ವಾಷಿಂಗ್ಟನ್: ಪ್ರಧಾನಿ ನರೇಂದ್ರ ಮೋದಿ ಅವರು ಅಮೆರಿಕದ ಅತ್ಯುನ್ನತ ಸೇನಾ ಗೌರವವಾದ “ಲೀಜನ್ ಆಫ್ ಮೆರಿಟ್’ಗೆ ಪಾತ್ರರಾಗಿದ್ದು, ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಮಂಗಳವಾರ ಈ ಪ್ರಶಸ್ತಿಯನ್ನು ಪ್ರದಾನ ಮಾಡಿದ್ದಾರೆ.
ಪ್ರಧಾನಿ ಅವರ ಪರವಾಗಿ ಅಮೆರಿಕದಲ್ಲಿರುವ ಭಾರತೀಯ ರಾಯಭಾರಿ ತರನ್‌ಜಿತ್ ಸಿಂಗ್ ಸಂಧು ಅವರು ಶ್ವೇತಭವನದಲ್ಲಿ ಅಲ್ಲಿನ ರಾಷ್ಟ್ರೀಯ ಭದ್ರತಾ ಸಲಹೆಗಾರ ರಾಬರ್ಟ್ ಒಬ್ರಯಾನ್‌ರಿಂದ ಈ ಪ್ರಶಸ್ತಿಯನ್ನು ಸ್ವೀಕರಿಸಿದ್ದಾರೆ. ದ್ವಿಪಕ್ಷೀಯ ವ್ಯೂಹಾತ್ಮಕ ಪಾಲುದಾರಿಕೆಯನ್ನು ಮತ್ತಷ್ಟು ಎತ್ತರಕ್ಕೆ ಒಯ್ದಿದ್ದಕ್ಕಾಗಿ ಹಾಗೂ ಭಾರತವು ಜಾಗತಿಕ ಶಕ್ತಿಯಾಗಿ ಹೊರಹೊಮ್ಮುವಂತೆ ಮಾಡಿದ್ದಕ್ಕಾಗಿ ಮೋದಿ ಅವರಿಗೆ ಈ ಗೌರವ ಸಂದಿದೆ.
ಪ್ರಧಾನಿ ಮೋದಿ ಅವರ ದಿಟ್ಟ ನಾಯಕತ್ವ, ದೂರದೃಷ್ಟಿತ್ವ, ಜಾಗತಿಕ ಸವಾಲುಗಳನ್ನು ಎದುರಿಸುವಲ್ಲಿ ಭಾರತ ಮತ್ತು ಅಮೆರಿಕದ ನಡುವಿನ ಸಂಬಂಧವನ್ನು ಎತ್ತರಕ್ಕೇರಿಸುವಲ್ಲಿ ವಹಿಸಿರುವ ಮಹತ್ವದ ಪಾತ್ರ, ಜಾಗತಿಕ ಶಾಂತಿ ಮತ್ತು ಸಮೃದ್ಧಿಗೆ ನೀಡಿದ ಕೊಡುಗೆಗಳನ್ನು ಪರಿಗಣಿಸಿ, ಅಮೆರಿಕದ ಅತ್ಯುನ್ನತ ಚೀಫ್ ಕಮಾಂಡರ್ ಆಫ್ ದಿ ಲೀಜನ್ ಆಫ್ ಮೆರಿಟ್ ಪ್ರಶಸ್ತಿಯನ್ನು ನೀಡಲಾಗಿದೆ ಎಂದು ಒಬ್ರಿಯಾನ್ ಟ್ವೀಟ್ ಮಾಡಿದ್ದಾರೆ.
ಅಮೆರಿಕದ ಅತ್ಯುನ್ನತ ಪ್ರಶಸ್ತಿಯನ್ನು ಗೌರವದಿಂದ ಸ್ವೀಕರಿಸುತ್ತಿದ್ದೇನೆ. ಅಮೆರಿಕ ಮತ್ತು ಭಾರತ ನಡುವೆ ಉತ್ತಮ ಬಾಂಧವ್ಯ ರೂಪಿಸುವ ನಿಟ್ಟಿನಲ್ಲಿ ಶ್ರಮಿಸಿದ ಜನರ ಪ್ರಯತ್ನಕ್ಕೆ ಸಂದ ಗೌರವ ಇದು.
ನರೇಂದ್ರ ಮೋದಿ, ಪ್ರಧಾನಿ