ಕ್ರೇಜಿಸ್ಟಾರ್ ರವಿಚಂದ್ರನ್ ಪುತ್ರ ವಿಕ್ರಮ್ ರವಿಚಂದ್ರನ್ ತ್ರಿವಿಕ್ರಮ ಚಿತ್ರದ ಮೂಲಕ ಸ್ಯಾಂಡಲ್ ವುಡ್ ನಲ್ಲಿ ಅದೃಷ್ಟ ಪರೀಕ್ಷೆಗೆ ಇಳಿಯಲಿದ್ದಾರೆ. ಚಿತ್ರತಂಡದ ಪ್ರಕಾರ ಎಲ್ಲವೂ ಅಂದುಕೊಂಡಂತೆ ಆಗಿದ್ದರೆ, ಈ ಚಿತ್ರ ವಿ. ರವಿಚಂದ್ರನ್ ಜನ್ಮದಿನದಂದು (ಮೇ 30) ತೆರೆ ಕಾಣಬೇಕಿತ್ತು. ಆದರೆ ಇದೀಗ ದೇಶಾದ್ಯಂತ ಕೋವಿಡ್ 19 ಹಾವಳಿ ಇರುವ ಕಾರಣ ಸದ್ಯದ ಮಟ್ಟಿಗಂತೂ ತ್ರಿವಿಕ್ರಮನ ಬಿಡುಗಡೆ ಅನಿಶ್ಚಿತವಾಗಿದೆ.
ಈಗಾಗಲೆ ಬೆಂಗಳೂರು, ದಾಂಡೇಲಿ, ರಾಜಸ್ಥಾನ, ಬ್ಯಾಂಕಾಕ್ ಮೊದಲಾದ ಕಡೆಗಳಲ್ಲಿ ಚಿತ್ರೀಕರಣ ನಡೆಸಿರುವ ತ್ರಿವಿಕ್ರಮ ತಂಡ ಎರಡು ಹಾಡುಗಳ ಚಿತ್ರೀಕರಣವನ್ನಷ್ಟೇ ಬಾಕಿ ಉಳಿಸಿಕೊಂಡಿದೆ. ಈ ಹಾಡಿನ ದೃಶ್ಯಗಳನ್ನು ಆಸ್ಟ್ರೇಲಿಯಾದಲ್ಲಿ ಶೂಟಿಂಗ್ ನಡೆಸಲು ಚಿತ್ರತಂಡ ತೀರ್ಮಾನಿಸಿತ್ತು. ಆದರೆ ಕೋವಿಡ್ 19 ಲಾಕ್ ಡೌನ್ ಮುಗಿಯುವವರೆಗೆ ಕಾದು ಬಳಿಕ ಎರಡು ಹಾಡಿನ ಚಿತ್ರೀಕರಣ ನಡೆಸಲು ಚಿತ್ರತಂಡ ತೀರ್ಮಾನಿಸಿದೆ ಎನ್ನಲಾಗಿದೆ.
ಈ ಬಗ್ಗೆ ಮಾತನಾಡುವ ಚಿತ್ರತಂಡ, ಮೊದಲೇ ಅಂದುಕೊಂಡಂತೆ, ಏಪ್ರಿಲ್ 14 ನಾವು ಆಸ್ಟ್ರೇಲಿಯಾದಲ್ಲಿ ಶೂಟಿಂಗ್ನ ಕೊನೆಯ ಹಂತ ತಲುಪಬೇಕಿತ್ತು. ಆದರೆ ಇದೀಗ ಅದು ಸಾಧ್ಯವಿಲ್ಲ. ನಾವು ಈಗ ಆಸ್ಟ್ರೇಲಿಯಾ ಬದಲಾಗಿ ಬೇರೆ ಸ್ಥಳದಲ್ಲಿ ಶುಟಿಂಗ್ ನಡೆಸುವುದು ಸಹ ಸಾಧ್ಯವಿಲ್ಲ ಎಂಬ ಸ್ಥಿತಿಯಲ್ಲಿದ್ದೇವೆ. ಏಕೆಂದರೆ ಪ್ರೊಡಕ್ಷನ್ ಹೌಸ್ ಈಗಾಗಲೇ ಸಂಬಂಧಪಟ್ಟ ಅಧಿಕಾರಿಗಳಿಗೆ ಮುಂಗಡ ಮೊತ್ತವನ್ನು ಪಾವತಿಸಿದೆ. ಆದ್ದರಿಂದ ಬೇರೆ ಸ್ಥಳದ ಬಗೆಗೆ ಯೋಚಿಸಲು ಸಾಧ್ಯವಾಗುವುದಿಲ್ಲ ಎಂದಿದೆ.
ಕೋವಿಡ್ 19 ವೈರಸ್ ಹಾವಳಿಯು ಅಲ್ಲಿ ಶೂಟಿಂಗ್ ಗೆ ಅನುಮತಿ ಸಿಕ್ಕ ಬಳಿಕ ಬಿಗಡಾಯಿಸಿದ್ದು ನಾವು ಸಾಕಷ್ಟು ಕಾರ್ಯವಿಧಾನಗಳನ್ನು ಅನುಸರಿಸಬೇಕಾಗಿದೆ. ಮೊದಲಿಗಿಂತ ಭಿನ್ನ ಸನ್ನಿವೇಶವಿದ್ದು ನಾವೀಗ ಇನ್ನಷ್ಟು ಕಠಿಣ ಪರಿಸ್ಥಿತಿಯಲ್ಲಿದ್ದೇವೆ. ಪ್ರೊಡಕ್ಷನ್ ಹೌಸ್, ನಟರು ಮತ್ತು ಇತರರು ಲಾಕ್ಡೌನ್ ಮುಗಿಯುವುದನ್ನು ಕಾಯುತ್ತಿದ್ದಾರೆ.ಮುಂದಿನ ಕ್ರಮವನ್ನು ನಾವು ಚರ್ಚಿಸಿ ತೀರ್ಮಾನಿಸುತ್ತೇವೆ ಎನ್ನುತ್ತಾರೆ ನಿರ್ದೇಶಕರು. ಗೌರಿ ಎಂಟರ್ಟೆ„ನರ್ಸ್ ಬ್ಯಾನರ್ ಅಡಿಯಲ್ಲಿ ಸೊಮ್ಮಣ್ಣ ಮತ್ತು ಸುರೇಶ್ ನಿರ್ಮಿಸುತ್ತಿರುವ ತ್ರಿವಿಕ್ರಮ ಚಿತ್ರದಲ್ಲಿ ಆಕಾಂಕ್ಷಾ ಶರ್ಮಾ ನಾಯಕಿಯಾಗಿ ಅಭಿನಯಿಸುತ್ತಿದ್ದಾರೆ. ಉಳಿದಂತೆ ರೋಹಿತ್ ರಾಯ್, ಅಕ್ಷರ ಗೌಡ, ಚಿಕ್ಕಣ್ಣ, ಸಾಧು ಕೋಕಿಲಾ, ಸುಚೇಂದ್ರ ಪ್ರಸಾದ್, ತುಳಸಿ ಶಿವಮಣಿ, ಆದಿ ಲೋಕೇಶ್, ತೆಲುಗು ನಟ ಜಯಪ್ರಕಾಶ್ ಮೊದಲಾದವರು ಪ್ರಮುಖ ಪಾತ್ರಗಳಲ್ಲಿ ಅಭಿನಯಿಸುತ್ತಿದ್ದಾರೆ. ಚಿತ್ರಕ್ಕೆ ಅರ್ಜುನ್ ಜನ್ಯಾ ಸಂಗೀತ ಸಂಯೋಜಿಸುತ್ತಿದ್ದಾರೆ.