ಮೂಗೂರು (ತಿ.ನರಸೀಪುರ): ಶ್ರೀ ತ್ರಿಪುರ ಸುಂದರಿ ಅಮ್ಮನವರ ಜಾತ್ರಾ ಮಹೋತ್ಸವದ ನಾಲ್ಕನೇ ದಿನವಾದ ಗುರುವಾರ ಮೂಗೂರು ಸಮೀಪದ ಹೊಸಹಳ್ಳಿ ಗ್ರಾಮದ ಮೂಲ ದೇವಸ್ಥಾನದಲ್ಲಿ ಚಿಗುರು ಕೊಯ್ಯವ ಕಾರ್ಯಕ್ರಮ ಸಹಸ್ರಾರು ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ ಜರುಗಿದ್ದು, ಮೂಗೂರು ಚಿಗುರು ನೋಡಲು ಭಕ್ತರು ಮುಗಿಬಿದ್ದರು.
ಹರಕೆ ಹೊತ್ತ ಮಹಿಳಾ ಭಕ್ತರು ಬೆಳಗ್ಗೆಯಿಂದಲೇ ದೇವಾಲಯದಲ್ಲಿ ಜಮಾವಣೆಗೊಂಡು ಬಾಯಿಬೀಗ, ಪಂಜಿನ ಸೇವೆ, ದಿವಟ್ಟಿಗೆ ಸೇವೆ ನೆರವೇರಿಸಿದರೇ ಕೆಲ ಭಕ್ತಾದಿಗಳು ರಾಸುಗಳ ಸಿಂಗರಿಸಿ ಕೊಂಬಿಗೆ ಪಂಜನ್ನು ಕಟ್ಟಿ ದೇವಾಲಯದಿಂದ ಗ್ರಾಮದ ದೊಡ್ಡ ಕೆರೆಯವರೆಗೆ ನಡೆದು ದೇವಿಗೆ ಪೂಜೆ ಸಲ್ಲಿಸುವ ಮುಖಾಂತರ ರಾಸುಗಳಿಗೆ ರೋಗದಿಂದ ಮುಕ್ತಿ ಸಿಗಲೆಂದು ಪ್ರಾರ್ಥಿಸಿದರು.
ಜಾತ್ರಾ ವಿಶೇಷವಾಗಿ ರಾಜ್ಯದ ನಾನಾ ಭಾಗಗಳಿಂದ ಆಗಮಿಸಿದ್ದ ರೈತರು ತಾವು ಸಾಕಿದ ಗೌಜಲಹಕ್ಕಿಗಳನ್ನು ಹೊಸಹಳ್ಳಿ ಗ್ರಾಮದಲ್ಲಿ ಕಾಳಗ ನಡೆಸಿ ಪಂದ್ಯ ಕಟ್ಟಿ ಗೆದ್ದಂತಹ ಹಕ್ಕಿಗಳನ್ನು ಮಾರಾಟ ಮಾಡಿದರು.
ಮಧ್ಯಾಹ್ನ 3 ಗಂಟೆ ವೇಳೆಗೆ ವಿಶಿಷ್ಟ ಆಭರಣಗಳಿಂದ ಅಲಂಕೃತಗೊಂಡ ಶ್ರೀ ತ್ರಿಪುರ ಸುಂದರಿ ಅಮ್ಮನವರ ಉತ್ಸವ ಮೂರ್ತಿಯನ್ನು ಅಲಂಕೃತ ಹೂವಿನ ಪಲ್ಲಕ್ಕಿ ಕೂರಿಸಿ ವಿಶೇಷ ಪೂಜೆ ಸಲ್ಲಿಸಿದ ನಂತರದಲ್ಲಿ ದೇವಾಲಯದ ಸುತ್ತ ಪ್ರದಕ್ಷಿಣೆ ಹಾಕಿಸಿ ಹೆಬ್ಬರ ಮೇಳದೊಂದಿಗೆ ಹೊಸಹಳ್ಳಿ ಗ್ರಾಮದ ಮೂಲಸ್ಥಾನಕ್ಕೆ ಕೊಂಡೊಯ್ಯಲಾಯಿತು.
ಆ ನಂತರ ಭಕ್ತರ ಜೈಕಾರದ ಘೋಷಣೆಯೊಂದಿಗೆ ಸಂಜೆ 6 ಗಂಟೆ ವೇಳೆಗೆ ಅರ್ಚಕರು ನೇರಳೆ ಮರವನ್ನು ಏರಿ ಮರದಲ್ಲಿ ಮೂಡಿದ್ದ 12 ಚಿಗುರನ್ನು ಕೊಯ್ದು ಭಕ್ತರಿಗೆ ಪ್ರದರ್ಶಿಸಿದರು. 12 ಚಿಗುರು ಮೂಡಿರುವುದನ್ನು ಕಣ್ತುಂಬಿಕೊಂಡ ಭಕ್ತರು ಮನದಲ್ಲೇ ದೇವಿಗೆ ನಮಿಸಿ, ಇಷ್ಟಾರ್ಥ ಸಿದ್ಧಿಗಾಗಿ ಪ್ರಾರ್ಥಿಸಿದರು. ಬೆಳ್ಳಿ ತಟ್ಟೆಯಲ್ಲಿ ಚಿಗುರನ್ನು ಇಟ್ಟು ಪೂಜೆ ಸಲ್ಲಿಸಿ ಉತ್ಸವ ಮೂರ್ತಿಯೊಂದಿಗೆ ಮೂಗೂರು ಗ್ರಾಮದ ದೇವಾಲಯಕ್ಕೆ ತರಲಾಯಿತು.