Advertisement

Arrested: ವಿಲ್ಲಾಗಳಿಗೆ ರಾತ್ರಿ ಕನ್ನ ಹಾಕುತ್ತಿದ್ದ ತ್ರಿಪುರ ಯುವಕ

11:12 AM Sep 24, 2024 | Team Udayavani |

ಬೆಂಗಳೂರು:  ರಾತ್ರಿ ವೇಳೆ ವಿಲ್ಲಾಗಳಿಗೆ ನುಗ್ಗಿ ಹೊಟ್ಟೆ ತುಂಬಾ ಊಟ ಮಾಡಿ, ಬಳಿಕ ಕಳವು ಮಾಡುತ್ತಿದ್ದ ತ್ರಿಪುರ ಮೂಲದ ಕಳ್ಳನನ್ನು ಕೊತ್ತನೂರು ಠಾಣೆ ಪೊಲೀಸರು ಬಂಧಿಸಿದ್ದಾರೆ.

Advertisement

ತ್ರಿಪುರಾ ಮೂಲದ ಅಮಿತ್‌ ದೇಬಾರಿಯಾ (22) ಬಂಧಿತ.

ಇತ್ತೀಚೆಗೆ ಕೆ.ನಾರಾಯಣಪುರದ ವಿಲ್ಲಾ ನಿವಾಸಿಯೊಬ್ಬರು ರಾತ್ರಿ ಮನೆ ಬಾಗಿಲು ಹಾಕಿದ್ದು, ಮಹಡಿಯ ಬಾಗಿಲು ಹಾಕುವುದನ್ನು ಮರೆತು ನಿದ್ದೆಗೆ ಜಾರಿದ್ದರು. ಅದಕ್ಕೂ ಮೊದಲು ತಮ್ಮ ವಾಚ್‌, ಮೊಬೈಲ್‌, ಪರ್ಸ್‌ ಅನ್ನು ಊಟದ ಟೇಬಲ್‌ ಮೇಲೆ ಇರಿಸಿ­ದ್ದರು. ಮರು ದಿನ ಬೆಳಗ್ಗೆ ಎಚ್ಚರಗೊಂಡು ಊಟದ ಟೇಬಲ್‌ ಬಳಿ ಬಂದಾಗ ಪರ್ಸ್‌, ವಾಚ್‌ ಕಳುವಾಗಿರುವುದು ಗೊತ್ತಾಗಿದೆ. ಈ ಸಂಬಂಧ ಆರೋಪಿಯನ್ನು ಬಂಧಿಸಲಾಗಿದೆ.

ಪ್ರಕರಣ ಸಂಬಂಧ ಘಟನಾ ಸ್ಥಳದ ಸಿಸಿ ಕ್ಯಾಮೆರಾ ದೃಶ್ಯಾವಳಿ ಪರಿಶೀಲನೆ ವೇಳೆ ಸಿಕ್ಕ ಸುಳಿವು ಹಾಗೂ ಬಾತ್ಮೀದಾರರು ನೀಡಿದ ಮಾಹಿತಿ ಮೇರೆಗೆ ಕೊತ್ತನೂರು ಸಮೀಪದ ಗುಬ್ಬಿ ಕ್ರಾಸ್‌ ಬಳಿ ಆರೋಪಿಯನ್ನು‌ ವಶಕ್ಕೆ ಪಡೆದಿದ್ದಾರೆ. ವಿಚಾರಣೆ ವೇಳೆ ಆರೋಪಿ ನಾರಾಯಣಪುರದ ವಿಲ್ಲಾದಲ್ಲಿ ಕಳ್ಳತನ ಮಾಡಿದ್ದು ತಾನೇ ಎಂದು ತಪ್ಪೊಪ್ಪಿಕೊಂಡಿದ್ದಾನೆ. ಜತೆಗೆ ನಗರದ ವಿವಿಧೆಡೆಯ ವಿಲ್ಲಾಗಳಲ್ಲಿ ಕಳವು ಮಾಡಿರುವ ಬಗ್ಗೆ ಬಾಯ್ಬಿಟ್ಟಿದ್ದಾನೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಕಳ್ಳತನಕ್ಕೆ ಮೊದಲು ಹೊಟ್ಟೆ ತುಂಬಾ ಊಟ: ಆರೋಪಿ ಅಮಿತ್‌ ರುಚಿಯಾದ ಊಟಕ್ಕಾಗಿ ವಿಲ್ಲಾಗಳಿಗೆ ರಾತ್ರಿ ವೇಳೆ ನುಗ್ಗುತ್ತಿದ್ದ. ಅಡುಗೆ ಮನೆಗೆ ತೆರಳಿ ಹೊಟ್ಟೆ ತುಂಬಾ ಊಟ ಮಾಡಿ ಬಳಿಕ ಕಳ್ಳತನ ಮಾಡುತ್ತಿದ್ದ. ಈತ ಆದಿವಾಸಿ ಸಮುದಾ­ಯಕ್ಕೆ ಸೇರಿರುವುದರಿಂದ ಸುಲಭವಾಗಿ ಮರ ಏರುವುದು, ಗೋಡೆ ಹತ್ತುವುದು ಕರಗತವಾಗಿದೆ. ಹೀಗಾಗಿ ವಿಲ್ಲಾಗಳನ್ನೇ ಟಾರ್ಗೆಟ್‌ ಮಾಡಿ ರಾತ್ರಿ ವೇಳೆ ನುಗ್ಗಿ ಕಳವು ಮಾಡಿ ಪರಾರಿಯಾಗುತ್ತಿದ್ದ. ಪೊಲೀಸರು ತನ್ನ ಪತ್ತೆ ಹಚ್ಚಬಹುದು ಎಂದು ತಲೆ ಬೋಳಿಸಿಕೊಂಡಿದ್ದಾನೆ ಎಂದು ಪೊಲೀಸರು ಮಾಹಿತಿ ನೀಡಿದರು.

Advertisement

ಟ್ಯಾಂಕರ್‌ಗಳಿಗೆ ನೀರು ತುಂಬುವ ಕೆಲಸ: ತ್ರಿಪುರಾ ಮೂಲದ ಆರೋಪಿ ಅಮಿತ್‌ ಆದಿವಾಸಿ ಸಮುದಾಯಕ್ಕೆ ಸೇರಿದ್ದಾನೆ. 7 ವರ್ಷದ ಹಿಂದೆ ನಗರಕ್ಕೆ ಬಂದು ಸಣ್ಣಪುಟ್ಟ ಕೆಲಸ ಮಾಡಿಕೊಂಡಿದ್ದ. ಇತ್ತೀಚೆಗೆ ಕೊತ್ತನೂರಿನಲ್ಲಿ ನೀರಿನ ಟ್ಯಾಂಕರ್‌ನಲ್ಲಿ ನೀರು ತುಂಬಿಸುವ ಕೆಲಸ ಮಾಡುತ್ತಿದ್ದ. ಈತನಿಗೆ ಯಾವುದೇ ಮನೆ ಇಲ್ಲ. ನಿರ್ಮಾಣ ಹಂತದ ಕಟ್ಟಡಗಳಲ್ಲಿ ರಾತ್ರಿ ವೇಳೆ ತಂಗುತ್ತಿದ್ದ ಎಂಬುದು ವಿಚಾರಣೆಯಿಂದ ತಿಳಿದು ಬಂದಿದೆ.

ನಿರ್ಮಾಣ ಹಂತದ  ಕಟ್ಟಡಗಳಲ್ಲಿ ಕಳ್ಳ ಮಾಲು!:

ಆರೋಪಿ ಅಮಿತ್‌ನ ವಿಚಾರಣೆ ವೇಳೆ ನೀಡಿದ ಮಾಹಿತಿ ಮೇರೆಗೆ ಹನುಮಂತನಗರದ ಬಿಳಿಶಿವಾಲೆಯ ಗ್ರಾಮದ ನಿರ್ಮಾಣ ಹಂತದ ಕಟ್ಟದಲ್ಲಿ ಇರಿಸಿದ್ದ 31 ವಾಚ್‌ಗಳು  ಹಾಗೂ 4 ಮೊಬೈಲ್‌ ಜಪ್ತಿ ಮಾಡಲಾಗಿದೆ. ಹೆಣ್ಣೂರು-ಬಾಗಲೂರು ಮುಖ್ಯರಸ್ತೆಯ ನಿರ್ಮಾಣ ಹಂತದ ಕಟ್ಟಡದಲ್ಲಿ ಬಚ್ಚಿಟ್ಟಿದ್ದ 125 ಗ್ರಾಂ ಚಿನ್ನಾಭರಣ, 1 ವಾಚ್‌ ಹಾಗೂ 2 ಸಾವಿರ ಅಮೆರಿಕನ್‌ ಡಾಲರ್‌ ಜಪ್ತಿ ಮಾಡಲಾಗಿದೆ. ಅಂತೆಯೇ ಆಟೋ ಚಾಲಕನಿಗೆ ಮಾರಾಟ ಮಾಡಿದ್ದ 45 ಗ್ರಾಂ ಚಿನ್ನಾಭರಣ ವಶಕ್ಕೆ ಪಡೆಯಲಾಗಿದೆ. ಆರೋಪಿಯ ಬಂಧನದಿಂದ ಕೊತ್ತನೂರು, ಯಲಹಂಕ, ಚಿಕ್ಕಜಾಲ, ಬಾಗಲೂರು ಸೇರಿ ಒಟ್ಟು 9 ಮನೆಗಳವು ಪ್ರಕರಣಗಳು ಪತ್ತೆಯಾಗಿವೆ.

Advertisement

Udayavani is now on Telegram. Click here to join our channel and stay updated with the latest news.

Next