ಕಲಬುರಗಿ: ಪ್ರಧಾನ ಮಂತ್ರಿ ನರೇಂದ್ರ ಮೋದಿ ನೇತೃತ್ವದಲ್ಲಿ ಸೋಮವಾರ ನಡೆದ ಸಂಪುಟ ಸಭೆಯಲ್ಲಿ ಕೇಂದ್ರ ಸರ್ಕಾರ 2020-21ನೇ ಸಾಲಿನ ಕೃಷಿ ಉತ್ಪನ್ನಗಳ ಬೆಂಬಲ ಬೆಲೆ ಘೋಷಿಸಿದ್ದು, ಕಲ್ಯಾಣ ಕರ್ನಾಟಕದ ಪ್ರಮುಖ ವಾಣಿಜ್ಯ ಬೆಳೆ ತೊಗರಿಗೆ ಕ್ವಿಂಟಲ್‌ಗೆ ಕೇವಲ 200 ರೂ. ಹೆಚ್ಚಿಸಿದೆ.
ಕಳೆದ ವರ್ಷ ಇದ್ದ 5800 ರೂ. ಬೆಂಬಲ ಬೆಲೆಗೆ ಕೇವಲ 200 ರೂ. ಮಾತ್ರ ಹೆಚ್ಚಳ ಮಾಡುವ ಮುಖಾಂತರ ಅನ್ಯಾಯ ಮುಂದುವರಿಸಿದೆ. ಕಳೆದ ವರ್ಷ ಅದರ ಹಿಂದಿನ ಬೆಲೆಗೆ 225 ರೂ. ಹೆಚ್ಚಳ ಮಾಡಿತ್ತು. “ಕೃಷಿ ವೆಚ್ಚ ಮತ್ತು ಬೆಲೆಗಳ ಆಯೋಗದ (ಸಿಎಸಿಪಿ) ಶಿಫಾರಸಿನ ಆಧಾರದ ಮೇಲೆ ಕೇಂದ್ರದ ಸಂಪುಟ ಸಭೆಯು ಮುಂಗಾರು ಹಂಗಾಮಿನ 14 ಬೆಳೆಗಳ ಬೆಂಬಲ ಬೆಲೆ ನಿಗದಿಗೆ ಅನುಮೋದನೆ ನೀಡಿದೆ. ಪ್ರಮುಖವಾಗಿ ಭತ್ತ (ಸಾಮಾನ್ಯ) ಬೆಲೆಯನ್ನು ಈ ವರ್ಷ ಕ್ವಿಂಟಲ್‌ಗೆ 1,868 ರೂ.ಗೆ ಹೆಚ್ಚಿಸಲಾಗಿದೆ.
ಕಳೆದ ದಶಕದ ಅವಧಿಯಲ್ಲಿ 2011-12ನೇ ಸಾಲಿನಲ್ಲಿ 3000 ಸಾವಿರ ರೂ.ಗೆ ಇದ್ದ ತೊಗರಿ ಬೆಂಬಲ ಬೆಲೆಯನ್ನು 200 ರೂ. ಮಾತ್ರ ಬೆಂಬಲ ಬೆಲೆ ಹೆಚ್ಚಿಸಿದ್ದು ಬಿಟ್ಟರೆ ಉಳಿದೆಲ್ಲ ಸಮಯದಲ್ಲಿ 250 ರೂ.ಗೂ ಹೆಚ್ಚಳ ಮಾಡಲಾಗಿತ್ತು. ಆದರೆ ಕೇಂದ್ರ ಸರ್ಕಾರ ದಶಕದ ಹಿಂದೆ ಹೆಚ್ಚಳ ಮಾಡಲಾಗಿದ್ದ 200 ರೂ. ಈಗ ಕೈಗೆತ್ತಿಕೊಂಡಿದೆ. ಆದರೆ 2016-17 ನೇ ಸಾಲಿನಲ್ಲಿ 400 ರೂ. ಬೆಲೆ ಹೆಚ್ಚಳ ಮಾಡಲಾಗಿತ್ತು. ಆಗ ಇದ್ದ 5050 ರೂ.ಗೆ ಹೆಚ್ಚಿಸಲಾಗಿ 5450 ರೂ. ನಿಗದಿ ಮಾಡಲಾಗಿತ್ತು. ದೇಶಾದ್ಯಂತ ಬೇಳೆ ಕಾಳುಗಳಿಗೆ ಅದರಲ್ಲೂ ತೊಗರಿ ಬೇಳೆಗೆ ಬೇಡಿಕೆ ಬಂದಿದ್ದರಿಂದ ಕನಿಷ್ಟ 7 ಏಳು ಸಾವಿರ ರೂ. ಕ್ವಿಂಟಲ್‌ಗೆ ಬೆಂಬಲ ಬೆಲೆ ಘೋಷಣೆಯಾಗುವುದು ಎಂಬ ರೈತರ ನಿರೀಕ್ಷೆಗೆ ತಣ್ಣೀರರೆಚಲಾಗಿದ್ದು, ಆದರೆ ಮೂರು ತಿಂಗಳಿನ ಹೆಸರಿಗೆ ಬೆಂಬಲ ಬೆಲೆಯನ್ನು 7196 ರೂ.ಗೆ ನಿಗದಿ ಮಾಡಲಾಗಿದೆ.
ಅದೇ ರೀತಿ ಸೂರ್ಯಕಾಂತಿಗೆ 235 ರೂ. ಹೆಚ್ಚಿಸಿ 5885 ರೂ. ಬೆಂಬಲ ಬೆಲೆ ನಿಗದಿ ಮಾಡಲಾಗಿದೆ. ಜೋಳಕ್ಕೆ ಕೇವಲ 70 ರೂ. ಹೆಚ್ಚಿಸಲಾಗಿ 2640 ರೂ. ನಿಗದಿ ಮಾಡಲಾಗಿದೆ. ಬೀಜದಿಂದ ಹಿಡಿದು ಕೀಟನಾಶಕ ಸಿಂಪಡಣೆವರೆಗೂ ಹೆಚ್ಚು ವೆಚ್ಚ ತಗಲುವ ತೊಗರಿಗೆ ಹೇಗೆ 6000 ರೂ. ನಿಗದಿ ಮಾಡಲಾಗಿದ್ದರೆ ಆದರೆ ಹೆಚ್ಚಿನ ಖರ್ಚು ಬಾರದ ಮೂರು ತಿಂಗಳಿನ ಹೆಸರಿನ ಬೆಂಬಲ ಬೆಲೆ 7196 ರೂ. ಹೇಗೆ ಎಂಬುದಾಗಿ ರೈತರ ಪ್ರಶ್ನೆಗೆ ಯಾರ ಬಳಿಯೂ ಉತ್ತರವಿಲ್ಲ. ತೊಗರಿ ಕನಿಷ್ಟ 7000 ರೂ ಬೆಂಬಲ ಬೆಲೆ ನಿಗದಿಯಾಗಿದ್ದರೆ ರೈತರ ಸಹಾಯಕ್ಕೆ ಬರುವಂತಾಗುತ್ತಿತ್ತು. ಜನಪ್ರತಿನಿಧಿಗಳು ಅದರಲ್ಲೂ ರಾಜ್ಯ ಸರ್ಕಾರ ತೊಗರಿ ಬೆಂಬಲ ಬೆಲೆ ಹೆಚ್ಚಳವಾಗುವಲ್ಲಿ ಆಸಕ್ತಿ ತೋರದಿರುವುದು ಬೆಂಬಲ ಬೆಲೆ ಹೆಚ್ಚಿನ ನಿಟ್ಟಿನಲ್ಲಿ ಹೆಚ್ಚಳವಾಗದೇ ಇರುವುದು ಕಾಣಬಹುದಾಗಿದೆ.
ಕಾಗದದಲ್ಲಿಯೇ ಉಳಿಯದಿರಲಿ ಘೋಷಣೆ ಸರ್ಕಾರ ನಿಗದಿ ಮಾಡುವ ಬೆಂಬಲ ಬೆಲೆ ಕಾರ್ಯರೂಪಕ್ಕೆ ಬರಬೇಕು. ಬೆಂಬಲ ಬೆಲೆ ಮಾರುಕಟ್ಟೆಯಲ್ಲಿ ಸ್ಥಿರವಾಗುವಂತೆ ನೋಡಿಕೊಳ್ಳಬೇಕು. ಆದರೆ ಬೆಂಬಲ ಬೆಲೆ ಎಲ್ಲ ರೈತರಿಗೆ ದೊರಕುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಯೋಜನೆ ರೂಪಿಸಿದರೆ ಮಾತ್ರ ಸಹಾಯಕವಾಗುವುದು. ತೊಗರಿ ಬೆಂಬಲ ಬೆಲೆಯು ಕಳೆದ ವರ್ಷ ಶೇ. 30 ಪ್ರತಿಶತ ರೈತರಿಗೆ ಮಾತ್ರ ಲಾಭವಾಗಿದೆ.-
ಜಗದೇವಪ್ಪ ಪಾಟೀಲ, ರೈತ.
–ಹಣಮಂತರಾವ ಭೈರಾಮಡಗಿ