“ಇದೊಂದು ಔಟ್ ಅಂಡ್ ಔಟ್ ಕಮರ್ಷಿಯಲ್ ಸಿನಿಮಾ …’
– ಹೀಗೆಂದರು ನಿರ್ದೇಶಕ ದಯಾಳ್ ಪದ್ಮನಾಭನ್. ಅವರು “ಸತ್ಯ ಹರಿಶ್ಚಂದ್ರ’ ಎಂಬ ಸಿನಿಮಾ ಮಾಡಿದ್ದಾರೆ. ಚಿತ್ರ ಅಕ್ಟೋಬರ್ 20ಕ್ಕೆ ಬಿಡುಗಡೆಯಾಗುತ್ತಿದೆ. ಶರಣ್ ಈ ಚಿತ್ರದ ನಾಯಕ. ಆದರೂ ಅವರು “ಇದು ಕಮರ್ಷಿಯಲ್ ಸಿನಿಮಾ’ ಎಂದು ಒತ್ತಿ ಹೇಳಲು ಕಾರಣ ದಯಾಳ್ ಇತ್ತೀಚೆಗೆ ಮಾಡಿದ ಸಿನಿಮಾಗಳು. “ಇತ್ತೀಚೆಗೆ ನಾನು ಒಂದಷ್ಟು ಬೇರೆ ತರಹದ ಸಿನಿಮಾಗಳನ್ನು ಮಾಡಿಕೊಂಡಿದ್ದೆ. ತುಂಬಾ ಗ್ಯಾಪ್‌ನ ನಂತರ ಮಾಡಿದ ಕಮರ್ಷಿಯಲ್ ಸಿನಿಮಾವಿದು.
ಹೊಸ ಬಗೆಯ ಕಾಮಿಡಿಯೊಂದಿಗೆ ಈ ಚಿತ್ರ ಮೂಡಿಬಂದಿದೆ’ ಎಂದರು ದಯಾಳ್. ಈ ಹಿಂದೆ ಬಂದ “ಸತ್ಯ ಹರಿಶ್ಚಂದ್ರ’ ಚಿತ್ರಕ್ಕೂ ಈ ಚಿತ್ರಕ್ಕೂ ಯಾವುದಾದರೂ ಸಂಬಂಧವಿದೆಯಾ ಎಂದರೆ ಖಂಡಿತಾ ಇಲ್ಲ. ಇಲ್ಲಿ ನಾಯಕನ ಹೆಸರು ಸತ್ಯ ಹರಿಶ್ಚಂದ್ರ. ಆದರೆ ಆತನ ಗುಣ ಸುಳ್ಳು ಹೇಳ್ಳೋದು. ಈ ತರಹದ ಒಂದು ಪಾತ್ರದೊಂದಿಗೆ ಸಿನಿಮಾ ಸಾಗುತ್ತದೆ ಎಂದು ಚಿತ್ರದ ಬಗ್ಗೆ ವಿವರ ನೀಡುತ್ತಾರೆ ದಯಾಳ್. ಕಾಮಿಡಿಯಾಗಿಯೇ ಸಾಗುವ ಚಿತ್ರ ಕೊನೆಯ 20 ನಿಮಿಷ ತುಂಬಾ ಎಮೋಶನಲ್ ಆಗಿದೆಯಂತೆ. ಚಿತ್ರದಲ್ಲಿ ರೆಗ್ಯುಲರ್ ಕಾಮಿಡಿ ಬಿಟ್ಟು ಹೊಸ ಬಗೆಯ ಕಾಮಿಡಿ ಇದೆ ಎನ್ನಲು ದಯಾಳ್ ಮರೆಯಲಿಲ್ಲ.
ಕೆ.ಮಂಜು ಅವರು ಈ ಚಿತ್ರ ವನ್ನು ನಿರ್ಮಿಸಿದ್ದಾರೆ. ಚಿತ್ರ ದೀಪಾವಳಿ ಸಮಯದಲ್ಲಿ ಬಿಡುಗಡೆ ಯಾಗುತ್ತಿರುವುದರಿಂದ ಜನ ಖುಷಿಯಿಂದ ಈ ಸಿನಿಮಾವನ್ನು ಸ್ವೀಕರಿಸುತ್ತಾರೆಂಬ ವಿಶ್ವಾಸ ಮಂಜು ಅವರಿಗಿದೆ. ಚಿತ್ರ ಬಿಡುಗಡೆಗೆ ಮುನ್ನವೇ ಮಂಜು ಹಾಕಿದ ಬಂಡವಾಳದಲ್ಲಿ ಎರಡು ಕೋಟಿ ರೂಪಾಯಿ ವಾಪಾಸ್ ಪಡೆದಿದ್ದಾರೆ. ಟಿವಿ ರೈಟ್ಸ್‌ನಿಂದ 1.80 ಕೋಟಿ, ಆಡಿಯೋದಿಂದ 15 ಲಕ್ಷ ಹಾಗೂ ಹಿಂದಿ ಡಬ್ಬಿಂಗ್‌ನಿಂದ ಮೂವತ್ತು ಲಕ್ಷ ಬಂದಿದ್ದಾಗಿ ವಿವರ ಕೊಡುತ್ತಾರೆ ಮಂಜು. ಚಿತ್ರದ ವಿತರಣೆಯನ್ನು ಜಾಕ್ ಮಂಜು ಮಾಡುತ್ತಿದ್ದು, ಅವರು ಕೂಡಾ ಒಳ್ಳೆಯ ಬೆಲೆ ಕೊಡುತ್ತಾರೆಂಬ ವಿಶ್ವಾಸ ಮಂಜು ಅವರಿಗಿದೆಯಂತೆ.
ನಾಯಕ ಶರಣ್ ಅವರ ಸಿನಿ ಕೆರಿಯರ್‌ನಲ್ಲಿ “ಸತ್ಯ ಹರಿಶ್ಚಂದ್ರ’ ಹೊಸ ಬಗೆಯ ಸಿನಿಮಾವಾಗುವ ವಿಶ್ವಾಸ. ರೆಗ್ಯುಲರ್ ಕಾಮಿಡಿ ಬಿಟ್ಟು ಬೇರೆ ತೆರನಾದ ಕಾಮಿಡಿಯನ್ನು ಈ ಸಿನಿಮಾದಿಂದ ನಿರೀಕ್ಷಿಸಬಹುದು ಎಂಬುದು ಶರಣ್ ಮಾತು. ಚಿತ್ರದಲ್ಲಿ ಭಾವನಾ ರಾವ್ ಹಾಗೂ ಸಂಚಿತಾ ನಾಯಕಿಯರಾಗಿ ನಟಿಸಿದ್ದಾರೆ. ಚಿತ್ರದ ಬಗ್ಗೆ ಇಬ್ಬರೂ ಹೆಚ್ಚೇನು ಮಾತನಾಡಲಿಲ್ಲ. ಚಿತ್ರದ “ಕುಲದಲ್ಲಿ ಮೇಲ್ಯಾವುದೋ ..’ ಹಾಡನ್ನು ಇಮ್ರಾನ್ ಸರ್ದಾರಿಯಾ ಕೊರಿಯೋಗ್ರಾಫ್ ಮಾಡಿದ್ದಾರೆ. ಆರಂಭದಲ್ಲಿ ದಯಾಳ್ ಈ ಹಾಡನ್ನು “ನೀವು ಮಾಡಿಕೊಡಿ’ ಎಂದಾಗ ಇಮ್ರಾನ್ ಹಿಂದೇಟು ಹಾಕಿದರಂತೆ. ಅದಕ್ಕೆ ಕಾರಣ ಅಷ್ಟೊಂದು ಜನಪ್ರಿಯ ಹಾಡನ್ನು ಮರುಸೃಷ್ಟಿ ಮಾಡೋದು ಸುಲಭದ ಕೆಲಸವಲ್ಲ ಎಂದು ಹೆದರಿದರಂತೆ. ಆ ನಂತರ ಪೂರ್ವತಯಾರಿಯೊಂದಿಗೆ ಅದ್ಧೂರಿಯಾಗಿ ಮೂಡಿಬಂತು ಎಂದು ಅನುಭವ ಹಂಚಿಕೊಂಡರು.
ಚಿತ್ರ ವಿತರಣೆ ಮಾಡುತ್ತಿರುವ ಜಾಕ್ ಮಂಜು ಕೂಡಾ ಚಿತ್ರದ ಬಗ್ಗೆ ಮಾತನಾಡಿದರು.