ವಾಷಿಂಗ್ಟನ್: ಪ್ರತಿ ವರ್ಷ ಐದು ಲಕ್ಷ ಭಾರತೀಯರಿಗೆ ಪೌರತ್ವ ನೀಡುವುದಾಗಿ ಅಮೆರಿಕದ ಹೊಸ ಸರಕಾರ ಇರಾದೆ ಹೊಂದಿರುವ ಬಗ್ಗೆ ಈಗಾಗಲೇ ಸೂಚನೆಗಳು ವ್ಯಕ್ತವಾಗಿವೆ. ಜ.20ರಂದು ಪ್ರಮಾಣ ವಚನ ಸ್ವೀಕರಿಸಿದ ಬಳಿಕ ಹಾಲಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ವಲಸೆ ಮತ್ತು ಪೌರತ್ವ ವಿಚಾರಕ್ಕೆ ಸಂಬಂಧಿಸಿದಂತೆ ಹೊರಡಿಸಿದ್ದ ಆದೇಶಗಳನ್ನು ರದ್ದು ಮಾಡುವ ಆದೇಶಗಳು ಬೈಡೆನ್‌ರಿಂದ ಪ್ರಕಟವಾಗುವ ಸಾಧ್ಯತೆಗಳು ಇವೆ ಎಂದು ಅಮೆರಿಕದ ವಿಶ್ಲೇಷಕರು ತಿಳಿಸಿದ್ದಾರೆ.
ಮೆಕ್ಸಿಕೋ ಗಡಿ ಪ್ರದೇಶದಲ್ಲಿ ಟ್ರಂಪ್ ನಿರ್ಮಿಸಲು ಮುಂದಾಗಿರುವ ಗೋಡೆ ಯೋಜನೆಗೆ ಪೆಂಟಗನ್‌ನ ನಿಧಿ ಬಳಕೆ, ಅಮೆರಿಕಕ್ಕೆ ಅಕ್ರಮವಾಗಿ ಬಂದಿರುವ ಪ್ರಾಪ್ತ ವಯಸ್ಕರಲ್ಲದವರ ರಕ್ಷಣೆ ಸೇರಿದಂತೆ ಹಲವು ಕ್ರಮಗಳನ್ನು ಘೋಷಣೆ ಮಾಡುವ ಸಾಧ್ಯತೆ ಇದೆ. ಇದೇ ಉದ್ದೇಶಕ್ಕಾಗಿ ಬರಾಕ್ ಒಬಾಮ ಅಧ್ಯಕ್ಷರಾಗಿದ್ದ ವೇಳೆ ವಲಸೆ ವಿಚಾರಗಳ ಬಗ್ಗೆ ಸಲಹೆ ನೀಡುತ್ತಿದ್ದ ಸಿಸಿಲಿಯಾ ಮನೋಜ್‌ರನ್ನು ತಮ್ಮ ತಂಡಕ್ಕೆ ಬೈಡೆನ್ ಸೇರಿಸಿಕೊಂಡಿದ್ದಾರೆ.
ಚುನಾವಣೆಯಲ್ಲಿ ಸೋಲು ಒಪ್ಪಿಕೊಳ್ಳದೇ ಇರುವ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ನಡೆ ಮುಜುಗರ ತರುವಂತಿದೆ ಎಂದು ಅಮೆರಿಕದ ನಿಯೋಜಿತ ಅಧ್ಯಕ್ಷ ಜೋ ಬೈಡೆನ್ ಹೇಳಿದ್ದಾರೆ. ಇದು ಅಧ್ಯಕ್ಷೀಯ ಪರಂಪರೆಗೆ ಸಹಕಾರಿಯಾದುದಲ್ಲ ಎಂದಿದ್ದಾರೆ. ಅಧಿಕಾರ ಹಸ್ತಾಂತರ ವಿಳಂಬವಾಗುತ್ತದೆ ಎಂಬುದು ಅನಿಸುವುದಿಲ್ಲ. ಜ.20ರ ವೇಳೆಗೆ ಎಲ್ಲವೂ ಸುಗಮವಾಗಬಹುದು ಎಂದರು. ಹೊಸ ಹುದ್ದೆಯನ್ನು ನಿರ್ವಹಿಸಲು ಬೇಕಾಗಿರುವ ತಯಾರಿ ಮಾಡಿಕೊಳ್ಳುತ್ತಿರುವುದಾಗಿ ಹೇಳಿದ್ದಾರೆ ಬೈಡೆನ್.
ಇಂಡಿಯನ್-ಅಮೆರಿಕನ್ ಪಟೇಲ್ ನೇಮಕ
ಅಮೆರಿಕದ ಪ್ರಭಾರ ರಕ್ಷಣ ಸಚಿವ ಕ್ರಿಸ್ ಮಿಲ್ಲರ್ ಅವರಿಗೆ ಸಲಹೆ ನೀಡುವ ನಿಟ್ಟಿನಲ್ಲಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭಾರತೀಯ- ಅಮೆರಿಕನ್ ಕಶ್ಯಪ್ ಪ್ರಮೋದ್ ಪಟೇಲ್‌ರನ್ನು ಮುಖ್ಯ ಅಧಿಕಾರಿಯನ್ನಾಗಿ ನೇಮಿಸಿದ್ದಾರೆ. ಮಿಲ್ಲರ್ ಸೋಮವಾರ ಪ್ರಭಾರ ರಕ್ಷಣ ಸಚಿವರಾಗಿ ಅಧಿಕಾರ ವಹಿಸಿಕೊಂಡಿದ್ದಾರೆ. ಕಶ್ ಪಟೇಲ್ ಸದ್ಯ ರಾಷ್ಟ್ರೀಯ ಭದ್ರತಾ ಮಂಡಳಿಯಲ್ಲಿ ಅಧಿಕಾರಿಯಾಗಿದ್ದಾರೆ.