Advertisement

ತ್ರಾಸಿ –ಹೊಸಪೇಟೆ: ಅನಿರೀಕ್ಷಿತ ಕಡಲ್ಕೊರೆತ

01:00 AM Mar 19, 2019 | Harsha Rao |

ಕುಂದಾಪುರ: ತ್ರಾಸಿ ಸಮೀಪದ ಹೊಸಪೇಟೆಯ ಸಮುದ್ರ ತೀರದಲ್ಲಿ ಕಳೆದ ಕೆಲ ದಿನಗಳಿಂದ ಅನಿರೀಕ್ಷಿತವಾಗಿ ಕಡಲ್ಕೊರೆತ ಉಂಟಾಗಿದ್ದು, ಇದರಿಂದ ಕಡಲ ತೀರದಲ್ಲಿ ವಾಸಿಸುವ ಜನರು ಆತಂಕಗೊಂಡಿದ್ದಾರೆ. 
ತ್ರಾಸಿ – ಮರವಂತೆ ಕಡಲ ತೀರದಲ್ಲಿ ನಡೆಯುತ್ತಿರುವ ಸುಸ್ಥಿರ ಕಡಲ ತೀರ ನಿರ್ವಹಣಾ ಕಾಮಗಾರಿಯಿಂದಾಗಿ ಈ ಕಡಲ್ಕೊರೆತ ಆಗಿರಬಹುದು ಎನ್ನುವ ಅಭಿಪ್ರಾಯವನ್ನು ಇಲ್ಲಿನ ಮೀನುಗಾರರು ವ್ಯಕ್ತಪಡಿಸಿದ್ದಾರೆ. 

Advertisement

ದೋಣಿ ನಿಲ್ಲಿಸಲು ತೊಂದರೆ
ಮಳೆಗಾಲದಲ್ಲಿ ಹೆಚ್ಚಾಗಿ ಇಲ್ಲಿ ಕಡಲ್ಕೊರೆತ ಸಂಭವಿಸು ವುದು ಸಾಮಾನ್ಯ. ಆದರೆ ವೈಶಾಖದಲ್ಲಿ ಇಂತಹ ಕಡಲ್ಕೊರೆತ ಯಾವತ್ತೂ ಆಗಿಲ್ಲ ಎನ್ನುವ ಮೀನುಗಾರರು, ಇದರಿಂದ ದಡದಲ್ಲಿ ದೋಣಿಗಳನ್ನು ನಿಲ್ಲಿಸಲು ಜಾಗದ ಸಮಸ್ಯೆಯಾಗುತ್ತಿದೆ ಎನ್ನುತ್ತಾರೆ. ಕಡಲ್ಕೊರೆತ ಹೆಚ್ಚಾಗಿ ನಿಲ್ಲಿಸಿರುವ ದೋಣಿಗಳು ಸಮುದ್ರ ಪಾಲಾಗುವ ಭೀತಿ ಇಲ್ಲಿನ ಮೀನುಗಾರರದ್ದು. ಹೊಸಪೇಟೆ ಭಾಗದಲ್ಲಿ ಸುಮಾರು 50ಕ್ಕೂ ಹೆಚ್ಚು ದೋಣಿಗಳಿವೆ. ಇಲ್ಲಿರುವ ಎಲ್ಲ ಮನೆಯವರು ಅಂದರೆ ಸುಮಾರು 200ಕ್ಕೂ ಹೆಚ್ಚು ಮಂದಿ ಮೀನುಗಾರರಿದ್ದಾರೆ. 

ಶಾಸಕರ ಭೇಟಿ
ಈ ಸಂಬಂಧ ರವಿವಾರ ಸಂಜೆ ಬೈಂದೂರು ಶಾಸಕ ಸುಕುಮಾರ್‌ ಶೆಟ್ಟಿ ತ್ರಾಸಿಯ ಹೊಸಪೇಟೆಗೆ ಭೇಟಿ ನೀಡಿ, ಅಲ್ಲಿನ ಮೀನುಗಾರರೊಂದಿಗೆ ಮಾತುಕತೆ ನಡೆಸಿದ್ದಾರೆ. 

ಡಿಸಿಗೂ ಮನವಿ
ಹೊಸಪೇಟೆಯ ಕಡಲ ತೀರದಲ್ಲಿ ಅಕಾಲಿಕ ಕಡಲ್ಕೊರೆತ ದಿಂದಾಗಿ ಆತಂಕ ಸೃಷ್ಟಿಯಾದ ಬಗ್ಗೆ ಜಿಲ್ಲಾಧಿಕಾರಿಯವರಿಗೂ ಈಗಾಗಲೇ ಇಲ್ಲಿನ ಮೀನುಗಾರರು ಮನವಿ ಸಲ್ಲಿಸಿದ್ದಾರೆ ಎಂದು ತಿಳಿದು ಬಂದಿದೆ.  

ಶಾಶ್ವತ ತಡೆಗೋಡೆಗೆ ಆಗ್ರಹ
ತ್ರಾಸಿಯಿಂದ ಆರಂಭವಾಗಿ ಹೊಸಪೇಟೆ, ಕಂಚು ಗೋಡಿನವರೆಗೆ ಮಳೆಗಾಲದಲ್ಲಿ ಸಾಮಾನ್ಯವಾಗಿ ಕಡಲ್ಕೊರೆತ ಸಂಭವಿಸುತ್ತದೆ. ಇಲ್ಲಿನ ಕಡಲ ತೀರದಲ್ಲಿ ಕಡಲ್ಕೊರೆತ ಸಂಭವಿಸಬಾರದು ಎನ್ನುವ ನೆಲೆಯಲ್ಲಿ ಬರೀ ಬೃಹತ್‌ ಗಾತ್ರದ ಕಲ್ಲುಗಳನ್ನು ಅಷ್ಟೇ ರಾಶಿ ಹಾಕಿದ್ದಾರೆ. ಇಲ್ಲಿ ಕಡಲ್ಕೊರೆತ ತಡೆಗೆ ಶಾಶ್ವತ ತಡೆಗೋಡೆ ನಿರ್ಮಾಣ ಮಾಡಬೇಕು ಎನ್ನುವ ಹಲವು ವರ್ಷಗಳ ಬೇಡಿಕೆ ಇನ್ನೂ ಈಡೇರಿಲ್ಲ. ಇದರಿಂದಲೇ ಈ ವೇಳೆಯಲ್ಲೂ ಕಡಲ್ಕೊರೆತ ಸಂಭವಿಸುತ್ತಿದೆ ಎನ್ನುವ ಮೀನುಗಾರರು, ಇನ್ನಾದರೂ ಶಾಶ್ವತ ಯೋಜನೆಯೊಂದನ್ನು ಜಾರಿಗೊಳಿಸಲಿ ಎಂದವರು ಆಗ್ರಹಿಸಿದ್ದಾರೆ. 

Advertisement
Advertisement

Udayavani is now on Telegram. Click here to join our channel and stay updated with the latest news.

Next