ಮೈಸೂರು: ನಗರದಲ್ಲಿ ಗುಡುಗು, ಮಿಂಚು ಸಹಿತ ಸುರಿದ ಭಾರೀ ಮಳೆಗೆ ಹಲವೆಡೆ ಮರಗಳು, ವಿದ್ಯುತ್ ಕಂಬಗಳು ಧರೆಗುರುಳಿದ್ದು, 15ಕ್ಕೂ ಹೆಚ್ಚು ಮನೆಗಳಿಗೆ ನೀರು ನುಗ್ಗಿರುವ ಘಟನೆ ನಡೆದಿದೆ. ಸೋಮವಾರ ರಾತ್ರಿ 9 ಗಂಟೆಗೆ ಆರಂಭವಾದ ಜೋರು ಮಳೆ 1 ಗಂಟೆಗೂ ಹೆಚ್ಚು ಕಾಲ ಸುರಿದ ಪರಿಣಾಮ ನಗರದ ವಿವಿಧೆಡೆ 10ಕ್ಕೂ ಹೆಚ್ಚು ಮರಗಳು ಮನೆ, ವಾಹನ ಹಾಗೂ ವಿದ್ಯುತ್ ತಂತಿ ಮೇಲೆ ಉರುಳಿ ಬಿದ್ದಿವೆ. ಇದರಿಂದ ಸಾರ್ವಜನಿಕರು, ಪಾದಚಾರಿಗಳು ಪರದಾಡುವಂತಾಯಿತು.
ನಗರದ ವಿದ್ಯಾರಣ್ಯಪುರಂ, ವಿಜಯ ನಗರ 2ನೇ ಹಂತ, ರಾಜೀವ್‌ನಗರ ಸೇರಿದಂತೆ ಹಲವೆಡೆ ಮರಗಳು, ವಿದ್ಯುತ್ ಕಂಬಗಳು ಮುರಿದು ಬಿದ್ದ ಪರಿಣಾಮ ರಾತ್ರಿಯಿಂದ ವಿದ್ಯುತ್ ಕಡಿತಗೊಳಿಸಲಾಯಿತು. ವಿದ್ಯಾರಣ್ಯಪುರಂ ನಲ್ಲಿ ವಿದ್ಯುತ್ ಕಂಬದ ಮೇಲೆಯೇ ತೆಂಗಿನ ಮರ ಮುರಿದು ಬಿದ್ದ ಪರಿಣಾಮ ವಿದ್ಯುತ್ ಕಂಬವೂ ತುಂಡಾಗಿದ್ದು, ಅದೃಷ್ಟವಶಾತ್ ವಿದ್ಯುತ್ ಕಡಿತಗೊಂಡಿದ್ದರಿಂದ ಭಾರೀ ಅನಾಹುತ ತಪ್ಪಿದಂತಾಗಿದೆ.
ಇದಲ್ಲದೆ ಹುಣಸೂರು ಮುಖ್ಯರಸ್ತೆಯಲ್ಲಿರುವ ಡೀಸಿ ನಿವಾಸದ ಎದುರು 2 ಮರಗಳು, ಬಿಎಂಹೆಚ್ ಆಸ್ಪತ್ರೆ ಬಳಿ, ಲಲಿತ ಮಹಲ್ ರಸ್ತೆಯಲ್ಲಿ ಹಾಗೂ ರಾಜೀವ್‌ನಗರ, ಚಾಮರಾಜಪುರಂ ಸೇರಿದಂತೆ ಹಲವು ಬಡಾವಣೆಗಳಲ್ಲಿ ರಸ್ತೆ ಬದಿಯ ಮರಗಳು ಧರೆಗುರುಳಿವೆ.
ಮನೆಗಳಿಗೆ ನುಗ್ಗಿದ ನೀರು: ಮಳೆಗೆ ವಿಜಯನಗರ 2ನೇ ಹಂತದಲ್ಲಿ 15ಕ್ಕೂ ಹೆಚ್ಚು ಮನೆ, ಪಡುವಾರಹಳ್ಳಿಯಲ್ಲಿ 1 ಮನೆ, ವಿವಿ ಪುರಂನಲ್ಲಿರುವ ಮನೆಗಳಿಗೂ ಮಳೆ ನೀರು ನುಗ್ಗಿದ್ದು, ಸ್ಥಳೀಯ ನಿವಾಸಿಗಳಲ್ಲಿ ಆತಂಕ ಸೃಷ್ಟಿಸಿತು.
ಅಪಘಾತ: ಮಳೆಗೆ ಹುಣಸೂರು ಮುಖ್ಯ ರಸ್ತೆಯ ಜಲದರ್ಶಿನಿ ಎದುರು ಕಾರೊಂದು ರಸ್ತೆ ಡಿವೈಡರ್‌ಗೆ ಡಿಕ್ಕಿ ಹೊಡೆದು ಉರುಳಿ ಬಿದ್ದಿದ್ದು, ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ ಎಂದು ವಿವಿಪುರಂ ಸಂಚಾರ ಠಾಣೆ ಪೊಲೀಸರು ತಿಳಿಸಿದ್ದಾರೆ.