78ನೇ ಸ್ವಾತಂತ್ರ್ಯೋತ್ಸವಕ್ಕೆ ಇಡೀ ದೇಶವೇ ಸಜ್ಜುಗೊಳ್ಳುತ್ತಿದೆ. ಪ್ರತಿ ಮನೆಯಲ್ಲೂ ಅವರದ್ದೇ ಆದ ರೀತಿಯಲ್ಲಿ ದೇಶಭಕ್ತಿಯನ್ನು ತೋರಿಸುವ ಮೂಲಕ ಸ್ವಾತಂತ್ರ್ಯ ದಿನವನ್ನು ಆಚರಿಸಿಕೊಳ್ಳುತ್ತಾರೆ, ಹಾಗಾಗಿ ನಾವು ಈ ಬಾರಿ ತಿರಂಗಾ ಥೀಮ್ ಬಳಸಿ ಬೆಳಗಿನ ಉಪಹಾರಕ್ಕೆ ಇಡ್ಲಿ ತಯಾರಿಸುವ ಸರಳ ವಿಧಾನ ಹೇಳುತ್ತೇವೆ… ಮತ್ಯಾಕೆ ತಡ ಈ ಬಾರಿಯ ಸ್ವಾತಂತ್ರ್ಯ ದಿನಾಚರಣೆಯ ದಿನ ನೀವು ಮನೆಯಲ್ಲಿ ಈ ಖಾದ್ಯಗಳನ್ನು ಮಾಡಿ ಸವಿಯಿರಿ .
ಬೇಕಾಗುವ ಸಾಮಗ್ರಿಗಳು
ಬೆಳ್ತಿಗೆ ಅಕ್ಕಿ-2 ಕಪ್, ಉದ್ದಿನ ಬೇಳೆ -1ಕಪ್, ಜೀರಿಗೆ ಸ್ವಲ್ಪ, ಮೆಂತೆ-1 ಟೀ ಸ್ಪೂನ್, ಕೊತ್ತಂಬರಿ ಸೊಪ್ಪು ಅಥವಾ ಪಾಲಕ್ ಸೊಪ್ಪು-1 ಕಟ್ಟು, ಶುಂಠಿ-ಸ್ವಲ್ಪ, ಕ್ಯಾರೆಟ್-1(ಸಣ್ಣಗೆ ಹೆಚ್ಚಿದ್ದು), ರುಚಿಗೆ ತಕ್ಕಷ್ಟು ಉಪ್ಪು.
ತಯಾರಿಸುವ ವಿಧಾನ
ಮೊದಲಿಗೆ ಉದ್ದಿನಬೇಳೆ ಮತ್ತು ಮೆಂತೆಯನ್ನು ಒಂದು ಪಾತ್ರೆಯಲ್ಲಿ ಹಾಕಿ, ಹಾಗೆಯೇ ಅಕ್ಕಿಯನ್ನು ಇನ್ನೊಂದು ಪಾತ್ರೆಗೆ ಹಾಕಿ 6 ರಿಂದ 8 ಗಂಟೆಗಳ ಕಾಲ ನೀರಿನಲ್ಲಿ ನೆನೆಸಿಡಿ. ನಂತರ ನೆನೆಸಿಟ್ಟ ಉದ್ದಿನಬೇಳೆ ಹಾಗೂ ಮೆಂತೆಯನ್ನು ಮಿಕ್ಸಿ ಜಾರಿಗೆ ಹಾಕಿ ಸ್ವಲ್ಪ ನೀರನ್ನು ಸೇರಿಸಿ ನುಣ್ಣಗೆ ರುಬ್ಬಿಕೊಳ್ಳಿ. ನಂತರ ಒಂದು ಪಾತ್ರೆಗೆ ಹಾಕಿ. ತದನಂತರ ನೆನೆಸಿದ ಅಕ್ಕಿಯನ್ನು ಮಿಕ್ಸಿ ಜಾರಿಗೆ ಹಾಕಿ ಸ್ವಲ್ಪ ನೀರನ್ನು ಸೇರಿಸಿ ತರಿತರಿಯಾಗಿ ರುಬ್ಬಿ, ಬೇಳೆ ಹಿಟ್ಟಿನ ಪಾತ್ರೆಗೆ ಹಾಕಿ, ಕೈಯಿಂದ ಚೆನ್ನಾಗಿ ಕಲಸಿ ರುಚಿಗೆ ತಕ್ಕಷ್ಟು ಉಪ್ಪನ್ನು ಸೇರಿಸಿ ಪಾತ್ರೆಯ ಮುಚ್ಚಳವನ್ನು ಮುಚ್ಚಿ 7 ರಿಂದ 8 ಗಂಟೆಗಳ ಕಾಲ ಹುದುಗಲು ಬಿಡಿ.
ತದನಂತರ (ಕೇಸರಿ ಬಣ್ಣಕ್ಕೆ) ಒಂದು ಮಿಕ್ಸಿ ಜಾರಿಗೆ ಕ್ಯಾರೆಟ್ ಮತ್ತು ಶುಂಠಿಯನ್ನು ಹಾಕಿ ನಯವಾಗಿ ರುಬ್ಬಿಕೊಳ್ಳಿ. ಹಾಗೆಯೇ (ಹಸಿರು ಬಣ್ಣಕ್ಕೆ) ಮಿಕ್ಸಿ ಜಾರಿಗೆ ಕೊತ್ತಂಬರಿ ಸೊಪ್ಪು ಅಥವಾ ಪಾಲಕ್ ಸೊಪ್ಪನ್ನು ಮತ್ತು ಜೀರಿಗೆಯನ್ನು ಹಾಕಿ ನುಣ್ಣಗೆ ರುಬ್ಬಿಕೊಳ್ಳಿ. ಈಗ ಮಾಡಿಟ್ಟ ಇಡ್ಲಿ ಹಿಟ್ಟನ್ನು 3 ಬೌಲ್ ಗೆ ವಿಂಗಡನೆ ಮಾಡಿ ಅದರಲ್ಲಿ ಒಂದು ಬೌಲ್ ಗೆ ರುಬ್ಬಿಟ್ಟ ಕ್ಯಾರೆಟ್ ಹಾಗೂ ಇನ್ನೊಂದು ಬೌಲ್ ಗೆ ಕೊತ್ತಂಬರಿ ಸೊಪ್ಪಿನ ಮಿಶ್ರಣವನ್ನು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ . ನಂತರ ಇಡ್ಲಿ ತಟ್ಟೆಗಳಿಗೆ ಎಣ್ಣೆಯನ್ನು ಸವರಿ ಮೊದಲಿಗೆ ಕೇಸರಿ ಬಣ್ಣದ ಹಿಟ್ಟನ್ನು ಹಾಕಿ, ನಂತರ ಬಿಳಿ ಬಣ್ಣದ ಇಡ್ಲಿ ಹಿಟ್ಟನ್ನು ಹಾಕಿ ಆಮೇಲೆ ಹಸಿರು ಬಣ್ಣದ ಇಡ್ಲಿ ಹಿಟ್ಟನ್ನು ಹಾಕಿ, ಸುಮಾರು 25 ರಿಂದ 30 ನಿಮಿಷಗಳ ಕಾಲ ಇಡ್ಲಿಯನ್ನು ಹಬೆಯಲ್ಲಿ ಬೇಯಿಸಿರಿ. ಈಗ ರುಚಿಕರವಾದ ತಿರಂಗಾ ಥೀಮ್ ನ ಇಡ್ಲಿ ಚಟ್ನಿಯೊಂದಿಗೆ ಸವಿಯಲು ಸಿದ್ದ.
-ಶ್ರೀರಾಮ್ ಜಿ. ನಾಯಕ್