ಇಸ್ರೇಲ್ ಮತ್ತು ಭಾರತದ ಜತೆಗೆ ದ್ವಿಪಕ್ಷೀಯ ಸಂಬಂಧಗಳನ್ನು ಬಲಪಡಿಸುವುದಕ್ಕೆ ಆದ್ಯತೆ ನೀಡುವುದಾಗಿ ಹೇಳಿದ್ದರು.
“ಭಾರತದ ಪ್ರಧಾನಿ ನರೇಂದ್ರ ಮೋದಿ ತುಂಬಾ ಉತ್ಸಾಹಿ ಹಾಗೂ ಚೈತನ್ಯಶಾಲಿ ನಾಯಕನಾಗಿದ್ದು ಅವರೊಂದಿಗೆ ಮಾತುಕತೆ ನಡೆಸುವುದನ್ನು ನಾನು ಎದುರು ನೋಡುತ್ತಿದ್ದೇನೆ’ ಎಂದು ಟ್ರಂಪ್ ಹೇಳಿದ್ದಾರೆ.