Advertisement

ಮುಸ್ಲಿಮ್‌ ರಾಷ್ಟ್ರಗಳ ವಲಸಿಗರಿಗೆ ಟ್ರಂಪ್‌ ನಿಷೇಧ

03:45 AM Jan 26, 2017 | Team Udayavani |

ವಾಷಿಂಗ್ಟನ್‌: ಅಮೆರಿಕ ಅಧ್ಯಕ್ಷ ಸ್ಥಾನ ಅಲಂಕರಿಸಿದ ಆರಂಭದ ಹೆಜ್ಜೆಯಾಗಿಯೇ ಡೊನಾಲ್ಡ್‌ ಟ್ರಂಪ್‌ ಮೆಕ್ಸಿಕೋ ಹಾಗೂ ಇಸ್ಲಾಮ್‌
ರಾಷ್ಟ್ರಗಳ ಮೇಲೆ ಪ್ರಹಾರ ಶುರುಮಾಡಿದ್ದಾರೆ. ಅಮೆರಿಕದ ರಾಷ್ಟ್ರೀಯ ಹಿತಾಸಕ್ತಿ, ರಕ್ಷಣೆಗೆ ತೊಂದರೆ ಆಗುತ್ತಿದೆ ಎನ್ನುವ ನೆಪವೊಡ್ಡಿ, 6 ಮುಸ್ಲಿಮ್‌ ರಾಷ್ಟ್ರಗಳ ವಲಸಿಗರನ್ನು ಅವರು ತಾತ್ಕಾಲಿಕವಾಗಿ ನಿಷೇಧಿಸಿದ್ದಾರೆ.

Advertisement

ಸಿರಿಯಾ, ಇರಾನ್‌, ಇರಾಕ್‌, ಯೆಮೆನ್‌, ಸುಡಾನ್‌ ಮತ್ತು ಸೊಮಾಲಿಯಾದ ವಲಸಿಗರಿಗೆ ಇನ್ನು ಅಮೆರಿಕದಲ್ಲಿ ಜಾಗವಿಲ್ಲ. 2016ರಲ್ಲಿ ಸಿರಿಯಾ ವಲಸೆ ಆರಂಭವಾದಾಗ ಒಬಾಮ “2,50,000 ವಲಸಿಗರನ್ನು ಅಮೆರಿಕ ಸ್ವಾಗತಿಸುತ್ತದೆ’ ಎಂದು ಘೋಷಿಸಿದ್ದರು. ಒಬಾಮ ಅವರ ನಿರ್ಣಯಕ್ಕೆ ವಿರುದ್ಧವಾಗಿ ಟ್ರಂಪ್‌ ಈ ನಿಷೇಧ ಹೊರಡಿಸಿದ್ದಾರೆ.

ಅಮೆರಿಕ ಸರಕಾರ 2016ರಲ್ಲಿ 38, 901 ನಿರಾಶ್ರಿತರಿಗೆ ಆಶ್ರಯ ನೀಡಿತ್ತು. ಇವರಲ್ಲಿ ಬಹುಪಾಲು ಮಂದಿಯನ್ನು ಗಡಿ ಮೂಲಕವೇ ದೇಶದ ಒಳಗೆ ಬಿಟ್ಟುಕೊಳ್ಳಲಾಗಿತ್ತು. ಇವರಲ್ಲಿ ಸಿರಿಯಾ (12,486), ಸೋಮಾಲಿಯಾ (9,012) ಮಂದಿಯೇ ಹೆಚ್ಚು ಸಂಖ್ಯೆಯಲ್ಲಿ ಪ್ರವೇಶ ಪಡೆದಿದ್ದರು. ಕಳೆದ ವರ್ಷ 37,521 ಕ್ರಿಶ್ಚಿಯನ್‌ ವಲಸಿಗರಿಗೂ ಅಮೆರಿಕ ತನ್ನ ದೇಶದಲ್ಲಿ ನೆಲೆಸಲು ಅವಕಾಶ ಮಾಡಿಕೊಟ್ಟಿತ್ತು. ಆದರೆ, ಈ 10 ವರ್ಷಗಳಲ್ಲಿ ಕ್ರಿಶ್ಚಿಯನ್ನರಿಗಿಂತ ಮುಸ್ಲಿಮ್‌ ವಲಸಿಗರನ್ನೇ ಅಮೆರಿಕ ಹೆಚ್ಚು ಬಿಟ್ಟುಕೊಂಡಿದೆ ಎಂಬುದು ಅಮೆರಿಕದ ಹೊಸ ಸರಕಾರದ ಪ್ರತಿಪಾದನೆ.

ಮೆಕ್ಸಿಕೋ ಗಡಿಗೆ ಗೋಡೆ: ಚುನಾವಣೆಗೆ ಪೂರ್ವವೇ ಮೆಕ್ಸಿಕೋ ವಲಸಿಗರ ಮೇಲೆ ಟ್ರಂಪ್‌ ವಾಗ್ಧಾಳಿ ನಡೆಸಿದ್ದರು. ಕ್ಯಾಲಿಫೋ ರ್ನಿಯಾ, ಅರಿಝೋನಾ, ನ್ಯೂ ಮೆಕ್ಸಿಕೋ, ಟೆಕ್ಸಾಸ್‌ ಸೇರಿ 4 ರಾಜ್ಯಗಳನ್ನೊಳಗೊಂಡಂತೆ 1,900 ಮೈಲು ಉದ್ದದ ಗೋಡೆ ನಿರ್ಮಿಸಲು ಟ್ರಂಪ್‌ ಸರಕಾರ ಚಿಂತಿಸಿದೆ. ಈಗಾಗಲೇ 700 ಮೈಲು ತಂತಿ ಬೇಲಿಯಿದ್ದರೂ ವಲಸೆ ನಿಲ್ಲದ ಕಾರಣ ಈ ಕ್ರಮ ಕೈಗೊಳ್ಳಲಾಗುತ್ತಿದೆ. ಗೋಡೆ ನಿರ್ಮಾಣಕ್ಕೆ ನೆರವಾಗಲೆಂದೇ ಗಡಿಯಲ್ಲಿ ಕೇಂದ್ರ ಕಟ್ಟಡ ನಿರ್ಮಿಸಲಾಗುತ್ತಿದೆ. ಈ ಯೋಜನೆಯ ಅಂದಾಜು ವೆಚ್ಚ 54,472 ಕೋಟಿ ರೂಪಾಯಿಗೂ ಅಧಿಕ! 

ಭದ್ರತಾ ಕ್ಷೇತ್ರಗಳಲ್ಲಿ ಸಹಕಾರಕ್ಕೆ ಟ್ರಂಪ್‌- ಮೋದಿ ಒಪ್ಪಿಗೆ
ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಮತ್ತು ಪ್ರಧಾನಿ ನರೇಂದ್ರ ಮೋದಿ ಮಂಗಳವಾರ ತಡರಾತ್ರಿ ದೂರವಾಣಿಯಲ್ಲಿ ಮಾತುಕತೆ ನಡೆಸಿದ್ದಾರೆ. ಈ ವೇಳೆ, ಭಾರತವನ್ನು ನಿಜವಾದ ಸ್ನೇಹಿತ ಮತ್ತು ಭಾಗಿದಾರ ಎಂದು ಪರಿಗಣಿಸುತ್ತದೆ ಎಂದು ಟ್ರಂಪ್‌ ಪ್ರಧಾನಿಗೆ ತಿಳಿಸಿದ್ದಾರೆ. ರಕ್ಷಣೆ ಮತ್ತು ಭದ್ರತಾ ಕ್ಷೇತ್ರದಲ್ಲಿ ಪರಸ್ಪರ ಸಹಕಾರಕ್ಕೂ ಸಮ್ಮತಿ ಸೂಚಿಸಿದ್ದಾರೆ. ಇಬ್ಬರು ನಾಯಕರೂ ಪರಸ್ಪರ ದೇಶಗಳಿಗೆ ಭೇಟಿ ನೀಡುವ ಬಗ್ಗೆ ಆಹ್ವಾನ ವಿನಿಮಯ ಮಾಡಿಕೊಂಡಿದ್ದಾರೆ. ಹಾಲಿ ವರ್ಷವೇ ಮೋದಿಯವರನ್ನು ಅಮೆರಿಕದಲ್ಲಿ ಭೇಟಿ ಮಾಡಲು ಟ್ರಂಪ್‌ ಮುಂದಾಗಿದ್ದಾರೆ ಎಂದು ಶ್ವೇತಭವನದ ಪ್ರಕಟಣೆ ತಿಳಿಸಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next