ಎ.ಪಿ.ಅರ್ಜುನ್ “ಕಿಸ್’ ಎಂಬ ಸಿನಿಮಾ ನಿರ್ದೇಶಿಸುತ್ತಿರುವ ವಿಚಾರ ನಿಮಗೆ ಗೊತ್ತೆ ಇದೆ. ಆ ಸಿನಿಮಾ ಏನಾಯಿತು ಎಂದು ಕೇಳುತ್ತಿರುವ ಹೊತ್ತಿಗೆ ಚಿತ್ರದ ಹಾಡೊಂದು ಸದ್ದು ಮಾಡುತ್ತಿದೆ. ಅದು “ಶೀಲಾ ಸುಶೀಲಾ …’. “ಕಿಸ್’ ಚಿತ್ರದ “ಶೀಲಾ ಸುಶೀಲಾ’ ಹಾಡು ಬಿಡುಗಡೆಯಾಗಿದ್ದು, ಹಾಡಿಗೆ ಮೆಚ್ಚುಗೆ ವ್ಯಕ್ತವಾಗಿದೆ. ಈ ಖುಷಿಯಲ್ಲೇ ಚಿತ್ರತಂಡ ಮಾಧ್ಯಮದ ಮುಂದೆ ಬಂದಿದೆ. ನಿರ್ದೇಶಕ ಅರ್ಜುನ್ ಖುಷಿಯಾಗಿದ್ದರು. ಸಿನಿಮಾ ತಡವಾದರೂ ಚೆನ್ನಾಗಿ ಮೂಡಿಬಂದ ಖುಷಿ ಅವರಲ್ಲಿತ್ತು. “ಸಿನಿಮಾ ತಡವಾಗಲು ನಾನಾ ಕಾರಣ, ನಾಯಕಿಯ ಎಕ್ಸಾಂ, ಲೊಕೇಶನ್, ನಾಯಕ ಕಾಲಿಗೆ ಏಟು ಜೊತೆಗೆ ನಿರ್ಮಾಪಕರ ಚುನಾವಣಾ ಓಡಾಟ. ಜೊತೆಗೆ ನಾವು ಹೊಸಬರನ್ನಿಟ್ಟುಕೊಂಡು ಸಿನಿಮಾ ಮಾಡುತ್ತಿರುವುದರಿಂದ ರಿಹರ್ಸಲ್ ಮಾಡಿಯೇ ಶೂಟಿಂಗ್‌ಗೆ ಹೋಗುತ್ತಿದ್ದೆವು. ಆದರೆ ಸಿನಿಮಾ ಚೆನ್ನಾಗಿ ಮೂಡಿಬಂದಿದೆ. ಇವತ್ತಿನ ಟ್ರೆಂಡ್‌ಗೆ ತಕ್ಕಂತಹ ಸಿನಿಮಾ’ ಎನ್ನುವುದು ಅರ್ಜುನ್ ಮಾತು. ಚಿತ್ರದ ಕಥೆಯ ಬಗ್ಗೆ ಮಾತನಾಡುವ ಅರ್ಜುನ್, “”ಕಿಸ್’ ಒಂದು ಕಲರ್‌ಫುಲ್ ಜರ್ನಿ. 18ರ ಹುಡುಗಿ 21ರ ಹುಡುಗರು ಲವ್ ಬಗ್ಗೆ ಹೇಗಿರುತ್ತಾರೆ, ಅವರ ನಡುವಿನ ಸಣ್ಣ ಸಣ್ಣ ಕಿತ್ತಾಟ, ಮುನಿಸು, ಎಕ್ಸೆ„ಟ್‌ಮೆಂಟ್, ಬ್ರೇಕಪ್, ಚಾಟಿಂಗ್ … ಇಂತಹ ಅಂಶಗಳೊಂದಿಗೆ ಈ ಸಿನಿಮಾ ಸಾಗುತ್ತದೆ. ಹಿಂದೆಲ್ಲಾ ಲವ್ ಎಂದರೆ ಹುಡುಗಿ ಹಿಂದೆ ತಿಂಗಳುಗಟ್ಟಲೇ ಸುತ್ತಾಡಿ, ಅವಳ ಗೆಳತಿಯನ್ನು ಫ್ರೆಂಡ್ ಮಾಡಿಕೊಂಡು, ಅವಳ ಕೈಯಲ್ಲಿ ಲವ್‌ಲೆಟರ್ ಕೊಡಬೇಕಿತ್ತು. ಆದರೆ, ಈಗ ಎಲ್ಲವೂ ಬದಲಾಗಿದೆ. ಬೆಳಗ್ಗೆ ಫ್ರೆಂಡ್ ರಿಕ್ವೆಸ್ಟ್. ಮಧ್ಯಾಹ್ನ ಫ್ರೆಂಡ್ಸ್. ಒಂದೆರಡು ದಿನ ಬಿಟ್ಟರೆ ಲವರ್ …. ಫೇಸ್‌ಬುಕ್, ವಾಟ್ಸಾಪ್ ಬಂದ ಮೇಲೆ ಎಲ್ಲವೂ ವೇಗವಾಗಿದೆ. ಇವತ್ತಿನ ಟ್ರೆಂಡಿ ಲವ್‌ಸ್ಟೋರಿಯಲ್ಲೂ ಒಂದಷ್ಟು ಮಂದಿ ಒಳ್ಳೆಯವರು ಇದ್ದಾರೆ. ಆ ತರಹದ ಲವ್‌ಸ್ಟೋರಿಯನ್ನು ಇಲ್ಲಿ ಹೇಳಿದ್ದೇನೆ’ ಎಂದು ಸಿನಿಮಾ ಬಗ್ಗೆ ವಿವರ ಕೊಡುತ್ತಾರೆ.
ಚಿತ್ರವನ್ನು ರಾಷ್ಟ್ರಕೂಟ ಪಿಕ್ಚರ್ನಡಿ ರವಿಕುಮಾರ್ ನಿರ್ಮಿಸಿದ್ದಾರೆ. ಕನ್ನಡದಲ್ಲಿ ಒಳ್ಳೆಯ ಸಿನಿಮಾ ಮಾಡಬೇಕೆಂಬ ಉದ್ದೇಶದಿಂದ “ಕಿಸ್’ ಮಾಡಿದ್ದಾಗಿ ಹೇಳಿಕೊಂಡರು. ಚಿತ್ರದಲ್ಲಿ ನಾಯಕರಾಗಿ ನಟಿಸಿರುವ ವಿರಾಟ್, ಮೊದಲ ಸಿನಿಮಾದ ಖುಷಿಯನ್ನು ಹಂಚಿಕೊಳ್ಳುವ ಜೊತೆಗೆ ಶ್ರೀಮಂತ ಹುಡುಗನಾಗಿ ನಟಿಸಿದ್ದಾಗಿ ಹೇಳಿದರು. ನಾಯಕಿ ಶ್ರೀಲೀಲಾ ಇಲ್ಲಿ ನಂದಿನಿ ಎಂಬ ಪಾತ್ರ ಮಾಡಿದ್ದಾರೆ. ಎಲ್ಲರೂ ಇಷ್ಟಪಡುವಂತಹ ಪಾತ್ರವಂತೆ. ಉಳಿದಂತೆ ಹಿರಿಯ ನಟರಾದ ದತ್ತಣ್ಣ, ಸುಂದರ್ ನಟಿಸಿದ್ದಾರೆ. ಚಿತ್ರಕ್ಕೆ ಇಮ್ರಾನ್ ಸರ್ದಾರಿಯಾ ನೃತ್ಯ ನಿರ್ದೇಶನವಿದೆ. ಅರ್ಜುನ್ ಶೆಟ್ಟಿ ಛಾಯಾಗ್ರಹಣ ಚಿತ್ರಕ್ಕಿದೆ.