ಬೆಂಗಳೂರು: ರಾಜ್ಯ ಬಿಜೆಪಿಯ ಒಳ ಬೇಗುದಿ, ಬಹಿರಂಗ ಹೇಳಿಕೆಗಳು, ನಾಯಕತ್ವ ಬದಲಾವಣೆ ಚರ್ಚೆಗಳಿಗೆಲ್ಲಾ ಅಂತ್ಯ ಹಾಡಲು ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ಇಂದು ಬೆಂಗಳೂರಿಗೆ ಆಗಮಿಸುತ್ತಿದ್ದಾರೆ. ಸಿಎಂ ಯಡಯೂರಪ್ಪ ಮತ್ತು ಕೆಲ ಶಾಸಕರೊಂದಿಗೆ ಚರ್ಚೆ ಮಾಡಲಿದ್ದಾರೆ. ರಾಜ್ಯಕ್ಕೆ ಅರುಣ್ ಸಿಂಗ್ ಆಗಮಿಸುತ್ತಿರುವುದು ಬಿಜೆಪಿ ಪಾಳಯದಲ್ಲಿ ಮಾತ್ರವಲ್ಲದೆ ರಾಜ್ಯ ರಾಜಕೀಯದಲ್ಲಿ ಕುತೂಹಲಕ್ಕೆ ಕಾರಣವಾಗಿದೆ.
ಮಧ್ಯಾಹ್ನ 3.30ಕ್ಕೆ ಅರುಣ್ ಸಿಂಗ್ ಬೆಂಗಳೂರಿಗೆ ಆಗಮಿಸಲಿದ್ದು, ಪಕ್ಷದ ಕಚೇರಿಯಲ್ಲಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹಾಗೂ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಜೊತೆ ಸಭೆ ನಡೆಸಲಿದ್ದಾರೆ. ನಂತರ ನಾಳೆ ಸಚಿವರು ಹಾಗೂ ಶಾಸಕರಿಂದ ವೈಯಕ್ತಿಕ ಅಭಿಪ್ರಾಯ ಆಲಿಸಲಿದ್ದಾರೆ ಎನ್ನಲಾಗಿದೆ.
ಇದನ್ನೂ ಓದಿ:ಸಿಎಂ ಬಿಎಸ್ ವೈ ಭೇಟಿಯಾಗಿ ‘ಬೆಲ್ಲದ’ ವಿಚಾರ ತಿಳಿಸಿದ ಬೊಮ್ಮಾಯಿ: ಕಾವೇರಿಗೆ ಶಾಸಕರ ದೌಡು
ಕೋವಿಡ್ ಸಂಕಷ್ಟದ ನಡುವೆಯೂ ರಾಜ್ಯದಲ್ಲಿ ನಾಯಕತ್ವ ಬದಲಾವಣೆ ಕೂಗು ಜೋರಾಗಿದೆ. ಸಿ.ಪಿ.ಯೋಗೇಶ್ವರ್ ಅವರ ದೆಹಲಿ ಭೇಟಿ ಮತ್ತು ಭಿನ್ನ ಹೇಳಿಕೆಯಿಂದ ಮತ್ತೆ ಬಿರುಸು ಪಡೆದ ಚರ್ಚೆ ಇದೀಗ ಹೈಕಮಾಂಡ್ ಮಟ್ಟ ತಲುಪಿದೆ. ಈ ಮಧ್ಯೆ ಸಿಎಂ ಯಡಿಯೂರಪ್ಪ ಅವರೂ ‘ಹೈಕಮಾಂಡ್ ಸೂಚಿಸಿದರೆ ರಾಜೀನಾಮೆ ನೀಡಲು ಸಿದ್ದ’ ಎಂದಿದ್ದರು. ಇದಾದ ಕೆಲವೇ ದಿನಗಳ ಬಳಿಕ ಹಾಸನದಲ್ಲಿ ಮಾತನಾಡುತ್ತಾ, ‘ಇನ್ನೂ ಎರಡು ವರ್ಷ ನಾನೇ ಸಿಎಂ’ ಎಂದಿದ್ದರು.
ಬಸನಗೌಡ ಪಾಟೀಲ್, ಸಿ.ಪಿ.ಯೋಗೇಶ್ವರ್ ಅವರ ಹೇಳಿಕೆಗಳು, ಧಾರವಾಡ ಶಾಸಕ ಅರವಿಂದ ಬೆಲ್ಲದ ಅವರ ದೆಹಲಿ ಭೇಟಿ ಮತ್ತು ಆರ್ ಎಸ್ ಎಸ್ ನಾಯಕ ಭೇಟಿ, ವಿಧಾನಸಭೆ ಮುಖ್ಯ ಸಚೇತಕ ಸುನೀಲ್ ಕುಮಾರ್ ಅವರ ‘ಮಾತನಾಡಲು ವೇದಿಕೆ ಬೇಕು’ ಎಂಬ ಹೇಳಿಕೆ ಮುಂತಾದ ಬೆಳವಣಿಗೆಗಳು ಇಂದಿನ ಅರುಣ್ ಸಿಂಗ್ ಭೇಟಿಯಲ್ಲಿ ಪ್ರತಿಧ್ವನಿಸಲಿದೆ. ಅರುಣ್ ಸಿಂಗ್ ಭೇಟಿ ಬಂಡಾಯದ ಬಿಸಿಯನ್ನು ಶಮನ ಮಾಡಲಿದೆಯೇ ಅಥವಾ ಕಾವು ಹೆಚ್ಚಿಸಲಿದೆಯೇ ಎನ್ನುವುದನ್ನು ಕಾದು ನೋಡಬೇಕಿದೆ.
ಇದನ್ನೂ ಓದಿ:ಶಿಕ್ಷಕಿಯರಿಗೆ ಮನೆಗೆಲಸ : ಸಾರಿಗೆ ವ್ಯವಸ್ಥೆ ಇಲ್ಲದವರಿಗೆ ಜೂ. 21ರ ವರೆಗೆ ವಿನಾಯಿತಿ