Advertisement

ತ್ರಿವಳಿ ತಲಾಖ್‌: ಕಾಂಗ್ರೆಸ್‌ ನಿಲುವಿಗೆ ಒತ್ತಾಯ

08:42 AM Jun 23, 2019 | Lakshmi GovindaRaj |

ಹುಬ್ಬಳ್ಳಿ: ತ್ರಿವಳಿ ತಲಾಖ್‌ ಮಸೂದೆಯ ಪರಿಚಯ ಹಂತದಲ್ಲೇ ಕಾಂಗ್ರೆಸ್‌ ಸೇರಿ ಕೆಲ ಪಕ್ಷದ ನಾಯಕರು ವಿರೋಧ ವ್ಯಕ್ತಪಡಿಸಿದ್ದಾರೆ. ಮಹಿಳಾ ಸಬಲೀಕರಣ ಬಗ್ಗೆ ಮಾತನಾಡುವ ಕಾಂಗ್ರೆಸ್‌ ನಾಯಕರು ತ್ರಿವಳಿ ತಲಾಖ್‌ ಬಗೆಗಿನ ತಮ್ಮ ನಿಲುವು ಸ್ಪಷ್ಟಪಡಿಸಬೇಕೆಂದು ಕೇಂದ್ರ ಸಂಸದೀಯ ವ್ಯವಹಾರ ಸಚಿವ ಪ್ರಹ್ಲಾದ ಜೋಶಿ ಒತ್ತಾಯಿಸಿದರು.

Advertisement

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತ್ರಿವಳಿ ತಲಾಖ್‌ ಹಾಗೂ ಹಲಾಲ್‌ ನಾಗರಿಕ ಸಮಾಜಕ್ಕೆ ಯೋಗ್ಯವೇ ಎಂಬುದನ್ನು ಕಾಂಗ್ರೆಸ್‌ ಸ್ಪಷ್ಟಪಡಿಸಬೇಕು ಎಂದರು. ರಚನಾತ್ಮಕ ಚರ್ಚೆಗೆ ತಯಾರು ಎಂದು ಹೇಳುವ ಕಾಂಗ್ರೆಸ್‌ ನಾಯಕರು ಮಸೂದೆ ಪರಿಚಯ ಹಂತದಲ್ಲಿ ವಿರೋಧ ಮಾಡುತ್ತಾರೆ.

ಹೀಗೇಕೆ ಎಂದು ಕೇಳಿದರೆ ತಮ್ಮಷ್ಟಕ್ಕೆ ತಾವೇ ಗೊಂದಲದಲ್ಲಿದ್ದಾರೆ. ನಾಯಕರಿಲ್ಲದ ಕಾರಣ ಇನ್ನೂ ಗೊಂದಲದಲ್ಲಿ ಕಾಂಗ್ರೆಸ್‌ ಪಕ್ಷವಿದ್ದು, ದಿಕ್ಕು ತಪ್ಪಿದಂತಾಗಿ ದಿವಾಳಿತನ ಪ್ರದರ್ಶಿಸುತ್ತಿದೆ ಎಂದು ಲೇವಡಿ ಮಾಡಿದರು. ತ್ರಿವಳಿ ತಲಾಖ್‌ನಲ್ಲಿ ಯಾವುದೇ ಧರ್ಮ ಹಾಗೂ ಪೂಜಾ ವಿಧಾನವಿಲ್ಲ. ಹಿಂದೆ ಸುಪ್ರೀಂ ಕೋರ್ಟ್‌ ತೀರ್ಮಾನವಾಗಿದೆ ಎಂದು ಕಾಂಗ್ರೆಸ್‌ ನಾಯಕರು ಹೇಳುತ್ತಾರೆ.

ಕ್ರಮ ಕೈಗೊಳ್ಳುವ ಕಠಿಣ ಕಾನೂನುಗಳು ಇಲ್ಲದಿದ್ದರೆ ಸುಪ್ರೀಂ ಕೋರ್ಟ್‌ನ ತೀರ್ಪು ಕೂಡ ನಿರರ್ಥಕವಾಗುವ ಸಾಧ್ಯತೆಗಳಿವೆ. ಇವೆಲ್ಲವುಗಳ ಕುರಿತು ಚಿಂತನೆ ಮಾಡಿರುವ ಕೇಂದ್ರ ಸರಕಾರ ಮಸೂದೆ ಜಾರಿ ಮಾಡಲು ಸಿದ್ಧವಾಗಿದೆ. ಈ ವಿಚಾರದಲ್ಲಿ ಕಾಂಗ್ರೆಸ್‌ ನಾಯಕರು ದೇಶದ ಜನರನ್ನು ತಪ್ಪು ದಾರಿಗೆ ಎಳೆಯುವ ಪ್ರಯತ್ನ ಮಾಡಬಾರದು. ವಿರೋಧ ಪಕ್ಷದ ನಾಯಕರ ಸ್ಥಾನ ಆಯ್ಕೆ ಕುರಿತು ಕಾನೂನಿನಲ್ಲಿ ಏನಿದೆ ಆ ಪ್ರಕಾರ ಆಗುತ್ತದೆ ಎಂದು ತಿಳಿಸಿದರು.

ದೇಶದ ಚುನಾವಣೆ ಏಕಕಾಲಕ್ಕೆ ನಡೆಯಬೇಕು ಎಂಬುದು ಇದೀಗ ಕೇವಲ ಚರ್ಚೆಯಷ್ಟೇ. ನಾವು ಒತ್ತಾಯಪೂರ್ವಕವಾಗಿ ಹೇರುತ್ತಿಲ್ಲ. ಚುನಾವಣೆ ಖರ್ಚು ವೆಚ್ಚಗಳ ಬಗ್ಗೆ ವಿವಿಧ ಸಂಘ-ಸಂಸ್ಥೆಗಳು ಸಮೀಕ್ಷೆ ಮಾಡಿವೆ. ಒಂದೇ ದೇಶ-ಒಂದು ಚುನಾವಣೆ ವ್ಯವಸ್ಥೆ ಜಾರಿಗೆ ಬಂದರೆ ಸಾಕಷ್ಟು ಹಣ ಉಳಿಯಲಿದೆ. ಈ ವ್ಯವಸ್ಥೆಯನ್ನು ಈಗಲೇ ಜಾರಿಗೆ ಮಾಡುತ್ತೇವೆ ಎಂದು ಹೇಳಿಲ್ಲ. ಇದು ಬಿಜೆಪಿ ಅಥವಾ ಪ್ರಧಾನಿ ನರೇಂದ್ರ ಮೋದಿಯವರ ಅಜೆಂಡಾವಲ್ಲ.

Advertisement

ಈ ಕುರಿತು 40 ಪಕ್ಷಗಳ ಮುಂದೆ ಪ್ರಸ್ತಾಪ ಮಾಡಿದ್ದು, ಸುಮಾರು 21 ಪಕ್ಷಗಳು ನಾಲ್ಕು ಗಂಟೆಗಳ ಕಾಲ ಪ್ರಧಾನಿ ಜೊತೆ ಚರ್ಚೆ ಮಾಡಿವೆ. ಕೆಲ ಪಕ್ಷದ ನಾಯಕರು ಅನುಷ್ಠಾನ ಹೇಗೆ ಎಂಬ ಪ್ರಶ್ನೆ ಎತ್ತಿದ್ದರೆ ಕೆಲವರು ಇದನ್ನು ಸ್ವಾಗತಿಸಿದ್ದಾರೆ. ಹಳೆಯದನ್ನೇ ಎಷ್ಟು ವರ್ಷಗಳ ಕಾಲ ಮುಂದುವರಿಸಲು ಸಾಧ್ಯ. ಹೊಸತನ ಬಂದಾಗ ಚರ್ಚೆ ಮಾಡುವ ವ್ಯವಧಾನವನ್ನಾದರೂ ಕಾಂಗ್ರೆಸ್‌ ರೂಢಿಸಿಕೊಳ್ಳಬೇಕು. ಗಾಂಧಿ ಮನೆತದವರಲ್ಲಿರುವ ಅಹಂಕಾರವೇ ಕಾಂಗ್ರೆಸ್‌ ಈ ಸ್ಥಿತಿಗೆ ಬರಲು ಕಾರಣ ಎಂದು ಟಾಂಗ್‌ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next