ರಾಯಚೂರು: ಜಿಲ್ಲೆಯಲ್ಲಿ ಟ್ರಕ್ ಟರ್ಮಿನಲ್ ನಿರ್ಮಾಣಕ್ಕಾಗಿ ಎಪಿಎಂಸಿಯವರು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿ, ಕಡಿಮೆ ದರದಲ್ಲಿ ಸ್ಥಳ ಖರೀದಿಸಿ ಟರ್ಮಿನಲ್ ನಿರ್ಮಿಸಲಾಗುವುದು ಎಂದು ಡಿ.ದೇವರಾಜ ಅರಸು ಟ್ರಕ್ ಟರ್ಮಿನಲ್ ಅಧ್ಯಕ್ಷ ಡಿ.ಎಸ್. ವೀರಯ್ಯ ಹೇಳಿದರು.
ಟ್ರಕ್ ಟರ್ಮಿನಲ್ ನಿರ್ಮಾಣಕ್ಕಾಗಿ ಜಮೀನು ಸ್ವಾಧೀನಪಡಿಸಿಕೊಳ್ಳುವ ಕುರಿತು ಸಮೀಪದ ನಗರದ ಹೊರವಲಯದ ಸರ್ಕಿಟ್ ಹೌಸ್‌ನಲ್ಲಿ ಶನಿವಾರ ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಜಿಲ್ಲೆಯಲ್ಲಿ ಟ್ರಕ್ ಟರ್ಮಿನಲ್ ನಿರ್ಮಿಸಲು ಹಲವು ವರ್ಷಗಳ ಬೇಡಿಕೆ ಇದೆ. ನಾನು ಸರ್ಕಾರಕ್ಕೆ ಮನವಿ ಮಾಡುವುದಾಗಿ ತಿಳಿಸಿದರು. ಹಳೆಯ ದರ 80 ರೂ.ಗೆ ಒಂದು ಸ್ಕ್ವಾರ್ ಫೀಟ್ ಸ್ಥಳ ಕೊಡಲು ಪ್ರಸ್ತಾವನೆ ಕಳುಹಿಸಿದ್ದು, ಆದರೆ, ಅದು ಕಾರ್ಯಕ್ಕೆ ಬಾರದೆ ನನೆಗುದಿಗೆ ಬಿದ್ದಿತ್ತು. ನಾನು ಅಧಿಕಾರ ವಹಿಸಿಕೊಂಡ ಮೇಲೆ ನಿಮ್ಮ ಜಿಲ್ಲೆಯಲ್ಲಿ ಟ್ರಕ್ ಟರ್ಮಿನಲ್ ನಿರ್ಮಿಸಲು ಮುಂದಾಗಿದ್ದೇನೆ. ಅದರಲ್ಲಿ 40 ರೂ. ಸ್ಕ್ವಾರ್ ಫೀಟ್‌ನಂತೆ ರಿಯಾಯಿತಿ ದರದಲ್ಲಿ ಖರೀದಿಸಿದರೆ ಅನುಕೂಲವಾಗುತ್ತದೆ ಎಂದರು.
ಅದಕ್ಕೂ ಮುನ್ನ ಹತ್ತಿ ಮಾರುಕಟ್ಟೆಗೆ ಭೇಟಿ ನೀಡಿ ಎಪಿಎಂಸಿ ಅಧಿಕಾರಿಗಳ ಸಮ್ಮುಖದಲ್ಲಿ 10 ಎಕರೆ ಜಾಗ ಪರಿಶೀಲಿಸಿದರು. ನಗರ ಶಾಸಕ ಡಾ| ಶಿವರಾಜ್ ಪಾಟೀಲ್, ನಗರಾಭಿವೃದ್ಧಿ ಅಧ್ಯಕ್ಷ ತಿಮ್ಮಪ್ಪ ನಾಡಗೌಡ, ಮುಖಂಡ ರವೀಂದ್ರ ಜಲ್ದಾರ್, ಎಪಿಎಂಸಿ ಕಾರ್ಯದರ್ಶಿ ಶೈಲಾಜಾ, ಎಪಿಎಂಸಿ ಸಹಾಯಕ ಕಾರ್ಯದರ್ಶಿ ಬಿ.ಕೃಷ್ಣ, ಮಾರುಕಟ್ಟೆ ವ್ಯವಹಾರ ಹಿರಿಯ ನಿರ್ದೇಶಕ ಸುರೇಶ ಬಾಬು ಸೇರಿ ಇತರರಿದ್ದರು.