ಹನೂರು: ಕ್ಷೇತ್ರ ವ್ಯಾಪ್ತಿಯ ಲೊಕ್ಕನಹಳ್ಳಿ ಗ್ರಾಮ ಪಂಚಾಯ್ತಿ 2ನೇ ಬಾರಿಗೆ ಗಾಂಧಿ ಗ್ರಾಮ ಪ್ರಶಸ್ತಿಗೆ ಭಾಜನವಾಗಿದ್ದು, ಬೆಂಗಳೂರಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಲೊಕ್ಕನಹಳ್ಳಿ ಗ್ರಾಪಂ ಶೌಚಗೃಹ ನಿರ್ಮಾಣ, ನರೇಗಾ ಯೋಜನೆ ಸಮರ್ಪಕ ಅನುಷ್ಠಾನ, ಕಂದಾಯ ವಸೂಲಾತಿ, ಆರ್ಥಿಕ ಪ್ರಗತಿ, ವಾರ್ಡ್ ಸಭೆ, ಸಾಮಾನ್ಯ ಸಭೆ, ಗ್ರಾಮಸಭೆ, ಹಾಗೂ ವಸತಿ ಯೋಜನೆಗಳ ಅನುಷ್ಠಾನ ಸೇರಿದಂತೆ ಸರ್ಕಾರದ ಎಲ್ಲಾ ಯೋಜನೆಗಳು ಸಮರ್ಪಕವಾಗಿ ಅನುಷ್ಠಾನಗೊಂಡಿರುವ ಹಿನ್ನೆಲೆಯಲ್ಲಿ 2015-16ನೇ ಸಾಲಿನಲ್ಲಿಯೂ ಗಾಂಧಿ ಗ್ರಾಮ ಪುರಸ್ಕಾರವನ್ನು ಪಡೆದುಕೊಂಡಿತ್ತು. ಅಲ್ಲದೇ 2016-17ನೇ ಸಾಲಿನಲ್ಲಿಯೂ ಸರ್ಕಾರದ ಯೋಜನೆಗಳ ಸಮರ್ಪಕ ಅನುಷ್ಠಾನದಿಂದ ಈ ಪುರಸ್ಕಾರವನ್ನು ಪಡೆದುಕೊಂಡಿದೆ.
ಪುರಸ್ಕಾರ ಸ್ವೀಕಾರ: ಬೆಂಗಳೂರಿನ ಅರಮನೆ ದಾನದಲ್ಲಿ ಜರುಗಿದ ಸಮಾರಂಭದಲ್ಲಿ ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಸಚಿವ ಎಚ್.ಕೆ.ಪಾಟೀಲ್ ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ಲೊಕ್ಕನಹಳ್ಳಿ ಗ್ರಾಪಂ ಕಾರ್ಯದರ್ಶಿ ನಂಜುಂಡಸ್ವಾಮಿ, ಅಧ್ಯಕ್ಷ ರಂಗಶೆಟ್ಟಿಗೆ 5 ಲಕ್ಷ ರೂ. ಬಹುಮಾನ ಹಾಗೂ ಪ್ರಶಸ್ತಿ ಪತ್ರವನ್ನು ವಿತರಿಸಿದರು.
ಈ ಬಗ್ಗೆ ಗ್ರಾಪಂ ಕಾರ್ಯದರ್ಶಿ ನಂಜುಂಡಸ್ವಾಮಿ ಮಾತನಾಡಿ, 2015-16 ಹಾಗೂ 2016-17ನೇ ಸಾಲಿನಲ್ಲಿ ಸರ್ಕಾರದ ಯೋಜನೆಗಳು ಸಕಾಲದಲ್ಲಿ ಸಮರ್ಪಕವಾಗಿ ಅನುಷ್ಠಾನಗೊಂಡಿದೆ. ಅಲ್ಲದೇ ಸ್ವತ್ಛ ಭಾರತ ಅಭಿಯಾನದಡಿ ಗ್ರಾಪಂಗೆ 300 ಶೌಚಗೃಹ ನಿರ್ಮಾಣದ ಗುರಿ ನಿಗದಿಪಡಿಸಿತ್ತು.
ಇದರಲ್ಲಿ ಗ್ರಾಪಂ ವ್ಯಾಪ್ತಿಯಲ್ಲಿ 270ಕ್ಕೂ ಹೆಚ್ಚು ಶೌಚಗೃಹವನ್ನು ನಿರ್ಮಿಸಲಾಗಿದೆ. ಜತೆಗೆ ಶೇ.75ರಷ್ಟು ತೆರಿಗೆ ವಸೂಲಾಗಿದೆ. ಈ ನಿಟ್ಟಿನಲ್ಲಿ ಗಾಂಧಿ ಗ್ರಾಮ ಪುರಸ್ಕಾರಕ್ಕೆ ಲೊಕ್ಕನಹಳ್ಳಿ ಗ್ರಾಪಂ ಆಯ್ಕೆಯಾಗಿ ಪ್ರಶಸ್ತಿ ಪಡೆದಿರುವುದು ನಮಗೆ ಸಂತಸ ತಂದಿದೆ ಎಂದು ತಿಳಿಸಿದರು.
ಸನ್ಮಾನ: ಪುರಸ್ಕಾರವನ್ನು ಪಡೆಯಲು ಕಾರಣಕರ್ತರಾದ ಗ್ರಾಪಂ ಅಧ್ಯಕ್ಷ ರಂಗಶೆಟ್ಟಿ ಹಾಗೂ ಸದಸ್ಯರನ್ನು ಜಿಪಂ ಸದಸ್ಯೆ ಮರಗದಮಣಿ ಹಾಗೂ ಗ್ರಾಮಸ್ಥರು ಸನ್ಮಾನಿಸಿದರು.