ಪಡುಬಿದ್ರಿ: ತೆಂಕ ಎರ್ಮಾಳು ಕಂಞನ್‌ತೋಟ ಚಿಕ್ಕಿ ಪೂಜಾರ್ತಿ ಅವರ ಮನೆಯ ಹೆಂಚಿನ ಮಾಡಿಗೆ ಮಂಗಳವಾರ ಬೆಳಗ್ಗಿನ ವೇಳೆ ಗಾಳಿ ಮಳೆಗೆ ಭಾರೀ ಗಾತ್ರದ ಹೆರಿಬೋಗಿ (ಕರ್ಮಾರು) ಮರವೊಂದು ತುಂಡಾಗಿ ಬಿದ್ದು ಮನೆ ಸಂಪೂರ್ಣ ಹಾನಿಗೀಡಾಗಿದೆ. ಇಬ್ಬರು ಮಕ್ಕಳು ಮತ್ತು ಮಹಿಳೆ ಗಾಯಗೊಂಡಿದ್ದಾರೆ.
ಸ್ಥಳಕ್ಕೆ ಭೇಟಿ ನೀಡಿದ ಕಾಪು ಕಂದಾಯ ಪರಿವೀಕ್ಷಕ ರಾಮಕೃಷ್ಣ ನಾಯಕ್ ಹಾಗೂ ಗ್ರಾಮ ಲೆಕ್ಕಿಗ ಅರುಣ್ ಕುಮಾರ್ ಅವರು ಸುಮಾರು 3 ಲಕ್ಷ ರೂ. ನಷ್ಟ ಸಂಭವಿಸಿರುವುದಾಗಿ ಅಂದಾಜಿಸಿದ್ದಾರೆ.
ಏಳು ಮಂದಿ ವಾಸ: ಡಿಕ್ಲರೇಶನ್ ತಗಾದೆಯಿಂದಾಗಿ ನ್ಯಾಯಾಲಯದ ಮೆಟ್ಟಲೇರಿರುವ ಈ ಜಾಗದಲ್ಲಿ ಚಿಕ್ಕಿ ಪೂಜಾರ್ತಿ ಸಹಿತ ಏಳು ಮಂದಿ ವಾಸಿಸು ತ್ತಿದ್ದರು. ಮಣ್ಣಿನ ಇಟ್ಟಿಗೆಗಳ ಗೋಡೆ ಹೊಂದಿರುವ ಮನೆ ಇದಾಗಿದ್ದು ಮನೆಯ ಮಾಡು ಸಂಪೂರ್ಣ ನಾಶ ವಾಗಿದೆ. ಮನೆಯನ್ನು ಬಿಚ್ಚಿ ಪುನಾ ರಚಿಸಬೇಕಿದ್ದು ಗ್ರಾ.ಪಂ. ಈ ನಿಟ್ಟಿನಲ್ಲಿ ಸಹಕರಿಸುವುದಾಗಿ ಗ್ರಾ.ಪಂ. ಅಧ್ಯಕ್ಷೆ ಅರುಣಾಕುಮಾರಿ ಹೇಳಿದ್ದಾರೆ.
ಸದ್ಯ ಸಮೀಪದಲ್ಲೇ ಇರುವ ತಮ್ಮ ಸಂಬಂಧಿ ಬೇಬಿ ಪೂಜಾರ್ತಿ ಅವರ ಮನೆಯಲ್ಲಿ ವಾಸ್ತವ್ಯವಿರುವ ಈ ಕುಟುಂಬಕ್ಕೆ ಮಧ್ಯಾಹ್ನದೂಟದ ವ್ಯವಸ್ಥೆ ಯನ್ನು ತೆಂಕ ಗ್ರಾ.ಪಂ. ಅಧ್ಯಕ್ಷೆ ಅರುಣಾ ಕುಮಾರಿ ಹಾಗೂ ಪಿಡಿಒ ಅಶಾಲತಾ ಕಲ್ಪಿಸಿದ್ದಾರೆ. ಕೆಎಫ್‌ಡಿಸಿ ನಿರ್ದೇಶಕ ವೈ. ದೀಪಕ್ ಕುಮಾರ್ ಮನೆಯ ಬಳಿ ಇನ್ನೂ ಅಪಾಯ ಕಾರಿ ಯಾಗಿ ರುವ ಮರಗಳನ್ನು ಕಡಿಸಲು ಸೂಕ್ತ ವ್ಯವಸ್ಥೆಯನ್ನು ಮಾಡಿದ್ದಾರೆ.
ಜಿ.ಪಂ. ಸದಸ್ಯ ಶಶಿಕಾಂತ್ ಪಡು ಬಿದ್ರಿ, ತಾ.ಪಂ. ಸದಸ್ಯ ಕೇಶವ ಮೊಲಿ ಸ್ಥಳಕ್ಕೆ ಭೇಟಿ ನೀಡಿದರು. ಗ್ರಾ.ಪಂ. ಸದಸ್ಯ ರತ್ನಾಕರ ಕೋಟ್ಯಾನ್, ಬಾಲ ಚಂದ್ರ ಎರ್ಮಾಳು ಸಹಿತ ಸ್ಥಳೀಯರು ಸೇರಿ ಮನೆ ಗೋಡೆಯ ಆಧಾರದಲ್ಲಿ ನಿಂತಿರುವ ಮರವನ್ನು ಸರಿಸಿ ಮನೆಯ ಇಟ್ಟಿಗೆ ಗೋಡೆಗೆ ಮಳೆಯಿಂದ ಹೆಚ್ಚಿನ ಹಾನಿಯಾಗದಂತೆ ಟಾರ್ಪಾಲನ್ನು ಹೊದೆಸಿದ್ದಾರೆ.
ಘಟನೆ ಸಂಭವಿಸಿದಾಗ ಮಕ್ಕಳೊಂದಿಗೆ ಲತಾ ಅವರು ಕೋಣೆಯಲ್ಲಿ ಮಲಗಿದ್ದರು. ಅಪಾಯ ವನ್ನು ಗಮನಿಸಿ, ಮಕ್ಕಳಾದ ಸಿಂಚನಾ (7) ಹಾಗೂ ನಿಶಾಂತ್ (11) ಅವರ ಮೇಲೆ ಹೆಂಚುಗಳು, ಮರದ ಪಕ್ಕಾಸು, ರೀಪುಗಳು ಬೀಳುವುದನ್ನು ತಪ್ಪಿಸಿ ಮಕ್ಕಳನ್ನು ರಕ್ಷಿಸಲು ಅವರ ಮೇಲೆ ಅಂಗಾತ ಮಲಗಿದ್ದ ಲತಾ ಪೂಜಾರ್ತಿ (32) ಅವರ ತಲೆಗೆ ತೀವ್ರ ಸ್ವರೂಪದ ಗಾಯ ಗಳಾಗಿವೆ. ಸಿಂಚನಾಳ ಬಲಗಾಲ ಮೂಳೆ ಮುರಿತ ವಾಗಿದ್ದು ನಿಶಾಂತ್ ಸಣ್ಣಪುಟ್ಟ ಗಾಯಗಳಿಂದ ಪಾರಾಗಿದ್ದಾನೆ.