ಕೊಪ್ಪಳ: ಬರದನಾಡಿನಲ್ಲೊಂದು ಮೊಟ್ಟ ಮೊದಲ ಬಾರಿಗೆ ಅರಣ್ಯ ಇಲಾಖೆಯಿಂದ ಟ್ರೀ ಪಾರ್ಕ್ ಸಿದ್ಧಗೊಂಡಿದ್ದು, ಇನ್ನೇನು ಉದ್ಘಾಟನೆಗೆ ಕಾಯುತ್ತಿದೆ. ಸಾಲು ಮರದ ತಿಮ್ಮಕ್ಕನ ಹೆಸರಿನ ಈ ಪಾರ್ಕ್‌ನಲ್ಲಿ ಪರಿಸರ ಉಳಿಸಿ ಎನ್ನುವ ಜಗೃತಿ ಸಂದೇಶ, ವನ್ಯ ಜೀವಿಗಳ ಕಲಾಕೃತಿಗಳು ಜನರ ಕಣ್ಮನ ಸೆಳೆಯುತ್ತಿವೆ.
ಹೌದು, ಜಿಲ್ಲೆಯಲ್ಲಿ ಅರಣ್ಯ ಇಲಾಖೆಗೆ ಸಂಬಂಧಿಸಿದ ಸಾವಿರಾರು ಎಕರೆ ಪ್ರದೇಶದಲ್ಲಿ ಕಾಯ್ದಿಟ್ಟ ಹಾಗೂ ಸಂರಕ್ಷಿತ ಅರಣ್ಯವಿದೆ. ಈ ಮೊದಲು ಸರ್ಕಾರ ಇರುವ ಅರಣ್ಯವನ್ನು ಉಳಿಸಿಕೊಂಡು ಹೋಗಲು ಹರಸಾಹಸ ಮಾಡುತ್ತಿತ್ತು. ಆದರೂ ಅರಣ್ಯ ಪ್ರದೇಶ ಅನ್ಯರ ಹಾವಳಿಗೆ ತುತ್ತಾಗಿ ಗಿಡಗಳೆಲ್ಲವೂ ನಾಶವಾಗುತ್ತಿದ್ದವು. ಇದನ್ನು ಅವಲೋಕಿಸಿ ಅರಣ್ಯ ಪ್ರದೇಶದಲ್ಲಿಯೇ ಪಾರ್ಕ್ ವ್ಯವಸ್ಥೆ ಮಾಡಲು ಮುಂದಾಗಿ ಟ್ರೀ ಪಾರ್ಕ್ ನಿರ್ಮಿಸಲು ಸಜ್ಜಾಗಿದೆ.
ಕೊಪ್ಪಳ ತಾಲೂಕಿನ ಕಿರ್ಲೋಸ್ಕರ್ ಕಾರ್ಖಾನೆ ಸಮೀಪದಲ್ಲಿಯೇ 50 ಹೆಕ್ಟೇರ್ ಪ್ರದೇಶದಲ್ಲಿ ಟ್ರೀ ಪಾರ್ಕ್ ನಿರ್ಮಾಣ ಮಾಡಲಾಗುತ್ತಿದೆ. ಅರಣ್ಯ ಇಲಾಖೆಯು ಹಗಲಿರುಳು ಪಾರ್ಕ್‌ನಲ್ಲಿ ನಾನಾ ಬಗೆಯ ಸಸಿಗಳನ್ನು ನೆಟ್ಟು ಬೆಳೆಸುವ ಕಾರ್ಯದಲ್ಲಿ ತೊಡಗಿದೆ. ವಿವಿಧ ಭಾಗದಲ್ಲಿ ಕೆರೆಗಳನ್ನು ನಿರ್ಮಿಸಲಾಗಿದೆ. ರಸ್ತೆಗಳನ್ನು ನಿರ್ಮಾಣ ಮಾಡಲಾಗಿದೆ.
ಪಾರ್ಕ್‌ನಲ್ಲಿ ವಿಶೇಷತೆ ಏನು?: ಈ ಪಾರ್ಕ್‌ನಲ್ಲಿ ಮರ ಬೆಳೆಸಿ ಎನ್ನುವ ಜಾಗೃತಿಯ ಸಂದೇಶ ಬೀರುವ ಶಾಲಾ ಮಕ್ಕಳ ವಿವಿಧ ಕಲಾಕೃತಿಗಳಿವೆ. ಶಾಲಾ ಮಕ್ಕಳು ಮರವನ್ನು ಕಡಿಯಬೇಡಿ ಎಂದು ಗಿಡವನ್ನಿಡಿದು ಜನರಲ್ಲಿ ಜಾಗೃತಿ ಮೂಡಿಸುತ್ತಿವೆ. ಮರ ಕಡಿದರೆ ಭವಿಷ್ಯದಲ್ಲಿ ಮನುಕಲದ ಪರಿಸ್ಥಿತಿ ಏನಾಗಲಿದೆ ಎನ್ನವು ಎಚ್ಚರಿಕೆಯನ್ನೂ ನೀಡಲಾಗಿದೆ. ಜೊತೆಗೆ ಜಿಂಕೆ, ಆನೆ, ಸಿಂಹ, ಅನೆಗೊಂಡ, ಕರಡಿ, ಮೊಲ ಸೇರಿದಂತೆ ನಾನಾ ಬಗೆಯ ವನ್ಯ ಜೀವಿಗಳ ಸಂತತಿ ಉಳಿಸುವ ಹಾಗೂ ಯುವ ಪೀಳಿಗೆಯ ಗಮನ ಸೆಳೆಯುವ ಕಲಾಕೃತಿಗಳನ್ನು ಇಡಲಾಗಿದೆ. ಅಲ್ಲದೇ, ವರ್ಷ ಪೂರ್ತಿ ಹಸಿರಾಗಿರುವ ನಾನಾ ಬಗೆಯ ಗಿಡಗಳನ್ನು ನೆಟ್ಟು ಬೆಳೆಸಲಾಗುತ್ತಿದೆ.
ಬರದ ನಾಡಿನಲ್ಲಿ ಹಸಿರು ವನ: ಜಿಲ್ಲೆ ಮೊದಲೇ ಬರಪೀಡಿತ ಪ್ರದೇಶವಾಗಿದೆ. ಸತತ ಮಳೆಯ ಕೊರತೆಯಿಂದ ಹಸಿರು ಎನ್ನುವುದೇ ಜನರ ಕಣ್ಣಿಗೆ ಮರೆಯಾಗುತ್ತಿದೆ. ಇಂತಹ ನೆಲದಲ್ಲಿ ಹಸಿರು ಗಂಟೆ ಮೊಳಗಿಸಲು ಪರಿಸರದ ಬಗ್ಗೆ ಜನರಲ್ಲಿ ಜಾಗೃತಿ ತರಲು ಸರ್ಕಾರವು ಪ್ರತಿ ವಿಧಾನಸಭಾ ಕ್ಷೇತ್ರದಲ್ಲೂ ಅರಣ್ಯ ಇಲಾಖೆಯ ಮೂಲಕ ಟ್ರೀ ಪಾರ್ಕ್ ನಿರ್ಮಾಣಕ್ಕೆ ಸಜ್ಜಾಗಿದೆ. ಈ ಪಾರ್ಕಿಗೆ ಹೆಸರಾಂತ ಸಾಲು ಮರದ ತಿಮ್ಮಕ್ಕನ ಹೆಸರನ್ನಿಡಲು ಸರ್ಕಾರ ನಿರ್ಧರಿಸಿದೆ. ಜಿಲ್ಲೆಯಲ್ಲಿನ ಶಾಲಾ ಮಕ್ಕಳಿಗೆ ಪರಿಸರದ ಬಗ್ಗೆ ಕಾಳಜಿ ಮೂಡಿಸಲು ಹಾಗೂ ಅರಣ್ಯ ಪ್ರದೇಶ ತೋರಿಸಲು ಅಂತಹ ಯಾವುದೇ ಸುವ್ಯವಸ್ಥಿತ ವನ್ಯಧಾಮವಿಲ್ಲ. ಅನ್ಯ ಜಿಲ್ಲೆಗಳಿಗೆ ಪ್ರವಾಸ ಬೆಳೆಸಿ ಮಕ್ಕಳಿಗೆ ಕಾಡಿನ ಚಿತ್ರಣ ತೋರಿಸಬೇಕಾಗುತ್ತಿದೆ. ಆದರೆ ಇನ್ಮುಂದೆ ಜಿಲ್ಲೆಯಲ್ಲಿ ಅರಣ್ಯ ಇಲಾಖೆಯೇ ಪಾರ್ಕ್ ನಿರ್ಮಿಸಿ ಎಲ್ಲರಿಗೂ ಅವಕಾಶ ಕಲ್ಪಿಸಲಿದೆ. ಬರದ ನಾಡಿನಲ್ಲೊಂದು ವನ್ಯಧಾನ ತೆಲೆ ಎತ್ತಿರುವುದು ಎಲ್ಲರ ಗಮನ ಸೆಳೆಯುತ್ತಿದೆ.
ಸುಮಾರು 50 ಹೆಕ್ಟೇರ್ ಪ್ರದೇಶದಲ್ಲಿ ಟ್ರೀ ಪಾರ್ಕ್‌ನ್ನು ನಾವು ನಿರ್ಮಿಸಿದ್ದು, ಇದೇ ಆ.15 ರಂದು ಅರಣ್ಯ ಇಲಾಖೆ ಸಚಿವರು ಉದ್ಘಾಟನೆ ಮಾಡಲಿದ್ದಾರೆ. ಪಾರ್ಕ್‌ನಲ್ಲಿ ಪರಿಸರ ಸಂರಕ್ಷಣೆ ಕುರಿತು ಮಕ್ಕಳ ಕಲಾಕೃತಿಗಳ ಮೂಲಕ ಜಾಗೃತಿಯ ಸಂದೇಶ ನೀಡುವ ವ್ಯವಸ್ಥೆ ಮಾಡಿದೆ. ಅಲ್ಲದೇ, ವನ್ಯಜೀವಿಗಳ ಕಲಾಕೃತಿಗಳನ್ನು ಇಡಲಾಗಿದೆ.
ಎ.ಎಚ್. ಮುಲ್ಲಾ,
ವಲಯ ಅರಣ್ಯಾಧಿಕಾರಿ, ಕೊಪ್ಪಳ ವಿಭಾಗ
ದತ್ತು ಕಮ್ಮಾರ