ಟ್ರಿನಿಡಾಡ್: ಈ ಬಾರಿಯ ಟಿ20 ವಿಶ್ವಕಪ್ ನಲ್ಲಿ ಬಲಿಷ್ಠ ನ್ಯೂಜಿಲ್ಯಾಂಡ್ ತಂಡವು ಗುಂಪು ಹಂತದಲ್ಲಿಯೇ ಸೋತು ಕೂಟದಿಂದ ಹೊರಬಿದ್ದಿದೆ. ಶನಿವಾರ ಬೆಳಗ್ಗೆ ಉಗಾಂಡ ವಿರುದ್ದ ಗೆದ್ದರೂ, ಮುಂದಿನ ಹಂತಕ್ಕೆ ತೇರ್ಗಡೆಯಾಗಲು ಕಿವೀಸ್ ಗೆ ಸಾಧ್ಯವಿಲ್ಲ. ಸಿ ಗುಂಪಿನಲ್ಲಿ ಈಗಾಗಲೇ ವೆಸ್ಟ್ ಇಂಡೀಸ್ ಮತ್ತು ಅಫ್ಘಾನಿಸ್ತಾನ ತಂಡಗಳು ಸೂಪರ್ 8 ಗೆ ಪ್ರವೇಶ ಪಡೆದಿದೆ.
ಕಿವೀಸ್ ನ ಹಿರಿಯ ಬೌಲರ್ ಟ್ರಂಟ್ ಬೌಲ್ಟ್ ಅವರು ಇದು ತನ್ನ ಕೊನೆಯ ಟಿ20 ವಿಶ್ವಕಪ್ ಎಂದು ಖಚಿತಪಡಿಸಿದ್ದಾರೆ. 2011ರಲ್ಲಿ ಕಿವೀಸ್ ತಂಡಕ್ಕೆ ಪದಾರ್ಪಣೆ ಮಾಡಿದ್ದ ಬೌಲ್ಟ್ ಅವರು 2014ರಿಂದ ಇದುವರೆಗೆ ನಾಲ್ಕು ಟಿ20 ವಿಶ್ವಕಪ್ ಗಳಲ್ಲಿ ಆಡಿದ್ದಾರೆ.
“ನನ್ನ ಬಗ್ಗೆ ಹೇಳುವುದಾದರೆ, ಇದು ನನ್ನ ಕೊನೆಯ ಟಿ20 ವಿಶ್ವಕಪ್ ಆಗಿರುತ್ತದೆ. ನಾನು ಇಷ್ಟೇ ಹೇಳಬಹುದು” ಎಂದು ಬೌಲ್ಟ್ ಉಗಾಂಡ ವಿರುದ್ದದ ಪಂದ್ಯದ ಬಳಿಕ ಹೇಳಿದರು.
ನ್ಯೂಜಿಲ್ಯಾಂಡ್ ತಂಡವು ಗ್ರೂಪ್ ಹಂತದ ಕೊನೆಯ ಪಂದ್ಯದಲ್ಲಿ ಪಪುವಾ ನ್ಯೂಗಿನಿ ವಿರುದ್ದ ಆಡಲಿದೆ. ಜೂನ್ 17ರಂದು ಈ ಪಂದ್ಯ ನಡೆಯಲಿದೆ. ಇದು ಟ್ರೆಂಟ್ ಬೌಲ್ಟ್ ಅವರ ಕೊನೆಯ ಟಿ20 ವಿಶ್ವಕಪ್ ಪಂದ್ಯವಾಗಲಿದೆ.
“ಡ್ರೆಸ್ಸಿಂಗ್ ರೂಮ್‌ನಲ್ಲಿ ಮತ್ತು ದೇಶಕ್ಕಾಗಿ ಆಡುವಲ್ಲಿ ಬಹಳಷ್ಟು ಹೆಮ್ಮೆಯಿದೆ, ನಾವು ಹಲವು ವರ್ಷಗಳಿಂದ ಕೆಲವು ಉತ್ತಮ ದಾಖಲೆಗಳನ್ನು ಹೊಂದಿದ್ದೇವೆ. ದುರದೃಷ್ಟವಶಾತ್ ನಾವು ಕಳೆದ ಎರಡು ವಾರಗಳಿಂದ ಉತ್ತಮ ಕ್ರಿಕೆಟ್ ಆಡುತ್ತಿಲ್ಲ” ಎಂದರು.
ಬೌಲ್ಟ್ ನ್ಯೂಜಿಲ್ಯಾಂಡ್ ಗಾಗಿ ಆಡುವುದನ್ನು ಮುಂದುವರಿಸುತ್ತಾರೆಯೇ ಎನ್ನುವುದು ಅನಿಶ್ಚಿತವಾಗಿದೆ. ಅವರು 2022 ರಲ್ಲಿ ಕೇಂದ್ರೀಯ ಒಪ್ಪಂದದಿಂದ ಹೊರಗುಳಿದಿದ್ದರು, ಅದರ ಬದಲಿಗೆ ವಿಶ್ವದಾದ್ಯಂತ ಟಿ20 ಫ್ರಾಂಚೈಸ್ ಕ್ರಿಕೆಟ್ ಆಡಲು ಆಯ್ಕೆ ಮಾಡಿದರು.