ಮೈಸೂರು: ತಿ.ನರಸೀಪುರ ತಾಲೂಕು ಮೂಗೂರು ಗ್ರಾಮದ ತ್ರಿಪುರ ಸುಂದರಿ ದೇವಿ ಜಾತ್ರಾ ಮಹೋತ್ಸವ ಕಾರ್ಯಕ್ರಮ ವ್ಯವಸ್ಥಿತವಾಗಿ ನಡೆಯುವಂತೆ ಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳಲು ಪ್ರವಾಸೋದ್ಯಮ ಸಚಿವ ಸಾ.ರಾ. ಮಹೇಶ್ ಹಾಗೂ ಸಣ್ಣ ನೀರಾವರಿ ಸಚಿವ ಸಿ.ಎಸ್.ಪುಟ್ಟರಾಜು ಸೂಚಿಸಿದರು.
ಜಾತ್ರಾ ಮಹೋತ್ಸವ ಸಿದ್ಧತೆ ಕುರಿತು ಸೋಮವಾರ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಸಭೆ ನಡೆಸಿದ ಸಚಿವರು, ಜಾತ್ರಾ ಮಹೋತ್ಸವ ಜ.10 ರಿಂದ ಆರಂಭವಾಗಿದ್ದು, ಜ.21 ರಿಂದ 25 ರವರೆಗೆ ಹೆಚ್ಚಿನ ಭಕ್ತಾದಿಗಳು ಸೇರುತ್ತಾರೆ. ಈ ಐದು ದಿನಗಳು ಹೆಚ್ಚಿನ ಗಮನ ವಹಿಸಬೇಕು ಎಂದು ತಿಳಿಸಿದರು.
ಜಾತ್ರೆ ಸಂದರ್ಭದಲ್ಲಿ ರಕ್ಷಣೆ, ಮೂಲಸೌಲಭ್ಯ, ಸಾರಿಗೆ ವ್ಯವಸ್ಥೆ, ಧಾರ್ಮಿಕ ಪೂಜಾ ಕೈಂಕರ್ಯಗಳು ಹಾಗೂ ದೇವಾಲಯದ ದುರಸ್ತಿ ಕಾರ್ಯಗಳನ್ನು ಪುರಾತತ್ವ ಇಲಾಖೆ ಹಾಗೂ ಪ್ರವಾಸೋದ್ಯಮ ಇಲಾಖೆ ವತಿಯಿಂದ ಮಾಡಲಾಗುತ್ತಿದೆ. ದೇವಸ್ಥಾನಕ್ಕೆ ಕಾಯಕಲ್ಪ ನೀಡಲು 15 ಕೋಟಿ ರೂ.ಗಳನ್ನು ಪುರಾತತ್ವ ಇಲಾಖೆಯಿಂದ ಒದಗಿಸಲಾಗುವುದು. ಈಗಾಗಲೇ 8.5ಕೋಟಿ ರೂ. ಬಿಡುಗಡೆ ಮಾಡಲಾಗಿದೆ ಎಂದು ಸಚಿವ ಸಾ.ರಾ.ಮಹೇಶ್ ಹೇಳಿದರು.
ಸಚಿವ ಸಿ.ಎಸ್.ಪುಟ್ಟರಾಜು ಮಾತನಾಡಿ, ದೇವಸ್ಥಾನಕ್ಕೆ ಉತ್ತಮ ಆದಾಯವಿದೆ. ಈ ಹಣವನ್ನು ಪೂಜಾ ಕಾರ್ಯಗಳಿಗೆ ಬಳಸಿ, ದೇವಸ್ಥಾನದ ಖಾತೆಯಲ್ಲೇ ಉಳಿಸಿಕೊಳ್ಳಿ. ದೇವಸ್ಥಾನದ ಸುತ್ತಮುತ್ತ ಅಭಿವೃದ್ಧಿ ಕಾಮಗಾರಿಗೆ ಸರ್ಕಾರದಿಂದ ಅನುದಾನ ಒದಗಿಸಲು ಕ್ರಮವಹಿಸಲಾಗುತ್ತದೆ ಎಂದರು. ಈಗಿರುವ ರಥ ಶಿಥಿಲವಾಗಿದೆ. ಹಾಗಾಗಿ ಜಾತ್ರೆಗೂ ಮುನ್ನ ದುರಸ್ತಿ ಕೆಲಸ ಆಗುವಂತೆ ನೋಡಿಕೊಳ್ಳಬೇಕಾಗಿದೆ. ಭದ್ರತೆಗೆ ಸಿಸಿಟಿವಿ ಅಳವಡಿಸಬೇಕು ಎಂದು ಸಚಿವರು ಹೇಳಿದರು.
ಜಾತ್ರಾ ಸಂದರ್ಭದಲ್ಲಿ ಕುಡಿಯುವ ನೀರು, ಚರಂಡಿ ಸ್ವತ್ಛತೆ, ನೈರ್ಮಲ್ಯ ಕಾಪಾಡುವುದು, ತಾತ್ಕಾಲಿಕ ಶೌಚಾಲಯ ನಿರ್ಮಾಣ, ಕಲ್ಯಾಣಿ ಸ್ವತ್ಛತೆ, ಮುಡಿಕಟ್ಟೆ ನಿರ್ಮಾಣ, ದೇವಸ್ಥಾನಕ್ಕೆ ಸುಣ್ಣ ಬಳಿಯುವುದು, ಭಕ್ತಾದಿಗಳು ಬಟ್ಟೆ ಬದಲಾಯಿಸಲು ವ್ಯವಸ್ಥೆ ಮುಂತಾದ ವಿಷಯಗಳ ಬಗ್ಗೆ ಸಭೆಯಲ್ಲಿ ಚರ್ಚಿಸಲಾಯಿತು.
ಜ.21 ರಿಂದ 25ರ ವರೆಗೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸುವಂತೆ ಸಭೆಯಲ್ಲಿ ತಿಳಿಸಲಾಯಿತು. ಶಾಸಕ ಅಶ್ವಿನ್ ಕುಮಾರ್, ವಿಧಾನ ಪರಿಷತ್ ಸದಸ್ಯಮರಿತಿಬ್ಬೇಗೌಡ, ಜಿಲ್ಲಾಧಿಕಾರಿ ಅಭಿರಾಮ್ ಜಿ.ಶಂಕರ್, ಪುರಾತತ್ವ ಇಲಾಖೆ ಆಯುಕ್ತ ಟಿ.ವೆಂಕಟೇಶ್, ಹೆಚ್ಚುವರಿ ಪೊಲೀಸ್ ಅಧೀಕ್ಷಕಿ ಪಿ.ವಿ.ಸ್ನೇಹಾ, ತಹಶೀಲ್ದಾರ್ ಪರಮೇಶ್, ತಾಪಂ ಇಒ ನಂಜೇಶ್ ಮತ್ತಿತರರು ಸಭೆಯಲ್ಲಿ ಹಾಜರಿದ್ದರು.