ನವದೆಹಲಿ: ಟಿಎಂಸಿ ನಾಯಕಿ ಮತ್ತು ಮಾಜಿ ಸಂಸದೆ ಮಹುವಾ ಮೊಯಿತ್ರಾ ಅವರು ಇಂದು ಬೆಳಗ್ಗೆ 10 ಗಂಟೆಗೆ ನವದೆಹಲಿಯ 9 ಬಿ ಟೆಲಿಗ್ರಾಫ್ ಲೇನ್‌ನಲ್ಲಿರುವ ಸರ್ಕಾರಿ ಬಂಗಲೆಯನ್ನು ಸಂಪೂರ್ಣವಾಗಿ ಖಾಲಿ ಮಾಡಿದ್ದಾರೆ.
ನಿನ್ನೆ (ಗುರುವಾರ) ದೆಹಲಿ ಹೈಕೋರ್ಟ್ ಉಚ್ಚಾಟನೆ ಆದೇಶದ ವಿರುದ್ಧ ಸಲ್ಲಿಸಿದ್ದ ಅರ್ಜಿಯನ್ನು ತಿರಸ್ಕರಿಸಲಾಗಿತ್ತು. ಇದಾದ ಮರುದಿನವೇ ಬಂಗಲೆ ಖಾಲಿ ಮಾಡಲು ಎಸ್ಟೇಟ್ ನಿರ್ದೇಶನಾಲಯ ತಂಡವನ್ನು ಕಳುಹಿಸಲು ತಯಾರಿ ನಡೆಸಿತ್ತು ಆದರೆ ಅದಕ್ಕೂ ಮೊದಲೇ ಮಾಜಿ ಸಂಸದೆ ಬಂಗಲೆಯನ್ನು ಖಾಲಿ ಮಾಡಿದ್ದಾರೆ ಎಂದು ಮಹುವಾ ಪರ ವಕೀಲ ಶಾದನ್ ಫರಾಸತ್ ಮಾಹಿತಿ ನೀಡಿದ್ದಾರೆ.
ಸರ್ಕಾರಿ ಬಂಗಲೆಯನ್ನು ತೆರವು ಮಾಡುವ ಕ್ರಮಕ್ಕೆ ತಡೆಯಾಜ್ಞೆ ನೀಡುವಂತೆ ಒತ್ತಾಯಿಸಿ ಟಿಎಂಸಿ ನಾಯಕಿ ಮಹುವಾ ಮೊಯಿತ್ರಾ ಸಲ್ಲಿಸಿದ್ದ ಅರ್ಜಿಯನ್ನು ದೆಹಲಿ ಹೈಕೋರ್ಟ್ ಗುರುವಾರ ತಿರಸ್ಕರಿಸಿದೆ. ಇದಕ್ಕೂ ಮುನ್ನ ಬುಧವಾರ ಮೊಯಿತ್ರಾ ಅವರು ನವದೆಹಲಿಯಲ್ಲಿ ಸರ್ಕಾರ ಮಂಜೂರು ಮಾಡಿದ ನಿವಾಸವನ್ನು ಖಾಲಿ ಮಾಡುವಂತೆ ಹೊಸ ನೋಟಿಸ್ ಸ್ವೀಕರಿಸಿದ್ದರು.
ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯದ ಅಡಿಯಲ್ಲಿರುವ ಎಸ್ಟೇಟ್ ನಿರ್ದೇಶನಾಲಯವು ಮಹುವಾ ಮೊಯಿತ್ರಾ ಅವರಿಗೆ ತಲಾ ಮೂರು ನೋಟಿಸ್‌ಗಳನ್ನು ಕಳುಹಿಸಿದೆ. ಅವರ ಅಧಿಕೃತ ಬಂಗಲೆಯನ್ನು ಖಾಲಿ ಮಾಡುವಂತೆ ಕೇಳಲಾಯಿತು. ಅವರನ್ನು ಲೋಕಸಭೆಯಿಂದ ಉಚ್ಚಾಟಿಸಿದ ನಂತರ ಅವರಿಗೆ ಈ ನೋಟಿಸ್ ಕಳುಹಿಸಲಾಗಿದೆ. ನಗರಾಭಿವೃದ್ಧಿ ಸಚಿವಾಲಯವು ಈ ವರ್ಷದ ಜನವರಿ 11 ರಂದು ಮಹುವಾ ಅವರಿಗೆ ಎರಡನೇ ನೋಟಿಸ್ ನೀಡಿತ್ತು. ಈ ನಡುವೆ ಅರೋಗ್ಯ ಸಮಸ್ಯೆಯ ಕಾರಣ ಬಂಗಲೆಯನ್ನು ಖಾಲಿ ಮಾಡುವಂತೆ ನೀಡಿದ್ದ ನೊಟೀಸ್ ರದ್ದುಗೊಳಿಸುವಂತೆ ಕೋರಿ ದೆಹಲಿ ಹೈಕೋರ್ಟ್‌ಗೆ ಮೊರೆ ಹೋಗಿದ್ದರು. ಆದರೆ ನ್ಯಾಯಾಲಯ ಮೊಯಿತ್ರಾ ಅವರ ಮನವಿಯನ್ನು ತಿರಸ್ಕರಿಸಿತು.