Advertisement

Thirthahalli: ಕಂದಾಯ ಇಲಾಖೆಯ ಮೂವರು ಅಧಿಕಾರಿಗಳಿಗೆ ಸನ್ಮಾನ

04:30 PM Aug 03, 2024 | Poornashri K |

ತೀರ್ಥಹಳ್ಳಿ: ಬಡವರ ಸಂಕಷ್ಟಕ್ಕೆ ಆಪತ್ಬಾಂಧವರಾದ ಕಂದಾಯ ಇಲಾಖೆಯ ಮೂವರು ಅಧಿಕಾರಿಗಳಿಗೆ ಶಿವಮೊಗ್ಗದಲ್ಲಿ ಶನಿವಾರದಂದು (ಆ.3) ಜಿಲ್ಲಾಧಿಕಾರಿಗಳು ಸನ್ಮಾನ ಕಾರ್ಯಕ್ರಮ ನೆರವೇರಿಸಿದರು.

Advertisement

ತಾಲೂಕು ವ್ಯಾಪ್ತಿಯಲ್ಲಿ ಸುರಿದ ಅತೀ ಹೆಚ್ಚು ಮಳೆಯಿಂದಾಗಿ ಪ್ರವಾಹ ಪರಿಸ್ಥಿತಿ ಉಂಟಾದ ಕಾರಣ ಪಟ್ಟಣದ ತುಂಗಾ ಕಾಲೋನಿ ನಿವಾಸಿಗಳನ್ನು ಸುರಕ್ಷತೆ ಹಾಗೂ ಮುನ್ನೆಚ್ಚರಿಕೆಯ ದೃಷ್ಠಿಯಿಂದ  ಕೆ.ಟಿ.ಕೆ ಕಲ್ಯಾಣ ಮಂಟಪದಲ್ಲಿ ತೆರೆಯಲಾಗಿದ್ದ ಕಾಳಜಿ ಕೇಂದ್ರಕ್ಕೆ ಸ್ಥಳಾಂತರಿಸಲಾಗಿತ್ತು.

ನಿರಾಶ್ರಿತರ ಪೈಕಿ ಓರ್ವ ಗರ್ಭಿಣಿ ಮಹಿಳೆಗೆ  ಆ.1 ರಂದು ಹೆರಿಗೆ ನೋವು ಶುರುವಾಗಿತ್ತು.  ಸಕಾಲದಲ್ಲಿ ಅಂಬ್ಯುಲೆನ್ಸ್ ಸ್ಥಳಕ್ಕೆ ಬಾರದ ಕಾರಣ ಅಲ್ಲೇ ಕರ್ತವ್ಯ ನಿರ್ವಹಿಸುತ್ತಿದ್ದ ಕಂದಾಯ ಅಧಿಕಾರಿ ಸುಧೀರ್ ಬಿ.ವಿ ತಮ್ಮ ಖಾಸಗಿ ವಾಹನದಲ್ಲಿ ಅವರನ್ನು ಆಸ್ಪತ್ರೆಗೆ ದಾಖಲಿಸಿದ್ದರು. ಈ ಸಂಗತಿಯನ್ನು ಗುರುತಿಸಿದ ಶಿವಮೊಗ್ಗ ಜಿಲ್ಲಾಡಳಿತವು  ಈ ಕಾರ್ಯಕ್ಕೆ ಪ್ರಶಂಸೆ ಪತ್ರ ನೀಡುವುದರ ಜೊತೆಗೆ ಸನ್ಮಾನಿಸಿ ಗೌರವಿಸಿದೆ.

ನಿಮ್ಮ ಸಮಯ ಪ್ರಜ್ಞೆ, ಸಾಮಾಜಿಕ ಕಾಳಜಿ ಹಾಗೂ ಕರ್ತವ್ಯ ನಿಷ್ಠೆಯನ್ನು ಈ ಮೂಲಕ ಶಿವಮೊಗ್ಗ ಜಿಲ್ಲಾಡಳಿತ ಪ್ರಶಂಸಿಸುತ್ತದೆ. ನಿಮ್ಮ ಈ ಸೇವಾ ಮನೋಭಾವನೆ ಇದೇ ರೀತಿ ಮುಂದುವರೆಯಲಿ ಎಂದು ಆಶಿಸುತ್ತೇವೆ ಎಂದು ಜಿಲ್ಲಾಧಿಕಾರಿಗಳು ಪ್ರಶಂಸೆಯನ್ನು ವ್ಯಕ್ತಪಡಿಸಿದರು.

ಕಂದಾಯ ಅಧಿಕಾರಿಗಳಾದ ಕಸಬಾ ಹೋಬಳಿಯ ರಾಜಸ್ವ ನಿರೀಕ್ಷಕ ಸುಧೀರ್ ಬಿ. ವಿ, ಗ್ರಾಮ ಲೆಕ್ಕಾಧಿಕಾರಿ ಆರ್.ಮೌನೇಶ್ ಹಾಗೂ ಬಿ ಲೋಕೇಶ್ ಅವರನ್ನು ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಗೌರವಿಸಿ ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಗುರುದತ್ ಹೆಗಡೆ, ಜಿಲ್ಲಾ ರಕ್ಷಣಾಧಿಕಾರಿ ಮಿಥುನ್ ಕುಮಾರ್ ಸೇರಿದಂತೆ ಅನೇಕ ಅಧಿಕಾರಿಗಳು ಉಪಸ್ಥಿತರಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next