Advertisement

ಕುಡುಕನಿಂದ ಗಾಂಧೀಜಿ ಪ್ರತಿಮೆ ಭಗ್ನ : ಸ್ಥಳಕ್ಕೆ ಡಿಎಸ್‌ಪಿ, ತಹಶೀಲ್ದಾರ್ ಭೇಟಿ, ಪರಿಶೀಲನೆ

09:31 PM Jun 16, 2021 | Team Udayavani |

ಕೊಪ್ಪಳ: ತಾಲೂಕಿನ ಬಸಾಪುರ ಗ್ರಾಮದಲ್ಲಿ ಮದ್ಯ ವ್ಯಸನಿಯೋರ್ವನು ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಅವರ ಪ್ರತಿಮೆಯನ್ನು ಕೆಡವಿ ಭಾರಿ ಆತಂಕ ಸೃಷ್ಟಿಸಿದ ಘಟನೆ ಬುಧವಾರ ಜರುಗಿದ್ದು, ಸ್ಥಳಕ್ಕೆ ಡಿಎಸ್‌ಪಿ ಹಾಗೂ ಕೊಪ್ಪಳ ತಹಸೀಲ್ದಾರ್ ಅವರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಕೃತ್ಯ ಎಸಗಿದ ವ್ಯಕ್ತಿಯನ್ನು ಮುನಿರಾಬಾದ್ ಪೊಲೀಸರು ಬಂಧಿಸಿ ಪ್ರಕರಣ ದಾಖಲಿಸುವ ಸಿದ್ದತೆಯಲ್ಲಿದ್ದಾರೆ.

Advertisement

ಕೃತ್ಯ ಎಸಗಿದ ವ್ಯಕ್ತಿಯನ್ನು ಮಹೇಶ ಕಲ್ಯಾಣಪ್ಪ ಓಜಿನಹಳ್ಳಿ ಎಂದು ಗುರುತಿಸಲಾಗಿದ್ದು, ಈತನು ನಿತ್ಯವೂ ಮದ್ಯ ಸೇವಿಸಿ ಊರಲ್ಲಿ ತುಂಬಾ ಗಲಾಟೆ ಮಾಡುತ್ತಿದ್ದನು ಎನ್ನುವ ಮಾತು ಕೇಳಿ ಬಂದಿದೆ. ಎಂದಿನಂತೆಯೇ ಬುಧವಾರ ಮದ್ಯ ಸೇವಿಸಿ ಗ್ರಾಮದಲ್ಲಿನ ಗಾಂಧಿ ವೃತ್ತದ ಬಳಿ ಆಗಮಿಸಿದ್ದಾನೆ. ಬಾಯಿ ಮಾಡುತ್ತಲೇ ವೃತ್ತದ ಮೇಲ್ಭಾಗಕ್ಕೆ ತೆರಳಿ ಗಾಂಧಿ ಪ್ರತಿಮೆಯನ್ನು ಹಿಡಿದು ಎಳೆದಾಡಿದ್ದಾನೆ. ಪ್ರತಿಮೆಯಲ್ಲಿ ಗಾಂಧೀಜಿಯ ಕೈಯಲ್ಲಿನ ಬೆತ್ತ (ಊರುಗೋಲು) ಹಗುರವಾಗಿದ್ದರಿಂದ ಅದನ್ನು ಹಿಡಿದು ಎಳೆದಾಡಿದ್ದಾನೆ. ಮದ್ಯ ವ್ಯಸನಿ ಎಳೆದ ರಭಸಕ್ಕೆ ಬೆತ್ತ ಕಿತ್ತು ಬಂದಿದೆ. ಬೆತ್ತ ಕಿತ್ತು ಬೀಳುತ್ತಿದ್ದಂತೆ ಮೂರ್ತಿಯು ಭಾರ ತಾಳದೆ ಕೆಳಗೆ ಮುರಿದು ಬಿದ್ದಿದೆ. ಕೂಡಲೇ ಸ್ಥಳೀಯರು ಈತನ ಕೃತ್ಯ ನೋಡಿ ಆತನನ್ನ ಹಿಡಿದು ಥಳಿಸಿದ್ದಾರೆ. ಪೊಲೀಸ್ ಠಾಣೆ, ತಾಲೂಕು ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ.

ಗ್ರಾಮದಲ್ಲಿ ಏಕಾ ಏಕಿ ಗಾಂಧೀಜಿ ಪ್ರತಿಮೆಯನ್ನು ಕೆಡವಿದ ಪ್ರಕರಣ ಊರು ತುಂಬೆಲ್ಲ ಸುದ್ದಿಯಾಗಿ ಏನೋ ವಿವಾದ ಎದ್ದಿದೆ ಎಂದು ಗ್ರಾಮಸ್ಥರು ಗುಸುಗುಸು ಮಾತನಾಡುತ್ತಿದ್ದರು. ಬಳಿಕ ಸ್ಥಳಕ್ಕೆ ಮುನಿರಾಬಾದ್ ಠಾಣೆ ಪಿಎಸ್‌ಐ ಪ್ರಶಾಂತ ಅವರು ಆಗಮಿಸಿ ಪರಿಸ್ಥಿತಿ ಅವಲೋಕಿಸಿದ್ದಾರೆ. ಅಲ್ಲದೇ, ಕೃತ್ಯದ ಕುರಿತು ಸ್ಥಳೀಯ ಮುಖಂಡರಿಂದಲೂ ಮಾಹಿತಿ ಪಡೆದಿದ್ದಾರೆ. ಮದ್ಯ ವ್ಯಸನಿಯನ್ನು ಠಾಣೆಯ ಸುಪರ್ಧಿಗೆ ಪಡೆದಿದ್ದಾರೆ.

ಇದನ್ನೂ ಓದಿ :ಸಾಗರೋತ್ತರ ವ್ಯವಹಾರಗಳ ಮೇಲೆ ಪಟ್ಟಭದ್ರ ಹಿತಾಸಕ್ತಿಗಳ ಹಿಡಿತ ಸಾಧ್ಯತೆ : ರಾಜನಾಥ್ ಸಿಂಗ್

ಅಲ್ಲದೇ, ಭಗ್ನಗೊಂಡ ಗಾಂಧೀಜಿ ಮೂರ್ತಿಯನ್ನು ಸ್ಥಳೀಯ ಮುಖಂಡರು ಗ್ರಾಮದಲ್ಲಿನ ಗೋದಾಮಿನಲ್ಲಿ
ಇರಿಸಿದ್ದಾರೆ. ಗಾಂಧೀಜಿ ಪ್ರತಿಮೆ ಕೆಡವಿದ ಘಟನೆಯ ಬೆನ್ನಲ್ಲೇ ಕೊಪ್ಪಳ ಡಿಎಸ್‌ಪಿ ಗೀತಾ, ತಹಸೀಲ್ದಾರ ಅಮರೇಶ ಬಿರಾದಾರ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Advertisement

ಕುಡುಕ ಮಹೇಶ ಓಜಿನಳ್ಳಿಯ ಕೃತ್ಯಕ್ಕೆ ಇಡೀ ಗ್ರಾಮವೇ ಆತನ ವಿರುದ್ದ ಆಕ್ರೋಶ ವ್ಯಕ್ತಪಡಿಸಿ ಆತನ ಮೇಲೆ ಶಿಸ್ತು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದೆ. ಅಲ್ಲದೇ, ಗ್ರಾಮದಲ್ಲಿನ ಕೆಲವು ಮುಖಂಡರು ಮೂರ್ತಿಯ ಭಗ್ನದ ಹಿಂದೆ ಯಾರದ್ದಾದರೂ ಕೃತ್ಯ ಇದೆಯೋ ? ಅಥವಾ ಆತನೇ ಇದನ್ನು ಕೆಡವಿದ್ದಾನೋ ಎನ್ನುವ ಕುರಿತು ತನಿಖೆ ಮಾಡುವಂತೆಯೂ ಒತ್ತಾಯಿಸಿದ್ದಾರೆ.

ಮದ್ಯ ವ್ಯಸನಿ ಮಹೇಶ ಓಜಿನಹಳ್ಳಿಯನ್ನು ಮುನಿರಾಬಾದ್ ಠಾಣೆಯ ಪೊಲೀಸರು ಈಗಾಗಲೆ ವಶಕ್ಕೆ ಪಡೆದು ವಿಚಾರಣೆ ಆರಂಭಿಸಿದ್ದು, ಆತನ ಮಾನಸಿಕ ಸ್ಥಿತಿಯ ಸಮಾಲೋಚನೆಯೂ ನಡೆದಿದೆ. ಠಾಣೆಯಲ್ಲಿ ಘಟನೆ ಸಂಬಂಧ ಪ್ರಕರಣ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next