ನವದೆಹಲಿ: ಲೋಕಸಭೆ ಭದ್ರತಾ ಲೋಪ ಪ್ರಕರಣದ ಕುರಿತು ರಾಜ್ಯಸಭೆಯಲ್ಲಿ ಚರ್ಚೆಗೆ ಪಟ್ಟು ಹಿಡಿದಿದ್ದ ಟಿಎಂಸಿ ಸಂಸದ ಡೆರೆಕ್ ಓಬ್ರಿಯಾನ್ ಅವರನ್ನು ಗುರುವಾರ ರಾಜ್ಯಸಭೆಯಿಂದ ಅಮಾನತು ಮಾಡಲಾಗಿದೆ.
ಸದನದ ಬಾವಿಗಿಳಿದು ಸದನದ ಭದ್ರತಾ ಲೋಪದ ಕುರಿತು ಪ್ರತಿಭಟಿಸಿ ಕಲಾಪಗಳಿಗೆ ಅಡ್ಡಿಪಡಿಸಿದ ಆರೋಪದ ಮೇಲೆ ಓ’ಬ್ರಿಯಾನ್ ಅವರನ್ನು ರಾಜ್ಯಸಭೆಯಿಂದ ಅಮಾನತುಗೊಳಿಸಿದೆ.
ಬುಧವಾರ ಮಧ್ಯಾಹ್ನ ಲೋಕಸಭೆಯಲ್ಲಿ ಭದ್ರತಾ ಲೋಪದ ನಂತರ, ಸಂಸತ್ತು ಗುರುವಾರ (ಡಿ. 14) ಮತ್ತೊಮ್ಮೆ ಪುನರಾರಂಭವಾಯಿತು.
ಗುರುವಾರ ರಾಜ್ಯಸಭೆ ಕಲಾಪ ಆರಂಭವಾದ ಒಂದು ಗಂಟೆಯ ನಂತರ, ಪ್ರತಿಪಕ್ಷ ಸಂಸದರು ಸಂಸತ್ತಿನ ಭದ್ರತಾ ಲೋಪದ ಕುರಿತು ಚರ್ಚೆಗೆ ಒತ್ತಾಯಿಸಿ ಸದನದ ಬಾವಿಗೆ ಇಳಿದು ಪ್ರತಿಭಟನೆಗೆ ಮುಂದಾಗಿದ್ದಾರೆ. ಪ್ರತಿಪಕ್ಷದ ಸಂಸದರು ಭದ್ರತಾ ಉಲ್ಲಂಘನೆಯ ಕುರಿತು ಚರ್ಚಿಸಲು ದಿನದ ವ್ಯವಹಾರವನ್ನು ಸ್ಥಗಿತಗೊಳಿಸುವಂತೆ ಕೋರಿ 28 ನೋಟಿಸ್‌ಗಳನ್ನು ಸಲ್ಲಿಸಿದರು. ಸಭಾಪತಿ ಜಗದೀಪ್ ಧಂಖರ್ ಅವರು ನೋಟಿಸ್‌ಗೆ ಅನುಮತಿ ನೀಡಲಿಲ್ಲ ಈ ವೇಳೆ ವಿರೋಧ ಪಕ್ಷದ ಸಂಸದರು ಸದನದ ಬಾವಿಗಿಳಿದು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಉತ್ತರಕ್ಕೆ ಆಗ್ರಹಿಸಿ ಘೋಷಣೆಗಳನ್ನು ಕೂಗಿದರು. ಸಂಸದರ ಅಶಿಸ್ತಿನ ವರ್ತನೆಯನ್ನು ಖಂಡಿಸಿದ ಧಂಖರ್, ಇದು ನಿಯಮಗಳನ್ನು ಉಲ್ಲಂಘಿಸಿದೆ ಎಂದು ಹೇಳಿದರು.
ಈ ಸಮಯದಲ್ಲಿ ತೃಣಮೂಲ ಕಾಂಗ್ರೆಸ್ ಸಂಸದ ಡೆರೆಕ್ ಒ’ಬ್ರೇನ್ ಅವರು ಕುರ್ಚಿಯ ಮುಂಭಾಗದ ಪ್ರದೇಶಕ್ಕೆ ತೆರಳಿ ತಮ್ಮ ಕೈ ಎತ್ತಿ ಘೋಷಣೆಗಳನ್ನು ಕೂಗಲು ಆರಂಭಿಸಿದ್ದಾರೆ. ಇದರಿಂದ ಕೆರಳಿದ ಧಂಖರ್ ಅವರು ಓ’ಬ್ರಿಯಾನ್ ಅವರನ್ನು ಹೆಸರಿಸಿ ಸದನದಿಂದ ಅಮಾನತುಗೊಳಿಸಿ ಸೂಚನೆ ನೀಡಿದ್ದಾರೆ. ಈ ಅಮಾನತು ಚಳಿಗಾಲದ ಅಧಿವೇಶನ ಮುಗಿಯುವವರೆಗೂ ಮುಂದುವರೆಯಲಿದೆ ಎನ್ನಲಾಗಿದೆ.
ಉಭಯ ಸದನಗಳಲ್ಲಿ ಪ್ರತಿಪಕ್ಷಗಳ ಸದಸ್ಯರು ಗದ್ದಲ ಸೃಷ್ಟಿಸುತ್ತಿದ್ದಂತೆ ಕಲಾಪವನ್ನು ಮಧ್ಯಾಹ್ನ 2 ಗಂಟೆಯವರೆಗೆ ಮುಂದೂಡಲಾಗಿದೆ.
ಇದನ್ನೂ ಓದಿ: Viral: ತಾನು ಕೂಡಿಟ್ಟ ಹಣದಿಂದ ಮನೆ ಕೆಲಸದಾಕೆಗೆ ಮೊಬೈಲ್ ಫೋನ್ ಉಡುಗೊರೆಯಾಗಿ ಕೊಟ್ಟ ಬಾಲಕ