Advertisement
ರಾಜ್ಯದಲ್ಲಿ ಜಿಎಸ್‌ಟಿಯಡಿ ನೋಂದಾಯಿತ ವ್ಯವಹಾ ರಸ್ಥರ ಪೈಕಿ ಐದು ಕೋಟಿ ರೂ.ಗಿಂತ ಕಡಿಮೆ ವಾರ್ಷಿಕ ವಹಿವಾಟು ಹೊಂದಿರುವವರೇ ಗಣನೀಯ ಸಂಖ್ಯೆಯಲ್ಲಿದ್ದಾರೆ. ಹಾಗಾಗಿ ಸುಧಾರಿತ ಸಹಜ್, ಸುಗಮ್ ವ್ಯವಸ್ಥೆಯಡಿ ಮಾಸಿಕ ರಿಟರ್ನ್ಸ್ ಸಲ್ಲಿಕೆ ದಿನಾಂಕ ಬದಲಾವಣೆ ಜತೆಗೆ ತ್ತೈಮಾಸಿಕ ರಿಟರ್ನ್ಸ್ ಸಲ್ಲಿಕೆಗೂ ಅವಕಾಶ ಕಲ್ಪಿಸುವ ಬಗ್ಗೆ ಚಿಂತನೆ ನಡೆದಿದೆ.
Related Articles
Advertisement
ಇದಕ್ಕೆ ಸ್ಪಂದಿಸಿದಂತಿರುವ ಜಿಎಸ್‌ಟಿ ಕೌನ್ಸಿಲ್ ಸುಧಾರಿತ ಅರ್ಜಿ ನಮೂನೆಗಳನ್ನು ಸಿದ್ಧಪಡಿಸಿ ವೆಬ್‌ಸೈಟ್‌ನಲ್ಲಿ ಪ್ರಕಟಿಸಿದೆ. ಐದು ಕೋಟಿ ರೂ.ಗಿಂತ ಕಡಿಮೆ ವಾರ್ಷಿಕ ವಹಿವಾಟು ಹೊಂದಿರುವ “ಡೀಲರ್- ಗ್ರಾಹಕ’ ವ್ಯವಹಾರಸ್ಥರ ಅನುಕೂಲಕ್ಕಾಗಿ “ಸಹಜ್’ ಅರ್ಜಿ ನಮೂನೆ ಪರಿಚಯಿಸಿದೆ. ಹಾಗೆಯೇ ಐದು ಕೋಟಿ ರೂ.ಗಿಂತ ಕಡಿಮೆ ವಾರ್ಷಿಕ ವಹಿವಾಟು ಹೊಂದಿರುವ “ಡೀಲರ್- ಡೀಲರ್’ ಹಾಗೂ “ಡೀಲರ್- ಗ್ರಾಹಕ’ ವ್ಯವಹಾರ ನಡೆಸುವವರಿಗೆ “ಸುಗಮ್’ ಅರ್ಜಿ ನಮೂನೆ ಬಿಡುಗಡೆ ಮಾಡಿದೆ. ಐದು ಕೋಟಿ ರೂ.ಗಿಂತ ಹೆಚ್ಚು ವಾರ್ಷಿಕ ವಹಿವಾಟು ನಡೆಸುವವರಿಗೆ “ನಾರ್ಮಲ್’ ಅರ್ಜಿ ನಮೂನೆಯನ್ನು ವೆಬ್‌ಸೈಟ್‌ನಲ್ಲಿ ಪರಿಚಯಿಸಿದೆ.
ತಿಂಗಳ 25ರಂದು ರಿಟರ್ನ್ಸ್ ಸಲ್ಲಿಕೆ ಅವಕಾಶ: “ಸಹಜ್’, “ಸುಗಮ್’, “ನಾರ್ಮಲ್’ ಅರ್ಜಿ ನಮೂನೆಯಡಿ ಹೆಚ್ಚುವರಿ ಅಂಕಣ ವಿವರ ಭರ್ತಿ ಮಾಡುವ ಪ್ರಕ್ರಿಯೆ ಕೈಬಿಡುವ ಪ್ರಸ್ತಾಪವಿದೆ. ಅಲ್ಲದೇ ಸಹಜ್, ಸುಗಮ್ ಅರ್ಜಿ ನಮೂನೆಯಡಿ ರಿಟರ್ನ್ಸ್ ಸಲ್ಲಿಸುವವರು ತಿಂಗಳ 20ನೇ ದಿನಾಂಕದ ಬದಲಿಗೆ 25ರಂದು ರಿಟರ್ನ್ಸ್ ಸಲ್ಲಿಕೆಗೆ ಅವಕಾಶ ಸಿಗಲಿದೆ. ಇದರಿಂದ ತಿಂಗಳ 20ರಂದು ಒಮ್ಮೆಗೆ ಲಕ್ಷಾಂತರ ಮಂದಿ ರಿಟರ್ನ್ಸ್ ಸಲ್ಲಿಸಲು ಮುಂದಾಗುತ್ತಿದ್ದರಿಂದ ಸರ್ವರ್ ಮೇಲೆ ಉಂಟಾಗುತ್ತಿದ್ದ ಒತ್ತಡ ತಗ್ಗಿದಂತಾಗಲಿದ್ದು, ಮಾಹಿತಿ ರವಾನೆ ಸುಗಮವಾಗುವ ನಿರೀಕ್ಷೆ ಇದೆ.
ಮುಖ್ಯವಾಗಿ ಸಹಜ್, ಸುಗಮ್ ಅಡಿಯಲ್ಲಿ ಪ್ರತಿ ತಿಂಗಳ ಬದಲಿಗೆ ಮೂರು ತಿಂಗಳಿಗೊಮ್ಮೆ ರಿಟರ್ನ್ಸ್ ಸಲ್ಲಿಕೆಗೂ ಅವಕಾಶ ನೀಡುವ ಚಿಂತನೆ ಇದೆ. ಅಂದರೆ ಮಾಸಿಕ ತೆರಿಗೆ ಪಾವತಿಸಿ ವಹಿವಾಟಿನ ವಿವರಗಳನ್ನು ಮೂರು ತಿಂಗಳಿಗೊಮ್ಮೆ ಸಲ್ಲಿಸಲು ಅವಕಾಶ ಕೊಡುವ ಚಿಂತನೆ ಇದೆ. ಇದರಿಂದ ಸರ್ವರ್ ಮೇಲೆ ಯಾವುದೇ ರೀತಿಯ ಒತ್ತಡ ಉಂಟಾಗದಂತೆ ತಡೆಯಬಹುದಾಗಿದೆ ಎಂಬುದು ಅಧಿಕಾರಿಗಳ ನಿರೀಕ್ಷೆ. “ನಾರ್ಮಲ್’ ಅರ್ಜಿ ನಮೂನೆ ಬಳಸುವ ವಹಿವಾಟುದಾರರು ತಿಂಗಳ 20 ರಂದು ರಿಟರ್ನ್ಸ್ ಸಲ್ಲಿಕೆ ವ್ಯವಸ್ಥೆ ಮುಂದುವರಿಯಲಿದೆ.
ದೇಶದಲ್ಲಿ 1.30 ಕೋಟಿಗೂ ಹೆಚ್ಚು ಮಂದಿ ಜಿಎಸ್‌ಟಿಡಿಯಡಿ ನೋಂದಾಯಿಸಿಕೊಂಡಿದ್ದು, ಇದರಲ್ಲಿ 1.10 ಕೋಟಿ ವ್ಯಾಪಾರ ವಹಿವಾಟುದಾರರು ಸಹಜ್, ಸುಗಮ್ ವ್ಯಾಪ್ತಿಗೆ ಒಳಪಡಲಿದ್ದಾರೆ. ರಾಜ್ಯದಲ್ಲೂ 8 ಲಕ್ಷ ಮಂದಿ ಜಿಎಸ್‌ಟಿಯಡಿ ನೋಂದಾಯಿಸಿ ಕೊಂಡಿದ್ದು, ಇಲ್ಲಿಯೂ ಐದು ಕೋಟಿ ರೂ.ಗಿಂತಲೂ ಕಡಿಮೆ ವಾರ್ಷಿಕ ವಹಿವಾಟು ಹೊಂದಿರುವವರ ಸಂಖ್ಯೆ 6 ಲಕ್ಷಕಿಂತ ಹೆಚ್ಚು ಇದೆ. ಹಾಗಾಗಿ ಸುಧಾರಿತ ಅರ್ಜಿ ನಮೂನೆಗಳಿಂದ ರಾಜ್ಯದ ಲಕ್ಷಾಂತರ ಮಂದಿ ವ್ಯಾಪಾರಸ್ಥರಿಗೆ ಅನುಕೂಲವಾಗುವ ನಿರೀಕ್ಷೆ ಇದೆ ಎಂದು ಮೂಲಗಳು ಹೇಳಿವೆ.
ಅ. 1ರಿಂದ ಜಾರಿ ನಿರೀಕ್ಷೆ: ಸಹಜ್, ಸುಗಮ್, ನಾರ್ಮಲ್ ಅರ್ಜಿ ನಮೂನೆ ಬಳಕೆ ವ್ಯವಸ್ಥೆಯನ್ನು ಅ.1ರಿಂದ ಜಾರಿಗೊಳಿಸುವ ಮಾತುಗಳಿದ್ದು, ಈ ಬಗ್ಗೆ ಜಿಎಸ್‌ಟಿ ಕೌನ್ಸಿಲ್ ಅಂತಿಮ ತೀರ್ಮಾನ ಕೈಗೊಳ್ಳಬೇಕಿದೆ. ಆ ಹಿನ್ನೆಲೆಯಲ್ಲಿ ಸುಧಾರಿತ ಅರ್ಜಿ ನಮೂನೆಗಳನ್ನು ಪ್ರಕಟಿಸಿ ಆಕ್ಷೇಪಣೆ, ಸಲಹೆ, ಸೂಚನೆಯನ್ನು ಸ್ವೀಕರಿಸಲಾಗಿತ್ತು. ಸುಧಾರಿತ ಅರ್ಜಿ ನಮೂನೆಗಳಡಿ ರಿಟರ್ನ್ಸ್ ಸಲ್ಲಿಕೆಗೆ ಅವಕಾಶ ನೀಡಿದರೆ ಸರ್ವರ್ ಮೇಲಿನ ಒತ್ತಡ ತಗ್ಗಲಿದೆ. ಕಾಲಮಿತಿಯಲ್ಲಿ ಸಮರ್ಪಕವಾಗಿ ರಿಟರ್ನ್ಸ್ ಸಲ್ಲಿಕೆಗೆ ಅವಕಾಶವಿದೆ. ಪರಿಣಾಮವಾಗಿ ತೆರಿಗೆ ಸಂಗ್ರಹ ಹೆಚ್ಚಾಗುವ ನಿರೀಕ್ಷೆ ಎಂದು ರಾಜ್ಯ ವಾಣಿಜ್ಯ ತೆರಿಗೆ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
ರಿಟರ್ನ್ಸ್ ಸಲ್ಲಿಕೆ ಪ್ರಕ್ರಿಯೆಯಲ್ಲಿ ಅನಗತ್ಯ ವಿವರ ನಮೂದು, ಹೆಚ್ಚುವರಿ ಅಂಕಣಗಳನ್ನು ಕೈಬಿಡಬೇಕು ಎಂಬುದು ವ್ಯಾಪಾರ- ವಹಿವಾಟುದಾರರ ಒತ್ತಾಯವಾಗಿತ್ತು, ಎಫ್ಕೆಸಿಸಿಐ ವತಿಯಿಂದಲೂ ಜಿಎಸ್‌ಟಿ ಕೌನ್ಸಿಲ್‌ಗೆ ಮನವಿ ಸಲ್ಲಿಸಲಾಗಿತ್ತು. ಇದಕ್ಕೆ ಸ್ಪಂದನೆ ದೊರೆತಂತಿದ್ದು, ಸುಧಾರಿತ ಅರ್ಜಿ ನಮೂನೆಗಳನ್ನು ಪರಿಚಯಿಸಲು ಮುಂದಾಗಿರುವುದು ಸ್ವಾಗತಾರ್ಹ. ಈ ಬಗ್ಗೆ ವಾಣಿಜ್ಯೋದ್ಯಮಿಗಳಲ್ಲಿ ಹೆಚ್ಚಿನ ಅರಿವು ಮೂಡಿಸಬೇಕಿದೆ. ಬಿ.ಟಿ.ಮನೋಹರ್, ಎಫ್ಕೆಸಿಸಿಐ ರಾಜ್ಯ ಜಿಎಸ್‌ಟಿ ಸಮಿತಿ ಅಧ್ಯಕ್ಷ * ಎಂ.ಕೀರ್ತಿಪ್ರಸಾದ್