ಸಕಲೇಶಪುರ: ಯುವಕನೋರ್ವನ ತ್ರಿಕೋನ ಪ್ರೇಮ ಗ್ರಾಮಸ್ಥರನ್ನು ಪೇಚಿಗೆ ತಂದಿದ್ದು, ಅಂತಿಮವಾಗಿ ಯುವಕ ಪ್ರೀತಿಸಿದ್ದ ಇಬ್ಬರಲ್ಲಿ ಒಬ್ಬಳನ್ನು ಮದುವೆಯಾಗುವ ಮುಖಾಂತರ ಪ್ರಕರಣ ಸುಖಾಂತ್ಯ ಕಂಡಿದೆ.
ತಾಲೂಕಿನ ಹೆತ್ತೂರು ಗ್ರಾಮದ ರಾಜಕೀಯ ಮುಖಂಡರ ಮಗನೋರ್ವ ಅಕ್ಕಪಕ್ಕದೂರಿನ ಇಬ್ಬರು ಯುವತಿಯರನ್ನು ಏಕ ಕಾಲದಲ್ಲಿ ಪ್ರೀತಿ ಮಾಡುತ್ತಿದ್ದರು. ಆದರೆ ಮದುವೆಯಾಗುವ ಸಂದರ್ಭ ಬರುತ್ತಲೇ ಈ ತ್ರಿಕೋನ ಪ್ರೇಮ ಬದಲಾಗಿ ಹೋಗಿತ್ತು. ಇಬ್ಬರಲ್ಲಿ ಯಾರನ್ನು ನಾನು ಮದುವೆಯಾಗಲಿ ಎಂದು ಮದುಮಗ ಇಕ್ಕಟ್ಟಿಗೆ ಸಿಲುಕಿದರೆ, ಹುಡುಗಿಯರು ಮಾತ್ರ ನೀನು ನನ್ನನ್ನೇ ವರಿಸಬೇಕು ಎಂದು ಪಟ್ಟು ಹಿಡಿದಿದ್ದರು. ಪ್ರೇಮ ಕಗ್ಗಂಟಾಗಿ ಗ್ರಾಮಸ್ಥರು ಮಧ್ಯಪ್ರವೇಶ ಮಾಡಿದರು.
ಮೂವರನ್ನೂ ಕೂರಿಸಿ ಒಂದು ಹುಡುಗಿಯನ್ನು ಸಮಾಧಾನ ಪಡಿಸಲು ಶುರು ಮಾಡಿದರು. ಆದರೆ ಪಟ್ಟು ಬಿಡದ ಪ್ರೇಯಸಿಯರು ಮಾತ್ರ ಈ ಹುಡುಗ ನನಗೇ ಬೇಕು ಎಂದು ಹಠಕ್ಕೆ ಬಿದ್ದಿದ್ದರು. ಇದರಿಂದ ಬೇಸತ್ತ ಒಬ್ಬಳಂತೂ ಹುಡುಗ ಸಿಗದಿದ್ದರೆ ಬದುಕುವುದಿಲ್ಲವೆಂದು ವಿಷವನ್ನೆ ಕುಡಿದುಬಿಟ್ಟಳು.
ಇದನ್ನೂ ಓದಿ:ಸಚಿವರ ಕಾರ್ಯಕ್ರಮದಲ್ಲಿ ಹೈಡ್ರಾಮಾ: ಕೈ ಪ್ರತಿಭಟನೆ,ವೇದಿಕೆಯಿಂದ ಕೆಳಗಿಳಿದ ಪ್ರಸನ್ನ ಕುಮಾರ್!
ಈ ಹಿನ್ನೆಲೆಯಲ್ಲಿ ಸಂಧಾನಕಾರರು ಆಕೆಯನ್ನು ಆಸ್ಪತ್ರೆಗೆ ಸೇರಿಸಿದ್ದು ಹೇಗೋ ಆಕೆ ಪ್ರಾಣಾಪಾಯದಿಂದ ಪಾರಾಗಿ ಗುಣಮುಖವಾಗಿ ಬಂದ ಬಳಿಕ ಮತ್ತೆ ರಾಜೀ ಪಂಚಾಯ್ತಿ ಮಾಡಿದ್ದರು. ಆದರೆ ಸಮಸ್ಯೆ ಮಾತ್ರ ಬಗೆಹರಿದಿರಲಿಲ್ಲ.
ಗ್ರಾಮಸ್ಥರ ಹೊಸ ಆಲೋಚನೆ: ಈ ಪ್ರಕರಣದಿಂದ ಬೇಸತ್ತ ಊರಿನ ಮುಖಂಡರು, ಮೂರೂ ಕುಟುಂಬಕ್ಕೆ ವಾರ್ನಿಂಗ್ ಕೊಟ್ಟರು. ನಾವು ಈ ಪ್ರಕರಣ ಇತ್ಯರ್ಥ ಮಾಡ್ತೀವಿ, ಅದಕ್ಕೆ ನೀವು ಒಪ್ಪಬೇಕು ಎಂದರು. ಹುಡುಗನನ್ನು ಯಾರು ಮದುವೆಯಾಗಬೇಕು ಎಂದು ಟಾಸ್ ಹಾಕೋಣ, ಯಾರಿಗೆ ಅದೃಷ್ಟ ಇರುತ್ತೋ ಅವರು ಸತಿ-ಪತಿಗಳಾಗಲಿ ಎಂದು ತೀರ್ಮಾನಿಸಿದರು. ಟಾಸ್ ಆದ ಬಳಿಕ ಯಾರೂ ಮರು ಮಾತನಾಡೋ ಹಾಗಿಲ್ಲ, ಮತ್ತೆ ದೂರು ಕೊಡುವ ಹಾಗಿಲ್ಲ ಎಂದು ಮೂರೂ ಕಡೆಯವರಿಂದ ಅಗ್ರಿಮೆಂಟ್ ಕೂಡ ರೆಡಿಯಾಯಿತು. ಬಳಿಕ ಟಾಸ್ ಗೆ ದಿನ ನಿಗದಿಯಾಯಿತು.
ಟಾಸ್ ಹಾಕೋ ವೇಳೆಯಲ್ಲಿ ರೋಚಕ ತಿರುವು: ತ್ರಿಕೋನ ಪ್ರೇಮ ಸಿನಿಮೀಯ ರೀತಿಯಲ್ಲಿ ಕುತೂಹಲ ಮೂಡಿಸಿತ್ತು. ಶುಕ್ರವಾರ ಟಾಸ್ ಗೆ ಮುಹೂರ್ತ ಸಿದ್ಧ ಮಾಡಿದ ಹಿರಿಯರು ಎಲ್ಲರೂ ಒಂದೆಡೆ ಸೇರಿದರು. ಟಾಸ್ ಹಾಕಿದರೆ ಯಾರಿಗೆ ಅದೃಷ್ಟ ಒಲಿಯುತ್ತೆ ಎಂದು ಎಲ್ಲರಲ್ಲೂ ಕಾತರ ಇರುವಾಗ ಹುಡುಗ ಸೀದಾ ಅಲ್ಲಿಂದ ಓಡಿ ಹೋಗಿದ್ದಾನೆ. ನನಗಾಗಿ ವಿಷ ಕುಡಿದವಳೆ ನನ್ನ ಅರ್ಧಾಂಗಿ ಅಂದು ಬಿಟ್ಟಿದ್ದಾನೆ. ಇದೆಲ್ಲವನ್ನೂ ನೋಡುತ್ತಿದ್ದ ಇನ್ನೊಬ್ಬಳು ಸಿಟ್ಟಿಗೆದ್ದು ಪ್ರೇಮಿಗೆ ಕಪಾಳ ಮೋಕ್ಷ ಮಾಡಿ ಅಲ್ಲಿಂದ ಮರಳಿದ್ದಾಳೆ. ಅಲ್ಲಿಗೆ ವಾರಗಟ್ಟಲೆಯಿಂದ ಕಗ್ಗಂಟಾಗಿದ್ದ ಪ್ರಕರಣ ಹೀಗೆ ಕೊನೆಯಾಗಿದೆ.