ವಾಷಿಂಗ್ಟನ್: ಎಚ್1ಬಿ ವೀಸಾ ನಿಯಮವನ್ನು ಬಿಗಿಗೊಳಿಸಿ ಭಾರತೀಯರಿಗೆ ತಲೆನೋವು ಉಂಟುಮಾಡಿದ್ದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಮತ್ತೂಂದು ಶಾಕ್ ನೀಡಿದ್ದಾರೆ.
ಒಬಾಮ ಆಡಳಿತವು ಜಾರಿ ಮಾಡಿದ್ದ ಆ್ಯಮ್ನೆಸ್ಟಿ(ಕ್ಷಮಾದಾನ) ಯೋಜನೆಯನ್ನು ಟ್ರಂಪ್ ರದ್ದು ಮಾಡಿದ್ದು, 7 ಸಾವಿರದಷ್ಟು ಭಾರತೀಯ-ಅಮೆರಿಕದವರು ಸೇರಿದಂತೆ 8 ಲಕ್ಷ ಮಂದಿ ನೌಕರರ ಮೇಲೆ ಇದು ಪರಿಣಾಮ ಬೀರಲಿದೆ.
ಬಾಲ್ಯದಲ್ಲೇ ಅಕ್ರಮವಾಗಿ ಅಮೆರಿಕಕ್ಕೆ ಬಂದಿರುವ ವಲಸಿಗರಿಗೆ ಅಲ್ಲೇ ನೌಕರಿ ಮಾಡಲು ಅನುಮತಿ ನೀಡುವಂಥ ಡೆಫರ್ಡ್ ಆ್ಯಕ್ಷನ್ ಫಾರ್ ಚಿಲ್ಡ್ರನ್ ಅರೈವಲ್(ಡಿಎಸಿಎ) ಯೋಜನೆಯನ್ನು ಒಬಾಮ ಆಡಳಿತ ಜಾರಿ ಮಾಡಿತ್ತು.
ಮಂಗಳವಾರ ಇದನ್ನು ರದ್ದು ಮಾಡಿ ಟ್ರಂಪ್ ಸರ್ಕಾರ ಆದೇಶ ಹೊರಡಿಸಿರುವುದಾಗಿ ಅಮೆರಿಕದ ಅಟಾರ್ನಿ ಜನರಲ್ ಜೆಫ್ ಸೆಷನ್ಸ್ ಘೋಷಿಸಿದ್ದಾರೆ. ಕೆಲ ದಿನಗಳ ಹಿಂದೆಯೇ ಸರ್ಕಾರ ಈ ಬಗ್ಗೆ ಸುಳಿವು ನೀಡಿತ್ತು. ಈ ಹಿನ್ನೆಲೆಯಲ್ಲಿ ಅಮೆರಿಕದಾದ್ಯಂತ ಭಾರೀ ಪ್ರತಿಭಟನೆಗಳು ಆರಂಭವಾಗಿವೆ. ಮಂಗಳವಾರ ಘೋಷಣೆ ಹೊರಬೀಳುತ್ತಿದ್ದಂತೆ ನೂರಾರು ಮಂದಿ ಶ್ವೇತಭವನದ ಮುಂದೆ ಧಾವಿಸಿ, ಪ್ರತಿಭಟನೆ ಆರಂಭಿಸಿದ್ದಾರೆ.
ಅಮೆರಿಕದಲ್ಲಿ ಅತಿಹೆಚ್ಚು ಡಿಎಸಿಎ ವಿದ್ಯಾರ್ಥಿಗಳನ್ನು ಹೊಂದಿರುವ 11ನೇ ದೇಶ ಭಾರತವಾಗಿದೆ. ಟ್ರಂಪ್ ನಿರ್ಧಾರವನ್ನು ಖಂಡಿಸಿರುವ ಅಮೆರಿಕನ್ ಸಿವಿಲ್ ಲಿಬರ್ಟಿ ಯೂನಿಯನ್‌ನ ವಲಸೆ ನೀತಿ ಮತ್ತು ಅಭಿಯಾನದ ನಿರ್ದೇಶಕಿ ಲೊರೆಲ್ಲಾ ಪ್ರೇಲಿ, “ಅಮೆರಿಕ ಬಿಟ್ಟರೆ ಬೇರೆ ಪ್ರಪಂಚವೇ ಇಲ್ಲ ಎಂದು ತಿಳಿದಿರುವ ಮಕ್ಕಳನ್ನು ಟ್ರಂಪ್ ಗುರಿಯಾಗಿಸಿಕೊಂಡಿದ್ದಾರೆ. ಅವರ ಕನಸುಗಳನ್ನು ಚಿವುಟುತ್ತಿದ್ದಾರೆ. ಇದು ಖಂಡಿತಾ ನಮ್ಮ ದೇಶವನ್ನು ಸುರಕ್ಷಿತವಾಗಿ ಇಡುವುದಿಲ್ಲ ಮತ್ತು ನಮ್ಮ ಆರ್ಥಿಕತೆಯನ್ನು ಬಲಿಷ್ಠಗೊಳಿಸುವುದಿಲ್ಲ,’ ಎಂದಿದ್ದಾರೆ.