ರಾಯಚೂರು: ಜಿಲ್ಲಾದ್ಯಂತ 71ನೇ ಸ್ವಾತಂತ್ರ್ಯೋತ್ಸವವನ್ನು ಮಂಗಳವಾರ ಸಡಗರ ಸಂಭ್ರಮದಿಂದ ಆಚರಿಸಲಾಯಿತು. ಸರ್ಕಾರಿ ಕಚೇರಿಗಳು, ವಿವಿಧ ಪಕ್ಷಗಳ ಕಾರ್ಯಾಲಯ, ಸಂಘ ಸಂಸ್ಥೆಗಳು, ಶಾಲಾ ಕಾಲೇಜುಗಳು ಸೇರಿ ಹಲವೆಡೆ ಧ್ವಜಾರೋಹಣ ನೆರವೇರಿಸಿ ಭಾರತಾಂಬೆಗೆ ಗೌರವ ಸಲ್ಲಿಸಲಾಯಿತು. ನಗರದ ಡಿಎಆರ್ ಕಚೇರಿ ಆವರಣದಲ್ಲಿ ಜಿಲ್ಲಾಡಳಿತ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ತನ್ವೀರ್ ಸೇಠ ಧ್ವಜಾರೋಹಣ ನೆರವೇರಿಸಿದರು. ನಂತರ ಪದಾತಿ ದಳ, ಸ್ಕೌಟ್ಸ್, ಗೈಡ್ಸ್ ಮತ್ತು ವಿವಿಧ ಶಾಲಾ ಕಾಲೇಜುಗಳ ತಂಡಗಳಿಂದ ಸಚಿವರು ಗೌರವ ವಂದನೆ ಸ್ವೀಕರಿಸಿದರು. ನಂತರ ಮಾತನಾಡಿದ ಸಚಿವ ತನ್ವೀರ್ ಸೇಠ್, ಸ್ವಾತಂತ್ರ್ಯ ಹೊರಾಟದಲ್ಲಿ ಹೋರಾಡಿದ ಜಿಲ್ಲೆಯ ಎಲ್ಲ ಮಹನೀಯರನ್ನು ನೆನೆಯುವ ಮೂಲಕ ಕೃತಜ್ಞತೆ ಸಲ್ಲಿಸುವುದು ನಮ್ಮೆಲ್ಲರ ಕರ್ತವ್ಯ. ಸರ್ವರಿಗೂ ಸಮಬಾಳು, ಸರ್ವರಿಗೂ ಸಮಪಾಲು ಎಂಬುದು ಪ್ರಜಾಪ್ರಭುತ್ವದ ಮೂಲ ಆಶಯ. ಸಂಪತ್ತು, ಅಧಿಕಾರ ಮತ್ತು ಅವಕಾಶ ಸಮಾಜದ ಎಲ್ಲ ವರ್ಗಗಳಿಗೂ ಸಮಾನ ರೀತಿಯಲ್ಲಿ ಹಂಚಿಕೆಯಾಗಬೇಕು. ಈ ಆಶಯ ಈಡೇರಿಕೆಗೆ ನಮ್ಮ ಸರ್ಕಾರ ಬದ್ಧವಾಗಿದೆ ಎಂದು ತಿಳಿಸಿದರು. ಹೈ-ಕ ಜಿಲ್ಲೆಗಳ ಅಭಿವೃದ್ಧಿಗಾಗಿ ಸಂವಿಧಾನದ ಕಲಂ 371(ಜೆ) ತಿದ್ದುಪಡಿ ಮಾಡಿರುವುದು ಕಾಂಗ್ರೆಸ್ ಸರ್ಕಾರದ ಮಹತ್ತರ ಸಾಧನೆಯಾಗಿದೆ. ಜಿಲ್ಲೆಯ ಪ್ರಗತಿಗೆ ಎಚ್‌ಕೆಆರ್‌ಡಿಬಿಗೆ ವಿಶೇಷ ಅನುದಾನ ನೀಡಲಾಗುತ್ತಿದೆ. ಈ ಅನುದಾನದಿಂದ ಜಿಲೆಯಲ್ಲಿ ವಿವಿಧ ರೀತಿಯ ಮೂಲ ಸೌಕರ್ಯ ಕಲ್ಪಿಸಿ ಅಭಿವೃದ್ಧಿ ಕಾರ್ಯ ಕೈಗೊಳ್ಳಲಾಗಿದೆ. ನಂಜುಂಡಪ್ಪ ವರದಿಯನ್ವಯ ಪ್ರತಿ ವರ್ಷ ಮೂರು ಸಾವಿರ ಕೋಟಿ ರೂ. ಅನುದಾನ ನೀಡುವ ಮೂಲಕ ಸರ್ಕಾರ ಅಭಿವೃದ್ಧಿಗೆ ಬದ್ಧವಾಗಿದೆ. ಎಚ್.ಕೆ.ಆರ್.ಡಿ.ಬಿಯಿಂದ 2017-18ರಲ್ಲಿ 137 ಕೋಟಿ ರೂ. ಅನುದಾನ ನಿಗದಿಪಡಿಸಿದ್ದು. ಇದರಲ್ಲಿ 382 ಕಾಮಗಾರಿಗಳಿಗೆ 91.93 ಕೋಟಿ ರೂ.ಗಳ ಕ್ರಿಯಾ ಯೋಜನೆಗೆ ಅನುಮೋದನೆ ನೀಡಲಾಗಿದೆ. ಜಿಲ್ಲೆಗೆ ಐದು ವರ್ಷದಲ್ಲಿ 413.25 ಕೋಟಿ ರೂ. ಅನುದಾನ ನೀಡಲಾಗಿದೆ ಎಂದರು. ಕಳೆದ ವರ್ಷ 162 ತಾಲೂಕುಗಳನ್ನು ಬರಪೀಡಿತ ಎಂದು ಘೋಷಿಸಲಾಗಿತ್ತು. ಈ ವರ್ಷವೂ ಸಾಕಷ್ಟು ಬರ ಆವರಿಸಿದ್ದು, ಸರ್ಕಾರ ರೈತರ ನೆರವಿಗೆ ಧಾವಿಸಲಿದೆ ಎಂದು ವಿಶ್ವಾಸ ನೀಡಿದರು. ಕಳೆದ ಬಾರಿ ಬರದಿಂದ ಸಮಸ್ಯೆಯಾಗಿದ್ದು, ಜಿಲ್ಲೆಯ 34,044 ರೈತರಿಗೆ 23.59 ಕೋಟಿ ರೂ. ಬಿಡುಗಡೆ ಮಾಡಲಾಗಿದೆ. ಹಿಂಗಾರು ಅವಧಿಯಲ್ಲಿ ಜಿಲ್ಲೆಯ 63,166 ರೈತರಿಗೆ 48.32 ಸಾವಿರ ಕೋಟಿ ರೂ. ಪರಿಹಾರ ನೀಡಲಾಗಿದೆ. ಜಿಲ್ಲೆಯ ಸರ್ವಾಂಗೀಣ ಅಭಿವೃದ್ಧಿ ನಮ್ಮ ಸರ್ಕಾರದ ಆದ್ಯ ಕರ್ತವ್ಯವಾಗಿದ್ದು, ನಾವು ಅದಕ್ಕೆ ಬದ್ಧರಾಗಿದ್ದೇವೆ ಎಂದು ಹೇಳಿದರು. ಕಾರ್ಯಕ್ರಮದಲ್ಲಿ ಸ್ವಾತಂತ್ರ್ಯ ಹೋರಾಟಗಾರರಿಗೆ ಜಿಲ್ಲಾಡಳಿತದಿಂದ
ಗೌರವಿಸಲಾಯಿತು. ವಿವಿಧ ತರಗತಿಗಳಲ್ಲಿ ಉತ್ತಮ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ, ಸಾಧಕರಿಗೆ ಸನ್ಮಾನಿಸಲಾಯಿತು. ಶಾಸಕ ಡಾ| ಶಿವರಾಜ ಪಾಟೀಲ, ಕಾಂಗ್ರೆಸ್ ಮುಖಂಡ ಎ.ವಸಂತಕುಮಾರ, ಕಾಂಗ್ರೆಸ್ ಜಿಲ್ಲಾಧ್ಯಕ್ಷ ರಾಮಣ್ಣ ಇರಬಗೇರಾ, ಜಿಲ್ಲಾ ಧಿಕಾರಿ ಡಾ| ಬಗಾದಿ ಗೌತಮ್, ಎಸ್‌ಪಿ ನಿಶಾ ಜೇಮ್ಸ್ ಸೇರಿ ಇತರರಿದ್ದರು. ಅದಕ್ಕೂ ಮುಂಚೆ ಕ್ರೀಡಾಂಗಣದಲ್ಲಿನ ಮಹಾತ್ಮಗಾಂಧಿ ಪ್ರತಿಮೆಗೆ ಸಚಿವರು ಗೌರವ ಸಲ್ಲಿಸಿದರು.
ವಿಧೆಡೆ ಧ್ವಜಾರೋಹಣ: ವಿವಿಧ ರಾಜಕೀಯ ಪಕ್ಷಗಳು, ಸರ್ಕಾರಿ ಕಚೇರಿಗಳು, ಸಂಘ-ಸಂಸ್ಥೆ, ಶಾಲಾ-ಕಾಲೇಜುಗಳಲ್ಲಿ ಧ್ವಜಾರೋಹಣ ನೆರವೇರಿಸಲಾಯಿತು. ಕಾಂಗ್ರೆಸ್ ಕಚೇರಿ, ನಗರದ ಕಾಂಗ್ರೆಸ್ ಕಚೇರಿಯಲ್ಲಿ ಪಕ್ಷದ ಜಿಲ್ಲಾಧ್ಯಕ್ಷ ರಾಮಣ್ಣ ಇರಬಗೇರಾ ಧ್ವಜಾರೋಹಣ ನೆರವೇರಿಸಿದರು. ಬಿಜೆಪಿ ಕಚೇರಿಯಲ್ಲಿ ಜಿಲ್ಲಾಧ್ಯಕ್ಷ ಶರಣಪ್ಪಗೌಡ ಜಾಡಲದಿನ್ನಿ ಧ್ವಜಾರೋಹಣ ಮಾಡಿದರು. ರಾಜ್ಯ ಕಾರ್ಯದರ್ಶಿ ಎನ್.ಶಂಕ್ರಪ್ಪ, ಮಾಜಿ ಶಾಸಕ ಎ.ಪಾಪಾರೆಡ್ಡಿ, ನಗರ ಅಧ್ಯಕ್ಷ ದೊಡ್ಡ ಮಲ್ಲೇಶಪ್ಪ, ಡಾ|ಬಸನಗೌಡ ಪಿ. ಪಾಟೀಲ, ಕಡಗೋಲ ಆಂಜನೇಯ, ಮಾಧ್ಯಮ ಪ್ರಮುಖ ಎ.ಚಂದ್ರಶೇಖರ ಸೇರಿ ಇತರರಿದ್ದರು. ಜೆಡಿಎಸ್ ಕಚೇರಿಯಲ್ಲಿ ಧ್ವಜಾರೋಹಣ ನೆರವೇರಿಸಲಾಯಿತು. ಪಕ್ಷದ ಕಾರ್ಯಕರ್ತರು ಆಯೋಜಿಸಿದ್ದ ಭಾರತ ಮಾತೆಯ ಭಾವಚಿತ್ರ ಮೆರವಣಿಗೆಗೆ ಶಾಸಕ ಶಿವರಾಜ ಪಾಟೀಲ ಚಾಲನೆ ನೀಡಿದರು. ಜಿಪಂ ಕಚೇರಿ, ನಗರಸಭೆ, ತಹಶೀಲ್ದಾರ ಕಚೇರಿ ಸೇರಿ ಎಲ್ಲ ಸರ್ಕಾರಿ ಕಚೇರಿಗಳಲ್ಲಿ ಧ್ವಜಾರೋಹಣ ನೆರವೇರಿಸಲಾಯಿತು.
ಗಮನ ಸೆಳೆದ ನೃತ್ಯರೂಪಕ: ನಗರದ ಎಸ್‌ಪಿ ಕಚೇರಿ ಆವರಣದಲ್ಲಿ 71ನೇ ಸ್ವಾತಂತ್ರ್ಯೋತ್ಸವ ನಿಮಿತ್ತ ವಿವಿಧ ಶಾಲಾ ವಿದ್ಯಾರ್ಥಿಗಳು ದೇಶಭಕ್ತಿ ಗೀತೆಗಳಿಗೆ ಪ್ರದರ್ಶಿಸಿದ ನೃತ್ಯ ಪ್ರದರ್ಶನ ಎಲ್ಲರನ್ನು ರಂಜಿಸಿತು. ಧ್ವಜಾರೋಹಣ ನಂತರ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು. ನಾನಾ ಶಾಲೆಗಳ ವಿದ್ಯಾರ್ಥಿಗಳು ವಿವಿಧ ದೇಶಭಕ್ತಿ ಗೀತೆಗಳಿಗೆ ಹೆಜ್ಜೆ ಹಾಕಿದರು. ಮಕ್ಕಳು ವಿವಿಧ ದೇಶಭಕ್ತರ ವೇಷ ಧರಿಸಿ ಗಮನ ಸೆಳೆದರು.
ಸಸಿ ನೆಡುವ ಕಾರ್ಯಕ್ರಮ: ಟಾಗೋರ್ ಸ್ಮಾರಕ ಶಿಕ್ಷಣ ಸಂಸ್ಥೆಯ ಸೀತಾ ಸುಬ್ಬರಾಜು ಸ್ಮಾರಕ ಕಾಲೇಜಿನ ಎನ್‌ಎಸ್‌ಎಸ್ ಹಾಗೂ ಎನ್‌ಸಿಸಿ ಸಹಯೋಗದಲ್ಲಿ ಸಸಿ ನೆಡಲಾಯಿತು. ಪ್ರಾಚಾರ್ಯ ಡಾ| ಸಿದ್ಧಲಿಂಗಪ್ಪ ದ್ವಜಾರೋಹಣ ನೆರವೇರಿಸಿದ ನಂತರ ಸಸಿ ನೆಡುವ ಕಾರ್ಯಕ್ಕೆ ಚಾಲನೆ ನೀಡಿದರು. ಶ್ರೀನಿವಾಸ ರಾಯಚೂರಕರ್, ಬಸವರಾಜಪ್ಪ ಸೇರಿ ಇತರರಿದ್ದರು.