Advertisement

ಕಷ್ಟಗಳಿಗೆ ಮಿಡಿಯುವ ಮನಸ್ಸು ಅಗತ್ಯ

07:02 PM Apr 20, 2021 | Nagendra Trasi |

ಮುದ್ದೇಬಿಹಾಳ: ಮಾನವೀಯತೆಯ ನೆರವು ಮನುಷ್ಯನನ್ನು ಎತ್ತರದ ಸ್ಥಾನದಲ್ಲಿ ಕೂಡ್ರಿಸುತ್ತದೆ. ಕಷ್ಟದಲ್ಲಿರುವವರ ಬಗ್ಗೆ ಮಿಡಿಯುವ ಮನಸ್ಸುಗಳು ದೇವರಿಗೆ ಪ್ರಿಯವಾಗಿರುತ್ತವೆ. ಸದಾಚಾರ, ಸತ್ಸಂಪ್ರದಾಯ, ಕಷ್ಟಕ್ಕೆ ಮಿಡಿಯುವ ಮನಸ್ಸು ನಮ್ಮೆಲ್ಲರದ್ದಾಗಬೇಕು. ಇದು ಸಮಾಜ ಕಟ್ಟುವ ಕೆಲಸದಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ ಎಂದು ಕುಂಟೋಜಿ ಸಂಸ್ಥಾನ ಹಿರೇಮಠದ ಚನ್ನವೀರ ದೇವರು ಹೇಳಿದರು.

Advertisement

ಪಟ್ಟಣದ ಬಸ್‌ ನಿಲ್ದಾಣ ಪಕ್ಕದಲ್ಲಿರುವ ಹಳೆ ಸಿಪಿಐ ಕಚೇರಿ ಆವರಣದಲ್ಲಿ ಸೋಮವಾರ ನೂತನವಾಗಿ ಅಸ್ತಿತ್ವಕ್ಕೆ ಬಂದಿರುವ ಕುಮಾರೇಶ್ವರ ಜೀವನ ವಿಕಾಸ ಫೌಂಡೇಶನ್‌ ಅಡಿ ಬೀದಿ ಬದಿ ವ್ಯಾಪಾರಿಗಳಿಗೆ ಮಾನವೀಯ ನೆರಳು ಯೋಜನೆಯಡಿ ದೊಡ್ಡ ಕೊಡೆ ವಿತರಿಸುವ ಪ್ರಥಮ ಕಾರ್ಯಕ್ರಮದ ನೇತೃತ್ವ ವಹಿಸಿ ಅವರು ಮಾತನಾಡಿದರು.

ಒಳಿತು ಮಾಡು ಮನುಜ ನೀ ಇರೋದು ಮೂರು ದಿವಸಾ ಅನ್ನೋದರ ಮಹತ್ವವನ್ನು ನಾವೆಲ್ಲರೂ ಅರಿತುಕೊಳ್ಳಬೇಕು. ಆತ್ಮನಿರ್ಭರ ಭಾರತಕ್ಕೆ ಬೆಂಬಲಿಸುವ ಮನೋಭಾವ ನಮ್ಮದಾಗಬೇಕು. ದುಡಿಯುವ ಕೈಗಳಿಗೆ ಮಾನವೀಯ ನೆರವು, ಸ್ವಾವಲಂಬಿ ಬದುಕಿಗೆ ಸೇತುವೆಯಾಗಿ ಫೌಂಡೇಶನ್‌ ಕೆಲಸ ಮಾಡಲಿದೆ. ಕಷ್ಟದಲ್ಲಿರುವವರಿಗೆ ನೆರವಾಗುವುದರಲ್ಲಿಯೇ ನಿಜವಾದ ಸಾರ್ಥಕತೆ ಅಡಗಿದೆ ಎನ್ನುವುದನ್ನು ತಿಳಿದುಕೊಳ್ಳಬೇಕು ಎಂದರು.

ಜಾತಿ ಮಾಡೋದು ಸ್ವಾಮಿಗಳ ಕಾರ್ಯವಲ್ಲ. ಎಲ್ಲರನ್ನೂ ಒಟ್ಟಿಗೆ ಕರೆದೊಯ್ಯುವುದು, ಎಲ್ಲರನ್ನೂ ಒಂದಡೆ ಕೂಡಿಸುವುದು ಸ್ವಾಮೀಜಿಗಳ, ಮಠಾಧೀಶರ ಕಾರ್ಯವಾಗಿದೆ. ದೇಶ, ಸಮಾಜದ ಚಿಂತನೆ, ಯುವಕರಲ್ಲಿ ಪ್ರೋತ್ಸಾಹ, ದೇಶಪ್ರೇಮ ಬೆಳೆಸುವ, ಪ್ರೇರೇಪಿಸುವ ಕೆಲಸವನ್ನು ಮಠಾಧಿಪತಿಗಳು ಆಯ್ದುಕೊಳ್ಳಬೇಕು. ಪ್ರತಿಯೊಂದಕ್ಕೂ ಸರ್ಕಾರವನ್ನೇ ಅವಲಂಬಿಸುವ, ದೂಷಿಸುವುದನ್ನು ಕೈ ಬಿಟ್ಟು ಸೇತುವೆಯಾಗಿ ಕೆಲಸ ಮಾಡುವುದನ್ನು ಫೌಂಡೇಶನ್‌ ಪಾಲಿಸುತ್ತದೆ. ದಾನಿಗಳು ಫೌಂಡೇಶನ್‌ ಗೆ ಬೆನ್ನೆಲುಬಾಗಿ ನಿಲ್ಲಬೇಕು ಎಂದರು.

ಭಾರತ ಸ್ಕೌಟ್ಸ್‌ ಮತ್ತು ಗೈಡ್ಸ್‌ ಸ್ಥಳೀಯ ಸಂಸ್ಥೆ ಉಪಾಧ್ಯಕ್ಷ ಡಿ.ಬಿ. ವಡವಡಗಿ ಮಾತನಾಡಿ, ಹಾನಗಲ್ಲ ಕುಮಾರೇಶ್ವರ ಶಿವಯೋಗಿಗಳು ಹಾಕಿಕೊಟ್ಟ ಸತ್ಸಂಪ್ರದಾಯ, ಚನ್ನವೀರ ದೇವರ ಸಮಾಜಮುಖೀ ಕಾರ್ಯ ಮತ್ತು ನೂತನವಾಗಿ ಅಸ್ತಿತ್ವಕ್ಕೆ ಬಂದಿರುವ ಫೌಂಡೇಶನ್‌ ಕಾರ್ಯಚಟುವಟಿಕೆಗಳು, ಯೋಜನೆಗಳನ್ನು ವಿವರಿಸಿದರು.

Advertisement

ಸಮಾಜದಲ್ಲಿ ಸಮಾಜೋಪಯೋಗಿ ಕಾರ್ಯಗಳನ್ನು ನಡೆಸುವ ಮೂಲಕ ಎಲ್ಲರಿಗೂ ಪ್ರೇರಣೆ ನೀಡುತ್ತ, ಮಾನವೀಯತೆ ಮಹತ್ವ ಪ್ರಾಯೋಗಿಕವಾಗಿ ತಿಳಿಸಿಕೊಡುತ್ತಿರುವ ಚನ್ನವೀರ ದೇವರ ಕಾರ್ಯ ಸಮಾಕ್ಕೆ ಮಾದರಿಯಾದದ್ದು. ಮುಂಬರುವ ದಿನಗಳಲ್ಲಿ ಫೌಂಡೇಶನ್‌ ರಾಜ್ಯಕ್ಕೆ ಮಾದರಿಯಾಗಲಿ. ಫೌಂಡೇಶನ್‌ನಲ್ಲಿರುವ ಸ್ವಾಮೀಜಿಯವರಾದಿಯಾಗಿ ಎಲ್ಲ ಯುವಕರು ನಿಸ್ವಾರ್ಥಿಗಳಾಗಿ, ಟೀಕೆ ಟಿಪ್ಪಣಿಗಳಿಗೆ ಅತೀತರಾಗಿ ಸಮಾಜೋಪಯೋಗಿ ಕೆಲಸ
ಮಾಡುವಂಥವರಾಗಿದ್ದಾರೆ. ದಾನಿಗಳು, ಸಮಾಜದ ನಡುವೆ ಸೇತುವೆಯಾಗಿ ಸಾರ್ಥಕ ಸೇವೆ ಮಾಡುವಲ್ಲಿ ಫೌಂಡೇಶನ್‌ಗೆ ಹೆಚ್ಚೆಚ್ಚು ಬೆಂಬಲ ದೊರೆಯಲಿ ಎಂದರು.

25,000 ರೂ. ಮೌಲ್ಯದ ಕೊಡೆಗಳನ್ನು ಫೌಂಡೇಶನ್‌ ಮೂಲಕ ಬೀದಿ ಬದಿ ವ್ಯಾಪಾರಿಗಳಿಗೆ ಕೊಡುಗೆಯಾಗಿ ನೀಡಿದ ಸಮಾಜ ಸೇವಕ ಪ್ರಭುರಾಜ್‌ ಕಲಬುರ್ಗಿ ಅವರನ್ನು ಸನ್ಮಾನಿಸಲಾಯಿತು. ಹಿರಿಯ ಸಮಾಜ ಸೇವಕ ಅಶೋಕ ನಾಡಗೌಡರನ್ನು ಸನ್ಮಾನಿಸಲು ಮುಂದಾದಾಗ ಅದನ್ನು ನಯವಾಗಿಯೇ ನಿರಾಕರಿಸಿ ಪುರಸಭೆ ಹಿರಿಯ ಸದಸ್ಯ ಚನ್ನಪ್ಪ ಕಂಠಿ ಅವರನ್ನು ಸನ್ಮಾನಿಸಿ ಸರಳತೆ ಮೆರೆದರು.

ಬಸವರಾಜ ಸುಕಾಲಿ, ಎಂ.ಜಿ. ಬಿರಾದಾರ (ಬಾಂಬೇಗೌಡ), ಸುರೇಶ ಪಾಟೀಲ, ಮಲ್ಲನಗೌಡ ಬಿರಾದಾರ, ಬಿ.ಟಿ. ಬಿರಾದಾರ, ಸೋಮನಿಂಗಪ್ಪ ಗಸ್ತಿಗಾರ, ಹಡಪದ ಶಿಕ್ಷಕರು, ಸಂಗೀತಾ ನಾಡಗೌಡ ವೇದಿಕೆಯಲ್ಲಿದ್ದರು. ಮಹಾಂತೇಶ ಬೂದಿಹಾಳಮಠ, ಮುತ್ತು ವಡವಡಗಿ, ಬಸವರಾಜ ಬಿರಾದಾರ, ಸೋಮು ಗಸ್ತಿಗಾರ, ಚೇತನ್‌ ಶಿವಸಿಂಪಿ, ವೀರೇಶ ಹಿರೇಮಠ, ಸಂಗಯ್ಯ ಸಾರಂಗಮಠ, ಅಪ್ಪು ಬಿರಾದಾರ, ಹನುಮಂತ ನಲವಡೆ, ರೇಣುಕಾ ಹಳ್ಳೂರ, ಗಿರಿಜಾ ಕಡಿ, ಹರೀಶ ಬೇವೂರ ಇದ್ದರು. ಚೈತನ್ಯ ದಶವಂತ ಸ್ವಾಗತಿಸಿದರು. ಶಿವಕುಮಾರ ಶಾರದಳ್ಳಿ ಪ್ರಾಸ್ತಾವಿಕ ಮಾತನಾಡಿದರು. ಗಿರಿಜಾ ಕಡಿ ನಿರೂಪಿಸಿದರು. ಒಟ್ಟು 15 ಬೀದಿ ಬದಿ ವ್ಯಾಪಾರಸ್ಥರಿಗೆ ದೊಡ್ಡ ಕೊಡೆ ವಿತರಿಸಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next