Advertisement

ಮೀಸಲು ಕ್ಷೇತ್ರದಲ್ಲಿ ಈ ಬಾರಿ ತ್ರಿಕೋನ ಸ್ಪರ್ಧೆ

03:19 PM Apr 08, 2018 | |

ಶಿವಮೊಗ್ಗ: 2008 ರ ಕ್ಷೇತ್ರ ಪುನರ್‌ವಿಂಗಡಣೆ ವೇಳೆ ಅಸ್ತಿತ್ವಕ್ಕೆ ಬಂದ ಶಿವಮೊಗ್ಗ ಗ್ರಾಮಾಂತರ ಕ್ಷೇತ್ರ ಮೂರನೇ ವಿಧಾನಸಭಾ ಚುನಾವಣೆಯನ್ನು ಎದುರಿಸುತ್ತಿದೆ. ಶಿವಮೊಗ್ಗ ನಗರದ ಸುತ್ತ ಆವರಿಸಿಕೊಂಡಿರುವ ಈ ಕ್ಷೇತ್ರ ಮೀಸಲು ಕ್ಷೇತ್ರವಾಗಿದ್ದು, ಬಿಜೆಪಿ, ಜೆಡಿಎಸ್‌ ಮತ್ತು ಕಾಂಗ್ರೆಸ್‌ ಮೂರು ಪಕ್ಷಗಳು ಇಲ್ಲಿ ತಮ್ಮ ಅಸ್ತಿತ್ವ ದಾಖಲಿಸಲು ಇನ್ನಿಲ್ಲದ ಯತ್ನ ನಡೆಸುತ್ತಿವೆ.

Advertisement

ಲಿಂಗಾಯತರು, ಬಣಜಾರ್‌ ಸಮುದಾಯವರು ಮತ್ತು ದಲಿತ ಸಮುದಾಯ ಅತಿ ಹೆಚ್ಚಿನ ಸಂಖ್ಯೆಯಲ್ಲಿ ಇರುವ ಇಲ್ಲಿ ಲಿಂಗಾಯತರೇ ನಿರ್ಣಾಯಕರು. ಕ್ಷೇತ್ರ ಪುನರ್‌ವಿಂಗಡನೆಯಾಗಿ ಮೊದಲ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಕೆ.ಜಿ. ಕುಮಾರಸ್ವಾಮಿ ಇಲ್ಲಿ ಗೆಲುವು ಸಾಧಿಸಿದರು.

2013 ರ ಚುನಾವಣೆಯಲ್ಲಿ ಬಿಜೆಪಿ ಮತ್ತು ಕೆಜೆಪಿ ನಡುವಿನ ಗುದ್ದಾಟದಲ್ಲಿ ಜೆಡಿಎಸ್‌ ಅಭ್ಯರ್ಥಿ ಶಾರದಾ ಪೂರ್ಯಾನಾಯ್ಕ
ಗೆಲುವು ಸಾಧಿಸಿದರು. ಜಿಪಂ ಸದಸ್ಯರಾಗಿದ್ದಾಗಲೇ ಈ ಕ್ಷೇತ್ರದಲ್ಲಿ ತಮ್ಮ ಛಾಪು ಒತ್ತಿದ್ದ ಶಾರದಾ ಪೂರ್ಯಾನಾಯ್ಕ ಅವರು ಪುನಃ ಜೆಡಿಎಸ್‌ ಅಭ್ಯರ್ಥಿಯಾಗಿ ಕಣಕ್ಕೆ ಇಳಿದಿದ್ದಾರೆ. ಜನಮುಖೀ ಸ್ಪಂದನೆ, ಜನಪರ ಹೋರಾಟ ಮತ್ತು ತಮ್ಮ ಗಾಂಭೀರ್ಯದ ನಡವಳಿಕೆಯಿಂದಾಗಿ ಕ್ಷೇತ್ರದಲ್ಲಿ ಉತ್ತಮ ಹೆಸರು ಉಳಿಸಿಕೊಂಡಿದ್ದಾರೆ.

1957 ಮತ್ತು 63 ರ ಚುನಾವಣೆಯಲ್ಲಿ ಶಿವಮೊಗ್ಗ ನಗರದಿಂದ ರತ್ನಮ್ಮ ಮಾಧವರಾವ್‌ ಆಯ್ಕೆಯಾಗಿದ್ದನ್ನು ಹೊರತುಪಡಿಸಿದರೆ ಐದು ದಶಕದ ಬಳಿಕ ಜಿಲ್ಲೆಯ ಏಕೈಕ ಚುನಾಯಿತ ಮಹಿಳಾ ಶಾಸಕಿಯಾಗಿ ಶಾರದಾ ಪೂರ್ಯಾನಾಯ್ಕ ಆಯ್ಕೆಯಾಗಿದ್ದಾರೆ.

ತುಂಗಾ ಏತ ನೀರಾವರಿ ಯೋಜನೆ ಪೂರ್ಣಗೊಳಿಸಲು ಸರ್ಕಾರದ ಮೇಲೆ ಒತ್ತಡ ತರಲು, ಬಗರ್‌ ಹುಕುಂ ಸಾಗುವಳಿದಾರರ ಸಮಸ್ಯೆ ಬಗೆಹರಿಸಲು, ಅಡಕೆ ಬೆಳೆಗಾರರ ಸಮಸ್ಯೆ ಎದುರಾದಾಗ ಹೋರಾಟಕ್ಕೆ ಧುಮುಕಿ, ಪಾದಯಾತ್ರೆ ನಡೆಸಿ ಸರ್ಕಾರದ ಮೇಲೆ ಒತ್ತಡ ತರುವ ಕೆಲಸ ಮಾಡಿದ್ದಾರೆ. ಹೊಳಲೂರು ಸೇತುವೆ, ಗ್ರಾಮಾಂತರ ಭಾಗದಲ್ಲಿನ ರಸ್ತೆಗಳ ನಿರ್ಮಾಣ, ತುಂಗಾ ಏತ ನೀರಾವರಿ ಯೋಜನೆ ಪೂರ್ಣಗೊಳಿಸಿರುವುದು ಇವರ ಕಾಲದಲ್ಲಿನ ಹೆಗ್ಗಳಿಕೆ. ಬಗರ್‌ ಹುಕುಂ ಸಾಗುವಳಿದಾರರಿಗೆ ಹಕ್ಕುಪತ್ರ ಕೊಡಿಸಿದ್ದಾರೆ.

Advertisement

ಹೊಳಲೂರು ಏತ ನೀರಾವರಿ ಯೋಜನೆಗೆ ಯತ್ನ ನಡೆಸಿದ್ದು, ಗೌಡನ ಕೆರೆ ನೀರಾವರಿ ಯೋಜನೆ ಸೇರಿದಂತೆ ಹಲವು ಯೋಜನೆಗಳನ್ನು ಸಾಕಾರಗೊಳಿಸಿದ್ದಾರೆ. ಆದರೂ ಇವರ ವಿರುದ್ಧ ಪ್ರತಿಪಕ್ಷಗಳು ಆರೋಪ ಮಾಡುತ್ತಲೇ ಇವೆ. ಹಲವಾರು ಕಾಮಗಾರಿಗಳಲ್ಲಿ ಭ್ರಷ್ಟಾಚಾರ ನಡೆದಿದೆ ಎಂಬ ಆರೋಪವೂ ಕೇಳಿಬರುತ್ತಿದೆ. ಅಲ್ಲದೆ ಕ್ಷೇತ್ರದಲ್ಲಿ ಸಮಸ್ಯೆಗಳೂ ಇವೆ ಎನ್ನಲಾಗುತ್ತಿದೆ. 

ಕ್ಷೇತ್ರದ ಬೆಸ್ಟ್‌ ಏನು?
ತುಂಗಾ ಏತ ನೀರಾವರಿ ಯೋಜನೆ ಜಾರಿಯಾಗಿದ್ದು, ಪರಿಶಿಷ್ಟ ಜಾತಿ ಮತ್ತು ಪಂಗಡಗಳು ವಾಸಿಸುವ ಪ್ರದೇಶಗಳಿಗೆ ಉತ್ತಮ ರಸ್ತೆ ನಿರ್ಮಾಣ. ಹೊಳಲೂರು- ಸನ್ಯಾಸಿ ಕೋಡುಮಗ್ಗೆ ಸಂಪರ್ಕ ಸೇತುವೆ ನಿರ್ಮಾಣ.

ಕ್ಷೇತ್ರದ ಸಮಸ್ಯೆ?
ಹೊಳಲೂರು ಏತ ನೀರಾವರಿ ಯೋಜನೆ ನನೆಗುದಿಗೆ ಬಿದ್ದಿರುವುದು. ಇದು ಹಿಂದಿನ ಶಾಸಕರ ಅವಧಿಯಲ್ಲಿ ಉಂಟಾದ ಸಮಸ್ಯೆ. ಯೋಜನೆಯ ಫೌಂಡೇಶನ್‌ ಸರಿ ಇಲ್ಲದ ಕಾರಣ ಯೋಜನೆ ಜಾರಿಯಾಗುತ್ತಿಲ್ಲ. ಇದು ಹಿಂದಿನವರ ಪಾಪದ ಕೂಸು ಎಂದು ಶಾಸಕರು ಹೇಳುತ್ತಾರೆ

ಕ್ಷೇತ್ರ ಮಹಿಮೆ
ತುಂಗ ಮತ್ತು ಭದ್ರಾ ನದಿಗಳ ಸಂಗಮ ಕ್ಷೇತ್ರವಾಗಿ ಕೂಡಲಿ ಕ್ಷೇತ್ರವು ಹೆಸರು ಮಾಡಿದ್ದು, ಇಲ್ಲಿ ಶೃಂಗೇರಿ ಸಂಸ್ಥಾನ ಮಠ ಮತ್ತು ಮಧ್ವ ಮಠಗಳಿವೆ. ಶ್ರೀ ಶಾರದಾಂಬೆಯ ಆಕರ್ಷಕ ದೇವಸ್ಥಾನ ನಿರ್ಮಾಣವಾಗುತ್ತಿದೆ. ತ್ಯಾವರೆಕೊಪ್ಪ ಸಿಂಹಧಾಮ ಆಕರ್ಷಣೆಯ ಸ್ಥಳವಾಗಿದೆ. 

ಶಾಸಕರು ಏನಂತಾರೆ?
ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದಾಗ ನನೆಗುದಿಗೆ ಬಿದ್ದಿದ್ದ ತುಂಗಾ ನೀರಾವರಿ ಯೋಜನೆಯ ಮಾರ್ಗ ಬದಲಿಸಿ
ಯೋಜನೆ ಜಾರಿಗೆ ಮುನ್ನುಡಿ ಬರೆದರು. ತಾವು ಶಾಸಕರಾದ ಬಳಿಕ ಅನುದಾನ ತಂದು ಈ ಯೋಜನೆಯನ್ನು ಪೂರ್ಣಗೊಳಿಸಿದ್ದೇನೆ. ನೂರಾರು ಗ್ರಾಮಗಳು ತಮ್ಮ ಕ್ಷೇತ್ರಕ್ಕೆ ಬರಲಿದ್ದು, ಸಾಧ್ಯವಾದಷ್ಟು ಮೂಲಭೂತ ಅಭಿವೃದ್ಧಿಗೆ, ರಸ್ತೆಗಳ ನಿರ್ಮಾಣಕ್ಕೆ ಒತ್ತು ನೀಡಿದ್ದೇನೆ. ಬಗರ್‌ಹುಕುಂ ಸಾಗುವಳಿದಾರರಿಗೆ ಹಕ್ಕುಪತ್ರ ಕೊಡಿಸಿದ್ದೇನೆ. ಪ್ರಾಮಾಣಿಕವಾಗಿ ಸೇವೆ ಸಲ್ಲಿಸಿದ ತೃಪ್ತಿ ನನಗಿದೆ. ಇನ್ನೊಮ್ಮೆ ಜನರ ಎದುರು ಮತ ಕೇಳಲು ನೈತಿಕತೆ ಇದೆ. ಅಂತಹ ಸ್ಥಿತಿಯನ್ನು ನಿರ್ಮಿಸಿಕೊಂಡಿದ್ದೇನೆ. ಹೊಳಲೂರು ಯೋಜನೆ ಸಮಸ್ಯೆ ಹಿಂದಿನ ಶಾಸಕರ ಪಾಪದ ಕೂಸು. ಯೋಜನೆಯನ್ನೇ ಹಾಳು ಮಾಡಿದ್ದಾರೆ.
ಶಾರದಾ ಪೂರ್ಯಾನಾಯ್ಕ

ಕ್ಷೇತ್ರದಲ್ಲಿ ರಸ್ತೆ ಸಂಪೂರ್ಣ ಹದಗೆಟ್ಟಿದೆ. ಬಸ್‌ ಸೌಲಭ್ಯ ಕೆಲವು ಗ್ರಾಮಗಳಿಗೆ ಇಲ್ಲ. ಇದರಿಂದಾಗಿ ರೋಗಿಗಳಿಗೆ ಆಸ್ಪತ್ರೆಗೆ ತೆರಳಲು, ಶಾಲಾ ಕಾಲೇಜುಗಳಿಗೆ ಹೋಗುವು ವಿದ್ಯಾರ್ಥಿಗಳಿಗೆ, ಕೂಲಿ ಕೆಲಸಗಾರರಿಗೆ ತುಂಬಾ ತೊಂದರೆಯುಂಟಾಗಿದ್ದು, ಕ್ಷೇತ್ರಕ್ಕೆ
ಹೆಚ್ಚಿನ ಅನುದಾನ ಬಂದಿಲ್ಲ. ನಿರೀಕ್ಷೆಯಂತೆ ಅಭಿವೃದ್ಧಿ ಕೆಲಸ ನಡೆದಿಲ್ಲ.
 ಜಗದೀಶ್‌, ಹಾಡೋನಹಳ್ಳಿ

 ಕ್ಷೇತ್ರದಲ್ಲಿ ಕಳೆದ ಕೆಲವು ತಿಂಗಳಿನಿಂದ ಅಭಿವೃದ್ಧಿ ಕಾರ್ಯ ನಡೆದಿದೆ. ಗ್ರಾಮಾಂತರ ಕ್ಷೇತ್ರದ ಶಾಸಕಿ ಶಾರದಾ ಪೂರ್ಯಾನಾಯ್ಕ ಅವರು ಯಾವುದೇ ಸಂದರ್ಭದಲ್ಲಿ , ಸಮಯದಲ್ಲಿ ಸಂಪರ್ಕಕ್ಕೆ ಸಿಗುತ್ತಾರೆ. ಉತ್ತಮ ರೀತಿಯಲ್ಲಿ ಸ್ಪಂದನೆ ದೊರಕುತ್ತದೆ. ಶಾಸಕರ ಅವಧಿಯಲ್ಲಿ ಸಾಕಷ್ಟು ಅಭಿವೃದ್ಧಿ ಕಾರ್ಯ ನಡೆಸಿದ್ದಾರೆ. ಆದರೂ ಇನ್ನೂ ಹಲವು ಕೆಲಸಗಳು ಕ್ಷೇತ್ರದಲ್ಲಿ ನಡೆಯಬೇಕು.
ಪ್ರಮುಖವಾಗಿ ರಸ್ತೆ ಅಭಿವೃದ್ಧಿ ಆಗಬೇಕಿದೆ. ಬಡವರಿಗೆ ಸೂರು ಒದಗಿಸಬೇಕು, ಕೆರೆಗಳ ಅಭಿವೃದ್ಧಿ ಆಗಬೇಕು.
 ಎಸ್‌.ಕೆ. ಮಯೂರ್‌, ಅರಹತೋಳಲು ತಳ್ಳಿಕಟ್ಟೆ

ಶುದ್ಧ ಕುಡಿಯುವ ನೀರಿನ ಸಮಸ್ಯೆಯಿದೆ. ಮೂಲ ಸೌಕರ್ಯ ಕೊರತೆ ಹೇರಳವಾಗಿದೆ. ರಸ್ತೆ, ಬೀದಿ ದೀಪ ಸಮಸ್ಯೆ ಕಂಡುಬಂದಿದೆ.
ಗ್ರಾಮಾಂತರ ಕ್ಷೇತ್ರದ ಶಾಸಕರು ಸಂಪರ್ಕಕ್ಕೆ ಸಿಗುತ್ತಾರೆ ಎಂಬುದು ನಿಜ. ಆದರೆ ನಿರೀಕ್ಷೆಯಂತೆ ಕ್ಷೇತ್ರದಲ್ಲಿ ಅಭಿವೃದ್ಧಿ ಕೆಲಸ ನಡೆದಿಲ್ಲ. ಅನೇಕ ಪ್ರದೇಶಗಳಿಗೆ ಬಸ್‌ ಸೌಲಭ್ಯವಿಲ್ಲದೆ ಜನರು ಇಂದು ಕೂಡ ತೊಂದರೆ ಅನುಭವಿಸುತ್ತಿದ್ದಾರೆ.
ಗ್ರಾಮೀಣ ಪ್ರದೇಶ ಆಗಿರುವುದರಿಂದ ಕೃಷಿಕರು ಹೆಚ್ಚಾಗಿದ್ದಾರೆ. ನೀರಿನ ಸಮಸ್ಯೆ ಕಂಡು ಬಂದಿದೆ.
 ಶ್ರೀನಿವಾಸ, ಚಿಕ್ಕಮಟ್ಟಿ

ಗೋಪಾಲ್‌ ಯಡಗೆರೆ

Advertisement

Udayavani is now on Telegram. Click here to join our channel and stay updated with the latest news.

Next