Advertisement

ತಿರುವಿನೊಳಗೆ ತ್ರಿಕೋನ ಪ್ರೇಮ

06:14 PM Mar 16, 2018 | Team Udayavani |

“ಜೀವನ ಮಾಡೋಕೆ ದುಡ್ಡು ಬೇಕು… ಬರೀ ದುಡ್ಡಿನಿಂದ ಜೀವನ ಆಗೋದಿಲ್ಲ …’  ಈ ಡೈಲಾಗ್‌ ಬರುವ ಹೊತ್ತಿಗೆ ಒಂದು ಪ್ರೀತಿಯ ಕಥೆ ಶುರುವಾಗಿ, ಒಂದು ಕಾರಣಕ್ಕೆ ಅದು ಬ್ರೇಕಪ್‌ ಆಗಿ ಮತ್ತೆಲ್ಲೋ ಒಂದು ಹಂತಕ್ಕೆ ಹೋಗಿ ನಿಂತಿರುತ್ತೆ. ಅದು ಯಾವ ಹಂತಕ್ಕೆ ಹೋಗುತ್ತೆ, ಕೊನೆಗೆ ಏನಾಗುತ್ತೆ ಎಂಬುದೇ ಕಥೆಯ ಸಸ್ಪೆನ್ಸ್‌. ಒಂದು ಸಿಂಪಲ್‌ ಕಥೆ ಇಟ್ಟುಕೊಂಡು ಮನೋಜ್‌ ಮೊದಲ ಸಲ ನಿರ್ದೇಶನ ಮಾಡಿದ್ದಾರೆ. ಈಗಿನ ಯೂತ್ಸ್ ಲೈಫ್ ಹೇಗೆಲ್ಲಾ ಇರುತ್ತೆ.

Advertisement

ಅದರಲ್ಲೂ ಕೆಲ ಹುಡುಗಿಯರ ಕಲರ್‌ಫ‌ುಲ್‌ ಕನಸುಗಳು, ಆಸೆ-ಆಕಾಂಕ್ಷೆ, ಹುಡುಗರೊಳಗಿನ ಪ್ರೀತಿ, ನಲಿವು, ಭಾವನೆ ಮತ್ತು ತಲ್ಲಣಗಳನ್ನು ಸೂಕ್ಷ್ಮವಾಗಿ ಅಷ್ಟೇ ನೇರವಾಗಿ ತೋರಿಸುವ ಪ್ರಯತ್ನ ಮಾಡಿದ್ದಾರೆ ಮನೋಜ್‌. ಹಾಗಂತ, ಇಡೀ ಚಿತ್ರದಲ್ಲಿ ಪ್ರೀತಿಗಷ್ಟೇ ಜಾಗವಿದೆ ಅಂದುಕೊಳ್ಳುವಂತೆಯೂ ಇಲ್ಲ. ಇಲ್ಲೂ ಕಾಮಿಡಿ ಇದೆ, ಹೀರೋ ಬಿಲ್ಡಪ್‌ಗೆ ಎರಡು ಭರ್ಜರಿ ಫೈಟ್‌ಗಳಿವೆ. ಶಿಳ್ಳೆಗೆ ಕೆಲ ಪಂಚಿಂಗ್‌ ಡೈಲಾಗ್‌ಗಳೂ ಇವೆ.

ಇವೆಲ್ಲದರ ಜತೆಗೆ ಒಂದಷ್ಟು ಸೆಂಟಿಮೆಂಟ್‌, ಹಿಡಿಯಷ್ಟು ಭಾವುಕ ಅಂಶಗಳು ಚಿತ್ರದ ಹೈಲೆಟ್‌. ಮೊದಲರ್ಧ ಪ್ರೀತಿ, ಗೀತಿ ಇತ್ಯಾದಿಯಲ್ಲೇ ಸಾಗುವ ಕಥೆ, ದ್ವಿತಿಯಾರ್ಧದಲ್ಲೊಂದು ತಿರುವು ಪಡೆದುಕೊಳ್ಳುತ್ತೆ. ಆ ಮಹಾತಿರುವೇ ಚಿತ್ರದ ಪ್ಲಸ್‌ ಪಾಯಿಂಟ್‌. ಆ ತಿರುವಿನ ಬಗ್ಗೆ ಕುತೂಹಲವಿದ್ದರೆ, ಪ್ರೀತಿ ಮಾಡೋರು, ಮಾಡಲು ರೆಡಿಯಾಗಿರೋರು, ಪ್ರೀತಿ ಮೇಲೆ ನಂಬಿಕೆ ಇರೋರು, ಇಲ್ಲದೋರು ಒಮ್ಮೆ “ಓ ಪ್ರೇಮವೇ’ ನೋಡಲ್ಲಡ್ಡಿಯಿಲ್ಲ. ಅವಳು ಅಂಜಲಿ. ಮಿಡ್ಲ್ಕ್ಲಾಸ್‌ ಹುಡುಗಿ. ಅವನು ರಾಹುಲ್‌. ಒಬ್ಬ ಕಾರ್‌ ಡೀಲರ್‌.

ಅವಳಿಗೆ ಲೈಫ‌ಲ್ಲಿ ದೊಡ್ಡ ಶ್ರೀಮಂತ ಹುಡುಗನನ್ನೇ ಮದುವೆಯಾಗಿ ಸೆಟ್ಲ ಆಗಬೇಕೆಂಬ ಆಸೆ. ದಿನಕ್ಕೊಂದು ಅದ್ಧೂರಿ ಕಾರಿನಲ್ಲಿ ಓಡಾಡುವ ರಾಹುಲ್‌ ಅವಳ ಕಣ್ಣಿಗೆ ಬೀಳುವುದೇ ತಡ, ಅವನನ್ನು ಪ್ರೀತಿಸಿ, ಮದುವೆ ಆಗಬೇಕೆಂಬ ಯೋಚನೆ ಅವಳದು. ಪ್ರೀತಿಗೆ ಕಾರಣವೇನೂ ಬೇಕಿಲ್ಲ. ಹಾಗೇ ಇಬ್ಬರ ನಡುವೆ ಪ್ರೀತಿ ಶುರುವಾಗಿ, ಪ್ರೀತಿಯ ಹೆಸರಲ್ಲಿ ಇಬ್ಬರೂ ಹಾಡಿ-ಕುಣಿದು ಖುಷಿಯಾಗಿರುವ ಹೊತ್ತಿಗೆ, ಆ ಪ್ರೀತಿಯ ಕಣ್ಣಿಗೆ, ಅವನು ಅದ್ಧೂರಿ ಕಾರುಗಳ ಮಾಲೀಕ ಅಲ್ಲ, ಕೇವಲ ಕಾರ್‌ ಡೀಲರ್‌ ಅಂತ ಗೊತ್ತಾದಾಗ, ಅವಳು ಅವನಿಂದ ದೂರವಾಗುತ್ತಾಳೆ.

ಆ ನೋವಲ್ಲೇ ರಾಹುಲ್‌ ಕುಡಿತಕ್ಕೆ ದಾಸನಾಗುತ್ತಾನೆ. ಒಂದು ಹಂತದಲ್ಲಿ ಅವನ ಎದುರು ಶ್ರೀಮಂತ ಹುಡುಗಿಯ ಎಂಟ್ರಿಯಾಗುತ್ತೆ. ಆಮೇಲೆ ಏನಾಗುತ್ತೆ ಎಂಬುದೇ ಕಥೆಯ ತಿರುಳು. ಮೊದಲೇ ಹೇಳಿದಂತೆ ಕಥೆ ಸರಳ. ನಿರೂಪಣೆಯಲ್ಲಿ ಇನ್ನಷ್ಟು ಬಿಗಿ ಹಿಡಿತ ಇರಬೇಕಿತ್ತು. ಆದರೂ, ಕೆಲ ಸಣ್ಣಪುಟ್ಟ ತಪ್ಪುಗಳನ್ನು ಚಿತ್ರದೊಳಗಿನ ಹಾಡುಗಳು ಮತ್ತು ಅಲ್ಲಿ ಕಾಣಸಿಗುವ ಸುಂದರ ತಾಣಗಳು ಮರೆ ಮಾಚುತ್ತವೆ. ಪ್ರೀತಿಗೆ ಬಿದ್ದವರು, ಪ್ರೀತಿಗೆ ಬೀಳಬೇಕೆಂದಿರುವವರು ಅರಿತುಕೊಳ್ಳಬೇಕಾದ ಅಂಶಗಳು ಇಲ್ಲಿ ಸಾಕಷ್ಟಿವೆ.

Advertisement

ಕೆಲವು ಕಡೆ ಸಿನಿಮಾ ಇನ್ನೇನು ಹಳಿತಪ್ಪಿ ಹೋಗುತ್ತಿದೆ ಎನ್ನುವಷ್ಟರಲ್ಲೇ, ಕಿವಿಗೆ ಇಂಪೆನಿಸುವ, ಕಣ್ಣಿಗೆ ತಂಪೆನಿಸುವ ದೃಶ್ಯಾವಳಿಯ ಹಾಡೊಂದು ಕಾಣಿಸಿಕೊಂಡು, ಮತ್ತದೇ ಟ್ರಾಕ್‌ಗೆ ಬಂದು ನಿಲ್ಲುತ್ತೆ. ಇಲ್ಲಿ ವಿನಾಕಾರಣ ಹಾಸ್ಯ ಕಾಣಿಸಿಕೊಂಡು ನೋಡುಗನ ತಾಳ್ಮೆ ಪರೀಕ್ಷಿಸುವುದು ಸುಳ್ಳಲ್ಲ. ಅತಿಯಾದ ಹಾಸ್ಯಕ್ಕೆ ಸ್ವಲ್ಪ ಕತ್ತರಿ ಹಾಕಬಹುದಿತ್ತು. ಹಾಸ್ಯಕ್ಕೆ ಕೊಟ್ಟ ಆದ್ಯತೆ, ಕೆಲ ಪಾತ್ರಗಳಿಗೆ ಕೊಟ್ಟಿದ್ದರೆ, ಪರಿಪೂರ್ಣ ಎನಿಸುತ್ತಿತ್ತು.

ಆ ಪ್ರಯತ್ನ ಇಲ್ಲಿ ಆಗಿಲ್ಲ. ಇದನ್ನು ಹೊರತುಪಡಿಸಿದರೆ, ನೈಸ್‌ ರಸ್ತೆಯಲ್ಲಿ ದಿಢೀರ್‌ ಹಂಪ್ಸ್‌ ಬಂದಂತೆ, “ತ್ರಿಕೋನ’ ಪ್ರೇಮಕಥೆಯಲ್ಲೂ ದಿಢೀರ್‌ ಏರಿಳಿತಗಳು ಕಾಣಸಿಗುತ್ತವೆ. ಅವು ಯಾಕೆ ಬರುತ್ತವೆ ಎಂಬುದಕ್ಕೊಂದು ಸ್ಪಷ್ಟನೆ ಕೊಡುವ ಪ್ರಯತ್ನವನ್ನೂ ಇಲ್ಲಿ ಮಾಡಲಾಗಿದೆ. ಒಂದಷ್ಟು ತಪ್ಪು-ಸರಿಗಳ ಮಧ್ಯೆ ಪ್ರೇಮಿಗಳ ನಿಜವಾದ ಪ್ರೀತಿ, ನೋವು, ತಳಮಳ, ಗೆಳೆತನ, ಸ್ವಾರ್ಥ, ನಿಸ್ವಾರ್ಥ, ನಂಬಿಕೆ, ಅಪನಂಬಿಕೆಗಳ ಜೊತೆಗೆ ಪ್ರೀತಿಯ ರಂಗಿನಾಟವನ್ನು ಇಲ್ಲಿ ತೋರಿಸಲಾಗಿದೆ.

ಆ ಕಾರಣಕ್ಕೆ, “ಓ ಪ್ರೇಮವೇ’ ಒಂದು ಯೂಥ್‌ಫ‌ುಲ್‌ ಸಿನಿಮಾ ಎನ್ನಲ್ಲಡ್ಡಿಯಿಲ್ಲ. ಮನೋಜ್‌ ತೆರೆಯ ಮೇಲೆ ಡೈಲಾಗ್‌ ಡೆಲವರಿ ಜೊತೆಗೆ ಡ್ಯಾನ್ಸ್‌, ಫೈಟ್‌ನಲ್ಲಿ ಇಷ್ಟವಾಗುತ್ತಾರೆ. ನಿಕ್ಕಿ ಸಿಕ್ಕ ಪಾತ್ರವನ್ನು ಚೆನ್ನಾಗಿ ನಿರ್ವಹಿಸಿದ್ದಾರೆ. ಅಪೂರ್ವ ಕೂಡ ಇದ್ದಷ್ಟೂ ಕಾಲ ಇಷ್ಟವಾಗುತ್ತಾರೆ. ರಂಗಾಯಣ ರಘು ಕಂಜೂಸ್‌ ಅಪ್ಪನಾಗಿ, ಅಲ್ಲಲ್ಲಿ ಭಾವುಕತೆಯಿಂದ ಗಮನಸೆಳೆಯುತ್ತಾರೆ. ಎಂದಿನಂತೆ ಸಾಧು ಕೋಕಿಲ ಅವರ ಕಾಮಿಡಿ ಪರ್ವ ಇಲ್ಲಿ ಮುಂದುವರೆದಿದ್ದರೂ, ಹೆಚ್ಚು ವರ್ಕೌಟ್‌ ಆಗಿಲ್ಲ.  

ಹುಚ್ಚ ವೆಂಕಟ್‌ ಸ್ವಲ್ಪ ಹೊತ್ತು ಕಾಣಿಸಿಕೊಂಡರೂ ಆಫ್ಸ್ಕ್ರೀನ್‌ ದಾಳಿಯನ್ನು ಆನ್‌ಸ್ಕ್ರೀನ್‌ನಲ್ಲೂ ಮುಂದುವರೆಸಿ, ಚಪ್ಪಾಳೆ ಗಿಟ್ಟಿಸಿಕೊಳ್ಳುತ್ತಾರೆ. ಪ್ರಶಾಂತ್‌ ಸಿದ್ದಿ, ಬುಲೆಟ್‌ ಪ್ರಕಾಶ್‌ ಇತರೆ ಕಲಾವಿದರು ಕೊಟ್ಟ ಪಾತ್ರವನ್ನು ಅಚ್ಚುಕಟ್ಟಾಗಿ ನಿರ್ವಹಿಸಿದ್ದಾರೆ. ಆನಂದ್‌-ರಾಹುಲ್‌ ಸಂಗೀತದಲ್ಲಿ ಎರಡು ಹಾಡುಗಳು ಗುನುಗುವಂತಿವೆ. ಕೆ.ಎಂ. ಪ್ರಕಾಶ್‌ ಅವರ ಸಂಕಲನ ವೇಗಕ್ಕೊಂದು ದಾರಿಯಾಗಿದೆ. ಕಿರಣ್‌ ಹಂಪಾಪುರ ಕ್ಯಾಮೆರಾ ಕಣ್ಣಲ್ಲಿ ಸ್ವಿಜ್ಜರ್‌ಲೆಂಡ್‌ ಸೌಂದರ್ಯ ಖುಷಿಕೊಡುತ್ತದೆ.

ಚಿತ್ರ: ಓ ಪ್ರೇಮವೇ
ನಿರ್ಮಾಣ: ಸಿ.ಟಿ.ಚಂಚಲ ಕುಮಾರಿ
ನಿರ್ದೇಶನ: ಮನೋಜ್‌
ತಾರಾಗಣ: ಮನೋಜ್‌ ಕುಮಾರ್‌, ನಿಕ್ಕಿ, ಅಪೂರ್ವ, ರಂಗಾಯಣ ರಘು, ಸಂಗೀತ, ಸಾಧು ಕೋಕಿಲ, ಪ್ರಶಾಂತ್‌ ಸಿದ್ದಿ, ಹುಚ್ಚವೆಂಕಟ್‌ ಮುಂತಾದವರು

* ವಿಜಯ್‌ ಭರಮಸಾಗರ

Advertisement

Udayavani is now on Telegram. Click here to join our channel and stay updated with the latest news.

Next