Advertisement

ತ್ರಿಪುರ ಸುಂದರಿ ವೈಮಾಳಿಗೆ ಉತ್ಸವ ವೈಯ್ಯಾರ

09:12 PM Jan 14, 2020 | Lakshmi GovindaRaj |

ಮೂಗೂರು: ಮೂಗೂರು ತ್ರಿಪುರ ಸುಂದರಿ ಅಮ್ಮನವರ ಜಾತ್ರಾ ಮಹೋತ್ಸವದ ಅಂಗವಾಗಿ ಕಡೆಯ ದಿನವಾದ ಮಂಗಳವಾರ ವೈಮಾಳಿಗೆ ಉತ್ಸವ ಧಾರ್ಮಿಕ ವಿಧಿವಿಧಾನದೊಂದಿಗೆ ನೆರವೇರಿತು.

Advertisement

ವೈಮಾಳಿಗೆ ಉತ್ಸವದ ಅಂಗವಾಗಿ ಬೆಳಗ್ಗೆ 10 ಗಂಟೆಗೆ ವಿವಿಧ ಹೂಗಳಿಂದ ಸಿಂಗಾರಗೊಂಡಿದ್ದ ಆಳು ನರ್ತಕಿಯರ ಹೂವಿನ ಪಲ್ಲಕ್ಕಿಯಲ್ಲಿ ಅಮ್ಮನವರ ಉತ್ಸವಮೂರ್ತಿಯನ್ನು ಪ್ರತಿಷ್ಠಾಪಿಸಿ, ಮಂಗಳವಾದ್ಯ ಹಾಗೂ ಗೊರವರ ಕುಣಿತದೊಂದಿಗೆ ಗ್ರಾಮದ ಪ್ರಮುಖ ಬೀದಿಗಳಲ್ಲಿ ಅದ್ಧೂರಿಯಾಗಿ ಮೆರವಣಿಗೆ ನಡೆಸಲಾಯಿತು.

ದೇವಾಲಯದ ಒಳಾಂಗಣವನ್ನು ಪ್ರವೇಶಿಸಿದ ಅಮ್ಮನವರ ಉತ್ಸವಮೂರ್ತಿಯನ್ನು ಮಧ್ಯಾಹ್ನದ ನಂತರ ಅಲಂಕೃತ ಹೂವಿನ ಆಳು ಪಲ್ಲಕ್ಕಿಯಲ್ಲಿ ಪ್ರತಿಷ್ಠಾಪಿಸಿ, ದೇವಾಲಯದ ಮೇಲ್ಭಾಗದಲ್ಲಿ 5 ಸುತ್ತು ಹಾಗೂ ದೇವಾಲಯ ಪ್ರಾಂಗಣದಲ್ಲಿ 7 ಸುತ್ತು ಪ್ರದಕ್ಷಿಣೆ ಹಾಕಿಸಿ ದೇವಾಲಯದ ದಕ್ಷಿಣ ದ್ವಾರದ ಮೂಲಕ ಒಳ ಪ್ರವೇಶಿಸಲಾಯಿತು.

ಈ ವೇಳೆ ದೇವಾಲಯದಲ್ಲಿ ಹಾಜರಿದ್ದ ಮಹಿಳೆಯರು ತಮ್ಮ ಕುಟುಂಬದ ಶ್ರೇಯಸ್ಸು ಹಾಗೂ ದೀರ್ಘ‌ ಸುಮಂಗಲಿಯಾಗಿರಲೆಂದು ಪ್ರಾರ್ಥಿಸಿ ಅಮ್ಮನವರಿಗೆ ಹಣ್ಣು, ಹೂ, ನಗದನ್ನು ಉತ್ಸವ ಮೂರ್ತಿಗೆ ಅರ್ಪಿಸಿದರು. ಇಷ್ಟಾರ್ಥ ಸಿದ್ಧಿಗಾಗಿ ಭಕ್ತರು ಅಮ್ಮನವರಿಗೆ ಜೈಕಾರ ಹಾಕಿ ಈಡುಗಾಯಿ ಅರ್ಪಿಸಿದರು. ಈ ದೃಶ್ಯವನ್ನು ನೆರೆದಿದ್ದ ಭಕ್ತರ ಸಮೂಹ ತಮ್ಮ ಮೊಬೈಲ್‌ಗ‌ಳಲ್ಲಿ ಸೆಲ್ಪಿ ತೆಗೆಯಲು ಮುಗಿಬಿದ್ದರು.

ರಾತ್ರಿ 11 ಗಂಟೆ ವೇಳೆಗೆ ದೇವಾಲಯವನ್ನು ಸ್ವಚ್ಛಗೊಳಿಸಿ ಅಭಿಷೇಕ, ವಿಶೇಷ ಪೂಜೆ ಸಲ್ಲಿಸಿ ಮಹಾಮಂಗಳಾರತಿ ಮಾಡುವ ಮೂಲಕ‌ ಈ ಬಾರಿ ಜಾತ್ರಾ ಮಹೋತ್ಸವಕ್ಕೆ ತೆರೆ ಬಿದ್ದಿತ್ತು. ಪ್ರತಿ ವರ್ಷದಂತೆ ಈ ಬಾರಿಯೂ ಕೂಡ ಮಾಜಿ ಸಚಿವರು ಹಾಗೂ ಮೇಲಕೋಟೆ ಕ್ಷೇತ್ರದ ಶಾಸಕರಾದ ಸಿ.ಎಸ್‌.ಪುಟ್ಟರಾಜು ಕುಟುಂಬ ವರ್ಗ ಅಮ್ಮನವರ ದರ್ಶನ ಪಡೆದು ಪೂಜೆ ಸಲ್ಲಿಸಿದರು.

Advertisement

5 ದಿನಗಳ ಕಾಲ ಜಾತ್ರಾ ಮಹೋತ್ಸವದಲ್ಲಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮವನ್ನು ಆಯೋಜಿಸಿದ್ದ ಸಚಿವರಿಗೆ ಗ್ರಾಮಸ್ಥರು ಅಭಿನಂದನೆ ಸಲ್ಲಿಸಿದರು. ಗ್ರಾಮದ ಬಂಡಿ ಬೀದಿ ನಿವಾಸಿ ಸುಕಂದಮ್ಮ ಬಸವಣ್ಣರವರ ಕುಟುಂಬದವರು ಪ್ರತಿ ವರ್ಷದಂತೆ ನರ್ತಕಿ ಪಲ್ಲಕಿ ಉತ್ಸವದ ಉಸ್ತುವಾರಿ ವಹಿಸಿ ನಿರಂತರ ಸೇವಾರ್ಥದಾರರಾಗಿ ನೆರವೇರಿಸಿದರು.

ದೇವಿ ವೀಕ್ಷಣೆಗೆ ನೂಕು ನುಗ್ಗಲು: ಮೂಗೂರು ತ್ರಿಪುರ ಸುಂದರಿ ದೇವಿ ಜಾತ್ರಾ ಮಹೋತ್ಸವದ ಕೊನೆಯ ದಿನವಾದ ಮಂಗಳವಾರ ವೈಮಾಳಿಗ ಉತ್ಸವ ಅಂಗವಾಗಿ ಅಮ್ಮನವರ ದರ್ಶನ ಪಡೆಯಲು ಗ್ರಾಮದ ಸುತ್ತಮುತ್ತಲಿನ ಹಳ್ಳಿಗಳ ಜನರು ತಂಡೋಪ ತಂಡವಾಗಿ ದೇವಾಲಯದ ಒಳಪ್ರವೇಶಿಸುವಾಗ ನೂಕು ನುಗ್ಗಲು ಉಂಟಾಯಿತು. ಮಹಿಳೆಯರು ಮಕ್ಕಳು ಸೇರಿದಂತೆ ವೃದ್ಧರು ಪ್ರಯಾಸ ಪಡುವಂತಾಯಿತು. ಈ ವೇಳೆ ಪೋಲಿಸರ ಹಿಡಿತಕ್ಕೆ ಸಿಗದೆ ಬಹಳ ಜನಜಂಗುಳಿ ಉಂಟಾಯಿತು. ದೇವಿ ವೀಕ್ಷಣೆಗೆ ಭಾರೀ ಜನಸ್ತೋಮ ನೆರೆದಿತ್ತು.

Advertisement

Udayavani is now on Telegram. Click here to join our channel and stay updated with the latest news.

Next